ಬೆಂಗಳೂರು : ಟ್ರಂಪ್ ಪ್ರತಿಕೃತಿ ದಹಿಸಿ ಆಕ್ರೋಶ

Update: 2017-12-11 13:29 GMT

ಬೆಂಗಳೂರು, ಡಿ. 11: ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಘೋಷಿಸಿರುವ ಅಮೆರಿಕ ನಿರ್ಧಾರವನ್ನು ಖಂಡಿಸಿ ಅಮೆರಿಕಾ ಸಾಮ್ರಾಜ್ಯಶಾಹಿ ಟ್ರಂಪ್‌ನ ಪ್ರತಿಕೃತಿ ದಹಿಸಿ ಎಸ್‌ಯುಸಿಐ ಕಾರ್ಯಕರ್ತರು ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ನ ಸಾಮ್ರಾಜ್ಯಶಾಹಿ ದಬ್ಬಾಳಿಕೆ ವಿರುದ್ಧ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಶಶಿಧರ್, ಅಮೆರಿಕ ಬೇರೆ ದೇಶಗಳ ಆಂತರಿಕ ವಿಷಯಗಳಲ್ಲಿ ತಲೆದೂರಿಸಿ ತನ್ನ ದುಸ್ಸಾಹಸ ಮೆರೆಯುತ್ತಿದೆ ಎಂದು ಟೀಕಿಸಿದರು.

ಲಿಬಿಯಾದಿಂದ ಆರಂಭವಾಗಿ, ಇರಾಕ್, ವಿಯೆಟ್ನಾಂ ಮತ್ತು ಈಗ ಪ್ಯಾಲೆಸ್ಟೈನ್ ಮೇಲೆ ಅಮೆರಿಕದ ಸಾಮ್ರಾಜ್ಯಶಾಹಿ ದಬ್ಬಾಳಿಕೆ ಮುಂದುವರೆಯುತ್ತಿದೆ. ಕೇಂದ್ರ ಸರಕಾರವು ಈ ಕ್ರಮವನ್ನು ಖಂಡಿಸಿ ಪ್ಯಾಲೆಸ್ಟೈನ್‌ನ ಶೋಷಿತ ಜನತೆಯ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಅವರು ಮನವಿ ಮಾಡಿದರು.

ಜಿಲ್ಲಾ ಸಮಿತಿ ಸದಸ್ಯ ಎನ್.ರವಿ ಮಾತನಾಡಿ, ಪ್ರಪಂಚದಾದ್ಯಂತ ಟ್ರಂಪ್‌ನ ನಿರ್ಧಾರದ ವಿರುದ್ಧ ಪ್ರತಿಭಟನೆಗಳು ಕೇಳಿಸುತ್ತಿದ್ದರೂ ಅದಕ್ಕೆ ಬೆಲೆ ಕೊಡದೆ ತನ್ನದೇ ನಿರ್ಧಾರವನ್ನು ಪ್ಯಾಲೆಸ್ಟೈನ್‌ನ ಮೇಲೆ ಹೇರುತ್ತಿರುವ ಧೋರಣೆಯನ್ನು ಉಗ್ರವಾಗಿ ಖಂಡಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News