ಮಾನವ ಹಕ್ಕು ಆಯೋಗದ ಅಧ್ಯಕ್ಷರ ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ

Update: 2017-12-11 12:50 GMT

ಬೆಂಗಳೂರು, ಡಿ.11: ಭರ್ತಿ ಮಾಡದೆ ಖಾಲಿ ಉಳಿಸಿಕೊಂಡಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಹುದ್ದೆ ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಮಾನವ ಹಕ್ಕು ಹೋರಾಟಗಾರರು ಆಯೋಗದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಹಾಗೂ ಹೋರಾಟಗಾರ ಟಿ.ನರಸಿಂಹಮೂರ್ತಿ, ಮಾನವ ಹಕ್ಕು ಆಯೋಗದ ಅಧ್ಯಕ್ಷರ ಹುದ್ದೆ ಖಾಲಿಯಾಗಿ ಮೂರು ವರ್ಷ ಕಳೆದಿದೆ. ಆದರೆ, ಇದುವರೆಗೂ ಅಧ್ಯಕ್ಷರ ನೇಮಕ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಇಲ್ಲಿ ಅಧ್ಯಕ್ಷರಿಲ್ಲ ಎಂದು ತಿಳಿದೂ ಕಂಡೂ ಕಾಣದಂತೆ ವೌನವಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಯೋಗದ ಅಧ್ಯಕ್ಷರ ನೇಮಕ ಸಂಬಂಧ ನಾಲ್ಕೈದು ಬಾರಿ ಪತ್ರ ಬರೆಯಲಾಗಿದೆ. ಅಧ್ಯಕ್ಷ ಸ್ಥಾನ ಖಾಲಿ ಇರುವುದರಿಂದ ದೂರು ನೀಡಲು ಅಲ್ಲಿಗೆ ಹೋಗುವ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ಇತ್ತೀಚಿಗೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಧ್ಯಕ್ಷರ ಅಧಿಕಾರ ಅವಧಿ ಪೂರ್ಣಗೊಂಡಿದೆ. ಮತ್ತೊಂದು ಕಡೆ, ಅಗತ್ಯವಿರುವಷ್ಟು ಸದಸ್ಯರನ್ನೂ ಆಯೋಗ ಹೊಂದಿಲ್ಲ. ಉಳಿದುಕೊಂಡಿದ್ದ ಸದಸ್ಯರು ಇತ್ತೀಚಿಗೆ ತಮ್ಮ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ಆಯೋಗದ ವೆಬ್‌ಸೈಟ್‌ನಲ್ಲಿ ಅಗತ್ಯ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ, ಕೂಡಲೇ ಸರಕಾರ ಗಂಭೀರವಾಗಿ ಇದನ್ನು ಪರಿಗಣಿಸಬೇಕು. ಅರ್ಹರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶೀಘ್ರ ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News