ರವಿಬೆಳಗೆರೆ ಕನ್ನಡದ ‘ಸನ್ನಿ ಲಿಯೋನ್’ : ಅಗ್ನಿಶ್ರೀಧರ್

Update: 2017-12-11 13:19 GMT

ಬೆಂಗಳೂರು, ಡಿ.11: ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧನವಾಗಿರುವ ‘ಹಾಯ್ ಬೆಂಗಳೂರು’ ಸಂಸ್ಥಾಪಕ ರವಿ ಬೆಳಗೆರೆ ಕನ್ನಡಕ್ಕೆ ಬಾಲಿವುಡ್ ಚಿತ್ರನಟಿ ‘ಸನ್ನಿ ಲಿಯೋನ್’ ಇದ್ದಂತೆ ಎಂದು ಅಗ್ನಿ ಪತ್ರಿಕೆ ಸಂಪಾದಕ ಅಗ್ನಿ ಶ್ರೀಧರ್ ಟೀಕಿಸಿದರು.

ಸೋಮವಾರ ನಗರದ ಇಸ್ರೋ ಲೇಔಟ್‌ನಲ್ಲಿರುವ ಅಗ್ನಿ ವಾರಪತ್ರಿಕೆ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನರಿಗೆ ಕಾಮ(ಸೆಕ್ಸ್) ಮತ್ತು ಅಪರಾಧ ವಿಷಯಗಳೆಂದರೆ ಆಸಕ್ತಿ. ಇದನ್ನೆ ರವಿಬೆಳಗೆರೆ ಬಂಡವಾಳ ಮಾಡಿಕೊಂಡು, ಪತ್ರಿಕಾರಂಗವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೇವಲ ಲೈಂಗಿಕತೆ ಮತ್ತು ಹಿಂಸೆಯನ್ನು ಪತ್ರಿಕೆಯಿಂದ ಬಿಂಬಿಸುತ್ತಿದ್ದ. ಒಂದು ರೀತಿ ಆತ ಕನ್ನಡಕ್ಕೆ ಸನ್ನಿ ಲಿಯೋನ್ ಇದ್ದಂತೆಯೇ ಎಂದರು.

ರವಿಬೆಳಗೆರೆ ಅವರು ಅಪರಾಧ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಕೆಳಕ್ಕೆ ಬಿದ್ದವರಿಗೆ ಇನ್ನೊಂದು ಕಲ್ಲು ಹಾಕಬಾರದು. ಪರದೆಯ ಬದುಕು ನಮ್ಮದು, ಆದರೆ, ಬೆಳಗೆರೆ ಅವರು ತಮ್ಮ ಮೂಲ ಉದ್ದೇಶವನ್ನೇ ಮರೆತಿದ್ದಾರೆ ಎಂದ ಅವರು, ಇದೀಗ ಆಗಿರುವ ಕಲುಷಿತ ವಾತಾವರಣವನ್ನು ಬಿಟ್ಟು ರವಿಬೆಳಗೆರೆ ಬೇಗ ಹೊರಬರಲಿ ಎಂದು ನುಡಿದರು.

               (ರವಿ ಬೆಳಗೆರೆ)

ಎರಡು ವರ್ಷದ ಹಿಂದೆ ಆದ ಒಂದು ಪ್ರಕರಣದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ರವಿಬೆಳಗರೆ ಮಾತನಾಡಿದ್ದ. ಮಹಿಳೆಯರ ಬಗ್ಗೆ ಬೆಳಗೆರೆ ಬಳಸುವ ಪದ ಅತ್ಯಂತ ಕೀಳಾಗಿದ್ದು, ಇಷ್ಟೆಲ್ಲಾ ಆದ ಮೇಲಾದರೂ ಬದಲಾಗಲಿ ಅನ್ನೋದೆ ನನ್ನ ಆಶಯ ಎಂದು ಶ್ರೀಧರ್ ಹೇಳಿದರು.

ಮೊಬೈಲ್ ಕರೆ: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿಗೆ ಮಾತಿನ ಮೂಲಕ ಸಮಾಧಾನ ಮಾಡಬಹುದಿತ್ತು. ಆದರೆ, ಮೊಬೈಲ್ ಕರೆ ಮಾಡಿ ಮಾತನಾಡಿರುವುದು ಸರಿಯಲ್ಲ ಎಂದ ಅವರು, ಅಪರಾಧ ಮತ್ತು ಕೆಡಕು ಇವುಗಳ ನಡುವೆ ಬಹಳ ವ್ಯತ್ಯಾಸವಿದೆ. ಒಮ್ಮೆ ತಪ್ಪಿದರೆ ಮತ್ತೆ ಹೊಡಿರಿ ಅನ್ನೋದು ಅವನ ಮಾನಸಿಕ ಸ್ಥಿತಿ ಹೇಗಿದೆ ಅನ್ನೋದನ್ನು ಗಮನಿಸಬಹದು ಎಂದರು.

ರಸ್ತೆಗಳಲ್ಲಿ ಮಾರಕಾಸ್ತ್ರಗಳನ್ನು ಝಳಪಿಸಿದ ಕತೆಯನ್ನು ಕ್ರೈಂ ಡೈರಿ ಮತ್ತು ಭೀಮಾತೀರದಲ್ಲಿ ರವಿಬೆಳಗೆರೆ ತೋರಿಸಿದ್ದರು.ಇದೆಲ್ಲಾ ನೋಡಿದರೆ ನನಗೆ ನಗು ಬರುತ್ತೆ. ಅಲ್ಲದೆ, ನಾನು ಪತ್ರಿಕೆ ಆರಂಭಿಸುವ ಸಂದರ್ಭದಲ್ಲಿ ನನ್ನ ಕಾಲು ಎಳೆದಿದ್ದ. ನನ್ನ ಪತ್ರಿಕೆ ವಿರುದ್ಧ ಮಾತನಾಡಿ ಇದು ಪ್ರಗತಿಪರರ ಕರಪತ್ರ ಎಂದಿದ್ದ ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

ಸಾಹಿತ್ಯದ ಬಗ್ಗೆ ತಿಳಿದುಕೊಂಡಿದ್ದು ಒಂದುಕಡೆಯಾದರೆ, ಶಿಸ್ತಿಲ್ಲದ ಜೀವನವನ್ನು ಬೆಳಗೆರೆ ನಡೆಸುತ್ತಿದ್ದರು. ಒಂದೊಂದು ಕ್ಷಣಕ್ಕೂ ಒಂದೊಂದು ಮಾತನಾಡುತ್ತಾರೆ. ಬೆಳಗೆರೆ ಮಾತು ನನಗೆ ಅಸಹ್ಯ ಹುಟ್ಟಿಸುತ್ತದೆ. ಅಲ್ಲದೆ, ಈ ಸಂದರ್ಭದಲ್ಲಿ ನಾನು ಮಾತಾಡೋದು ಸರಿ ಅಲ್ಲ ಎಂದುಕೊಂಡಿದ್ದೇನೆ. ಆದರೆ, ಮಾತನಾಡುವಂತೆ ಸ್ನೇಹಿತರು ತುಂಬಾ ಒತ್ತಾಯ ಮಾಡಿದ್ದರು ಎಂದು ಅಗ್ನಿಶ್ರೀಧರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News