ಕೆಪಿಸಿಸಿ ಕಚೇರಿ ಎದುರು ‘ಉದ್ಯೋಕ್ಕಾಗಿ ಯುವಜನರ ತಂಡ’ದ ಧರಣಿ

Update: 2017-12-11 13:31 GMT

ಬೆಂಗಳೂರು, ಡಿ.11: ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲವೆಂದು ಆರೋಪಿಸಿ ಉದ್ಯೋಗಕ್ಕಾಗಿ ಯುವಜನರ ತಂಡದ ಪದಾಧಿಕಾರಿಗಳು, ‘ಉದ್ಯೋಗ ಕೊಡಿ, ಮತ ಕೇಳಿ’ ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಯೋಗಕ್ಕಾಗಿ ಯುವಜನರ ತಂಡದ ಸಂಚಾಲಕ ಅರುಣ್‌ಕುಮಾರ್, ಪ್ರಸ್ತುತ ಸರಕಾರವು ರಾಜ್ಯದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಎಂಬ ಲೆಕ್ಕ ನೀಡಲಿ ಎಂದು ಆಗ್ರಹಿಸಿದರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಇತ್ತೀಚೆಗೆ 13.91 ಲಕ್ಷ ಉದ್ಯೋಗ ಸೃಷ್ಟಿ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ 50 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತ್ತು ಎಂದು ಅವರು ಹೇಳಿದರು.

ರಾಜ್ಯ ಸರಕಾರದ ಅಧಿಕಾರವಧಿ ಇನ್ನು ಕೇವಲ ಆರು ತಿಂಗಳು ಮಾತ್ರ ಇದೆ. ಇಷ್ಟು ಕಡಿಮೆ ಅವಧಿಯಲ್ಲಿ ಇನ್ನುಳಿದ 37 ಲಕ್ಷ ಉದ್ಯೋಗಗಳನ್ನು ಹೇಗೆ ಸೃಷ್ಟಿ ಮಾಡುತ್ತಾರೆ. ಕೇವಲ ಸುಳ್ಳು ಭರವಸೆಗಳನ್ನು ಯುವಕರಿಗೆ ನೀಡುತ್ತಿದ್ದಾರೆ ಎಂದು ಅರುಣ್‌ಕುಮಾರ್ ಆರೋಪಿಸಿದರು.

ಮುಂದಿನ ಚುನಾವಣಾ ಪ್ರಚಾರಕ್ಕಾಗಿ ‘ಮನೆ ಮನೆಗೆ ಕಾಂಗ್ರೆಸ್’ ಎಂದು ಹೊರಟ್ಟಿದ್ದಾರೆ. ರಾಜ್ಯದಲ್ಲಿ 18-35 ವಯೋಮಾನದ 2 ಕೋಟಿ ಉದ್ಯೋಗಾಕಾಂಕ್ಷಿ ಯುವಕರಿದ್ದಾರೆ. ನಮಗೆ ಉದ್ಯೋಗ ನೀಡಿ, ಮತ ಕೇಳಿ. ಉದ್ಯೋಗ ಇಲ್ಲದಿದ್ದರೆ ಮತ ಇಲ್ಲ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರತಿವರ್ಷ ಸರಾಸರಿ 8-9 ಲಕ್ಷ ಉದ್ಯೋಗಾಕಾಂಕ್ಷಿಗಳು ವಿವಿಧ ಪರೀಕ್ಷೆಗಳನ್ನು ಬರೆದು ಹೊರ ಬರುತ್ತಿದ್ದಾರೆ. ಆದರೆ, ಉದ್ಯೋಗಗಳು ಮಾತ್ರ ಸಿಗುತ್ತಿಲ್ಲ. ಇರುವ ಉದ್ಯೋಗಗಳಿಗೆ ಭದ್ರತೆಯಿಲ್ಲದೆ, ಕಡಿತವಾಗುತ್ತಿವೆ. ಆದುದರಿಂದ, ಉದ್ಯೋಗಕ್ಕಾಗಿ ಯುವಜನರ ತಂಡವು ಈ ಆಂದೋಲನ ಹಮ್ಮಿಕೊಂಡಿದೆ ಎಂದು ಅರುಣ್‌ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News