ಈ ರಾಜ್ಯದ ಮುಖ್ಯಮಂತ್ರಿಗಿಂತ ಅವರ 2 ವರ್ಷದ ಮೊಮ್ಮಗನೇ ಶ್ರೀಮಂತ !

Update: 2017-12-11 06:21 GMT
ಚಂದ್ರಬಾಬು ನಾಯ್ಡು

ಹೈದರಾಬಾದ್,ಡಿ.11 : ಆಂಧ್ರ ಪ್ರದೇಶದ ಐಟಿ ಸಚಿವ ಹಾಗೂ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ನಾರ ಲೋಕೇಶ್  ಅವರು ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ.  ಇದು ತೆಲುಗು ದೇಶಂ ಅಧ್ಯಕ್ಷರ ಕುಟುಂಬ ತನ್ನ ಆಸ್ತಿ ಘೋಷಣೆ ಮಾಡಿರುವುದು ಏಳನೇ ಬಾರಿಯಾಗಿದೆ..

ಟಿಡಿಪಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಲೋಕೇಶ್  ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಅವರ ಕುಟುಂಬದಲ್ಲಿ ಮುಖ್ಯಮಂತ್ರಿ ನಾಯ್ಡು ಅವರೇ ಅತ್ಯಂತ ಬಡವರಾಗಿದ್ದು, ಅವರ ಒಟ್ಟು ಸಂಪತ್ತಿನ ಮೌಲ್ಯ ಕೇವಲ ರೂ 2.53 ಕೊಟಿ ಅಗಿದೆ. ಅವರ ಪತ್ನಿ ನಾರ ಭುವನೇಶ್ವರಿ ಬಳಿ ರೂ 25.41 ಕೋಟಿ ಮೌಲ್ಯದ ಸಂಪತ್ತಿದೆ.

ನಾಯ್ಡು ಅವರ ಮೊಮ್ಮಗ ನಾರ ದೇವಾಂಶ್ ಸಂಪತ್ತಿನ ಮೌಲ್ಯ ರೂ. 11.54 ಕೋಟಿ ಆಗಿದೆ. ಲೋಕೇಶ್ ಅವರು ನೀಡಿದ ಮಾಹಿತಿಯಂತೆ ಮುಖ್ಯಮಂತ್ರಿ ನಾಯ್ಡು ಅವರ ಬಾಧ್ಯತೆಗಳು ಅವರ ಸಂಪತ್ತಿಗಿಂತ ರೂ. 3.58 ಕೋಟಿಯಷ್ಟು ಅಧಿಕವಾಗಿದೆ. ಕಳೆದ ವರ್ಷ ನಾಯ್ಡು ಬಳಿ ರೂ. 3.73 ಕೋಟಿ ಘೋಷಿತ ಸಂಪತ್ತಿದ್ದರೆ ಅವರ ಬಾಧ್ಯತೆಗಳು ರೂ.3.06 ಕೋಟಿಯಷ್ಟಿತ್ತು.

ಲೋಕೇಶ್ ಅವರು ಹೊಂದಿದ ಸಂಪತ್ತಿನ ಮೌಲ್ಯ ರೂ. 15.21 ಕೋಟಿಯಷ್ಟಿದ್ದರೆ ಅವರ ಪತ್ನಿ ಬ್ರಹ್ಮಣಿ ಅವರ ಬಳಿ ರೂ. 15.01 ಕೋಟಿ ಮೌಲ್ಯದ ಸಂಪತ್ತಿದೆ.

ತಮ್ಮ ಕುಟುಂಬ ಹೊಂದಿದ ಸಂಪತ್ತಿನ ಕುರಿತಾಗ ವಿಪಕ್ಷಗಳು ಮಾಡುತ್ತಿರುವ ಟೀಕೆಗಳ ಬಗ್ಗೆ ಉಲ್ಲೇಖಿಸಿದ ಲೋಕೇಶ್ ``ಪ್ರಜಾತಂತ್ರದಲ್ಲಿ ಟೀಕೆ ನಡಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಟೀಕಿಸುವವರು ತಮ್ಮ ಸಂಪತ್ತನ್ನು ಘೋಷಿಸಿ ನಂತರ ಆರೋಪ ಹೊರಿಸಬೇಕು,'' ಎಂದಿದ್ದಾರೆ. ಡೈರಿ ಉತ್ಪನ್ನಗಳ ಕಂಪೆನಿ ಹೆರಿಟೇಜ್ ಗ್ರೂಪ್ ನಿಂದ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದಾಯ ದೊರಕುತ್ತಿದ್ದು, ಕುಟುಂಬ ಈ ಕಂಪೆನಿಯ ಶೇ 50ರಿಂದ 60ರಷ್ಟು ಶೇರುಗಳನ್ನು ಹೊಂದಿದೆ. ಹಿಂದಿನ ವೈಎಸ್‍ಆರ್ ಸರಕಾರ ತಮ್ಮ ಕಂಪೆನಿಯ ವಿರುದ್ಧ ಅವ್ಯವಹಾರ ಆರೋಪ ಹೊರಿಸಿ 20 ಪ್ರಕರಣ ದಾಖಲಿಸಿದ್ದರೂ ಯಾವುದೇ ಆಧಾರವಿರದೇ ಇದ್ದುದರಿಂದ ಪ್ರಕರಣ ಹಿಂದಕ್ಕೆ ಪಡೆಯಬೇಕಾಗಿತ್ತು ಎಂದು ಲೋಕೇಶ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News