ಪೆಟ್ರೊಲಿಯಂ ತುಂಬಿದ ಹಡಗು ಮಾರಿಷಸ್‌ಗೆ ತೆರಳಲು ಹೈಕೋರ್ಟ್‌ನಿಂದ ಹಸಿರು ನಿಶಾನೆ

Update: 2017-12-11 17:10 GMT

ಬೆಂಗಳೂರು, ಡಿ.11: ವ್ಯಾಜ್ಯವೊಂದರಲ್ಲಿ ಜಪ್ತಿಯಾಗಿ ಮಂಗಳೂರು ಬಂದರಿನಲ್ಲಿ ನಿಂತಿರುವ 40 ಸಾವಿರ ಟನ್ ಪೆಟ್ರೊಲಿಯಂ ಹೊಂದಿದ ಹಡಗು ಮಾರಿಷಸ್‌ಗೆ ತೆರಳಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಈ ಕುರಿತಂತೆ ಮಾರಿಷಸ್‌ನ ಬೆಟಾಮಿಕ್ಸ್ ಲಿಮಿಟೆಡ್ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ಪ್ರತಿವರ್ಷ ಭಾರತದ ಮೂಲಕ ಮಾರಿಷಸ್‌ಗೆ 11,50,000 ಟನ್ ಪೆಟ್ರೊಲಿಯಂ ರಫ್ತು ಮಾಡಬೇಕಿದೆ. ಮೂರು ವರ್ಷಗಳ ಕಾಲದ ಈ ಪೂರೈಕೆಗೆ 2016ರಲ್ಲಿ ಒಪ್ಪಂದವಾಗಿದೆ. ಆದರೆ, ಸದ್ಯ ಪೆಟ್ರೊಲಿಯಂ ಪೂರೈಕೆ ಸ್ಥಗಿತಗೊಂಡಿರುವುದರಿಂದ ಮಾರಿಷಸ್‌ನಲ್ಲಿ ತೀವ್ರ ತೊಂದರೆ ಉಂಟಾಗಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಮಾರಿಷಸ್ ಮತ್ತು ಭಾರತ ಸರಕಾರದ ನಡುವಿನ ಉತ್ತಮ ರಾಜತಾಂತ್ರಿಕ ಸಂಬಂಧವಿದ್ದು, ಮಾರಿಷಸ್‌ಗೆ ಸಾಗಿಸಬೇಕಾದ 40 ಸಾವಿರ ಟನ್ ಪೆಟ್ರೊಲಿಯಂ ಹೊಂದಿದ ಹಡಗು ಮಂಗಳೂರು ಬಂದರಿನಲ್ಲಿ ನಿಂತಿದೆ. ಆ ಹಡಗು ಕೂಡಲೇ ಅಲ್ಲಿಂದ ತೆರಳಲು ಆದೇಶಿಸಬೇಕು ಎಂದು ಕೋರಿದರು.

ಈ ಕುರಿತಂತೆ ಕೇಂದ್ರ ವಿದೇಶಾಂಗ ಸಚಿವಾಲಯದ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ತೈಲಭರಿತ ಹಡಗು ರವಾನೆಗೆ ಅಸ್ತು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News