ನಿರ್ಮಾಣ ಸಲಕರಣೆಗಳ ವಸ್ತು ಪ್ರದರ್ಶನಕ್ಕೆ ಕೇಂದ್ರ ಸಚಿವರಿಂದ ನಾಳೆ ಚಾಲನೆ

Update: 2017-12-11 13:33 GMT

ಬೆಂಗಳೂರು, ಡಿ. 11: ದಕ್ಷಿಣ ಏಷ್ಯಾದ ನಿರ್ಮಾಣ ಸಲಕರಣೆಗಳ ಅತಿದೊಡ್ಡ ವಸ್ತು ಪ್ರದರ್ಶನವನ್ನು ಡಿ.12ರಿಂದ ಡಿ.16ರ ವರೆಗೆ ಇಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರನಲ್ಲಿ ಏರ್ಪಡಿಸಲಾಗಿದೆ ಎಂದು ಭಾರತೀಯ ಉದ್ಯಮದ ಸಂಘಟನೆ(ಸಿಐಐ) ತಿಳಿಸಿದೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಐ ಎಕ್ಸ್‌ಕಾನ್ ಅಧ್ಯಕ್ಷ ವಿಪಿನ್ ಸೋಧಿ, ಐದು ದಿನಗಳ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ 925 ಪ್ರದರ್ಶಕರು ಮತ್ತು 275 ವಿದೇಶಿ ಕಂಪೆನಿಗಳು ಭಾಗವಹಿಸಲಿದ್ದು, ದೇಶ-ವಿದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಕೇಂದ್ರ ಭಾರೀ ಉದ್ಯಮ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಸಚಿವ ಅನಂತ್ ಜಿ ಗೀತೆ ಉದ್ಘಾಟಿಸಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮತ್ತು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

2015ಕ್ಕೆ ಹೋಲಿಸಿದರೆ ‘ಎಕ್ಸ್‌ಕಾನ್-2017’ ಪ್ರದರ್ಶಕರ ಸಂಖ್ಯೆಯಲ್ಲಿ ಶೇ.16ರಷ್ಟು ಬೆಳವಣಿಗೆ ಕಂಡಿದೆ. 20ಕ್ಕೂ ಹೆಚ್ಚು ದೇಶಗಳಿಂದ ಭಾಗವಹಿಸುತ್ತಿರುವುದು ಈ ಆವೃತ್ತಿಯ ವಿಶೇಷ. ಜರ್ಮನಿ, ಇಟಲಿ, ಚೀನಾ, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ಪ್ರಮುಖ ಆರ್ಥಿಕತೆಯ ದೇಶಗಳೂ ಇದರಲ್ಲಿ ಭಾಗವಹಿಸಲಿವೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News