ಬಾಲಿವುಡ್ ಯುವ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿ ಅಮಾಯಕನೇ ?

Update: 2017-12-11 12:14 GMT
ಸಾಂದರ್ಭಿಕ ಚಿತ್ರ

ಮುಂಬೈ,ಡಿ.11: ಮುಂಬೈಯತ್ತ ತೆರಳುತ್ತಿದ್ದ ವಿಮಾನವೊಂದರಲ್ಲಿ ಬಾಲಿವುಡ್ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ  39 ವರ್ಷದ ವಿಕಾಸ್ ಸಚದೇವ್ ಎಂಬಾತ ತಾನು ನಟಿಯನ್ನು ಉದ್ದೇಶಪೂರ್ವಕವಾಗಿ ಮುಟ್ಟಿಲ್ಲ. ಆದರೂ ಕ್ಷಮೆಯಾಚಿಸಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಸೋದರ ಮಾವನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮುಂಬೈಗೆ ಹಿಂದಿರುಗುತ್ತಿದ್ದ ತಾನು ಬಹಳ ಸುಸ್ತಾಗಿದ್ದೆ ಹಾಗೂ ವಿಮಾನ ಪರಿಚಾರಿಕೆಯರಿಗೆ ತನ್ನನ್ನು ಡಿಸ್ಟರ್ಬ್ ಮಾಡದಂತೆಯೂ ಹೇಳಿದ್ದಾಗಿ ತಿಳಿಸಿದ್ದಾರೆ. ವಿಸ್ತಾರ ಏರ್ ಲೈನ್ಸ್ ಕೂಡ ತನ್ನ ಹೇಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ.

ತನ್ನ ಕಾಲು ಆಕೆಯ ಭುಜಕ್ಕೆ ತಾಗಿದ್ದರಿಂದ ಕ್ಷಮೆ ಕೇಳಿದೆ ಹಾಗೂ ಇದು ಉದ್ದೇಶಪೂರ್ವಕ ಕೃತ್ಯವಾಗಿರಲಿಲ್ಲ ಎಂದೂ ಹೇಳಿದ್ದಾರೆ. ಅವರ ಪತ್ನಿ ದಿವ್ಯಾ ಸಚದೇವ್ ಕೂಡ ಪತಿಯ ಬೆಂಬಲಕ್ಕೆ ನಿಂತಿದ್ದು, ಆತ ನಿರಪರಾಧಿ ಹಾಗೂ ತನ್ನ ಮಾವನ ನಿಧನದಿಂದ ಚಿಂತೆಗೀಡಾಗಿದ್ದರು ಎಂದು ಹೇಳಿದ್ದಾರೆ.

ತನ್ನ ಪತಿ ಈ ಹಿಂದೆ ಇಂತಹ ವರ್ತನೆ ತೋರಿದ ಯಾವುದೇ ಘಟನೆ ಕೂಡ ನಡೆದಿಲ್ಲ ಎಂದು ಆಕೆ ಹೇಳಿದ್ದಾರಲ್ಲದೆ ನಟಿ ಸುಳ್ಳು ಆರೋಪ ಹೊರಿಸಿದ್ದಾಗಿಯೂ ಆಪಾದಿಸಿದ್ದಾರೆ. "ನಮ್ಮದು ಪ್ರೇಮ ವಿವಾಹ, ನಾವು 16 ವರ್ಷದಿಂದ ಜತೆಗಿದ್ದೇವೆ'' ಎಂದೂ ಆಕೆ ಹೇಳಿದ್ದಾರೆ.

ನಟಿ ಅಪ್ರಾಪ್ತೆಯಾಗಿರುವುದರಿಂದ ಪೊಕ್ಸೊ ಕಾಯ್ದೆಯಡಿ ಹಾಗೂ ಸೆಕ್ಷನ್ 354 ಅನ್ವಯ ವಿಕಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News