ಹೊನ್ನಾವರ ಗಲಭೆಗೆ ಬಿಜೆಪಿ ನಾಯಕರೇ ಕಾರಣ: ರಾಮಲಿಂಗಾರೆಡ್ಡಿ

Update: 2017-12-12 13:53 GMT

ಬೆಂಗಳೂರು, ಡಿ.12: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಗಲಭೆಗೆ ರಾಜ್ಯದ ಐದಾರು ಬಿಜೆಪಿ ನಾಯಕರೆ ಕಾರಣ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಮಂಗಳವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕೆ ಹೊರತು, ಅಧಿಕಾರಕ್ಕಾಗಿ ವಾಮಮಾರ್ಗ ಅನುಸರಿಸುವುದು ಸರಿಯಲ್ಲ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಸೂಚನೆ ಮೇರೆಗೆ ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿರುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿರುವುದು, ಬಿಜೆಪಿ ಕಾರ್ಯಕರ್ತರಿಗೆ ಸುಳ್ಳು ಹೇಳುವ ಬಗ್ಗೆ ಈಶ್ವರಪ್ಪ ತರಬೇತಿ ನೀಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಯಾವುದೇ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬರಲು ಕನಿಷ್ಟ 15 ದಿನಗಳು ಬೇಕು. ಪರೇಶ್ ಸಾವಿನ ಕುರಿತು ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ಮಣಿಪಾಲದ ಕಸ್ತೂರ್‌ಬಾ ವೈದ್ಯಕೀಯ ಕಾಲೇಜಿನ ಫಾರೆನ್ಸಿಕ್ ಮೆಡಿಸನ್ ವಿಭಾಗದ ವೈದ್ಯರಿಂದ ಪರೇಶ್ ಮೃತದೇಹಕ್ಕೆ ಸಂಬಂಧಿಸಿದ 19 ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

 ಪರೇಶ್ ಮೃತದೇಹದ ಮೇಲೆ ಯಾವುದೇ ರೀತಿಯ ಆಯುಧಗಳಿಂದ ಹಲ್ಲೆ ಮಾಡಿದ ಗಾಯಗಳಿಲ್ಲ, ಆತನ ಕೈ ಮೇಲೆ ಇದ್ದ ಅಚ್ಚೆಯನ್ನು ಹಾಳು ಮಾಡಲಾಗಿಲ್ಲ. ಮೃತದೇಹ ಪರಿಶೀಲನೆ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಜೆಪಿ ನಾಯಕರೆಲ್ಲ ಎಂಬಿಬಿಎಸ್ ಹಾಗೂ ಎಂಡಿ ಮಾಡಿದ್ದಾರೆ. ಮೃತದೇಹವನ್ನು ನೋಡಿದ ಕೂಡಲೆ ಸಾವು ಹೇಗೆ ಸಂಭವಿಸಿದೆ, ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿ ಬಿಡುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಪರೇಶ್ ಕೈ ಮೇಲೆ ಬಿಸಿ ಎಣ್ಣೆಯನ್ನು ಹಾಕಿ ಅಚ್ಚೆಯನ್ನು ನಾಶ ಪಡಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.

ಹೊನ್ನಾವರ ಗಲಭೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರು ಯಾರೇ ಆದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ, ಶಾಂತಿಯುತ ವಾತಾವರಣ ಕದಡುವ ಪ್ರಯತ್ನ ಯಾರೂ ಮಾಡಬಾರದು, ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅದು ಕೊಲೆಯೋ, ಸಹಜ ಸಾವೋ ಎಂಬುದು ತಿಳಿಯಲಿದೆ. ಅಲ್ಲಿಯವರೆಗೆ ಬಿಜೆಪಿಯವರು ಸುಮ್ಮನಿರಬೇಕು ಎಂದು ಅವರು ಹೇಳಿದರು.

ಕುಮಟಾದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ 3-4 ಸಾವಿರ ಜನ ಸೇರಿ ಪ್ರತಿಭಟನೆಗೆ ಮುಂದಾಗುತ್ತಾರೆ. ಕೆಲವೇ ಕೆಲವು ಅಂಗಡಿಗಳನ್ನು ಗುರಿಯನ್ನಾಗಿಸಿಕೊಂಡು ಕಲ್ಲು ತೂರಾಟ ನಡೆಸಲಾಗುತ್ತಿದೆ. ಬೇರೆ ಕಡೆಯಿಂದ ಜನರನ್ನು ಕರೆಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದರ ಹಿಂದಿನ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು. ಚುನಾವಣೆ ಸಮೀಪಿಸುತ್ತಿರುವುದರಿಂದ ಈ ರೀತಿಯಾಗಿ ಬಿಜೆಪಿಯವರು ವರ್ತಿಸುತ್ತಿದ್ದಾರೆ. ಈ ಹಿಂದೆ ತೀರ್ಥಹಳ್ಳಿಯ ನಂದಿತಾ ಸಾವು, ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವು ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು. ಸರಕಾರದ ವಿರುದ್ಧ ಯಾವ ಆರೋಪವು ಸಾಬೀತಾಗಿಲ್ಲ. ಸತ್ಯಾಂಶ ಹೊರ ಬಂತು ಎಂದು ಅವರು ಹೇಳಿದರು.

ಬಿಜೆಪಿಯವರು ಮಾತ್ರ ಹಿಂದೂಗಳಾ, ನಾವೆಲ್ಲಾ ಹಿಂದೂಗಳಲ್ಲವೇ, ಯಾರು ಸತ್ತರೂ ಅದು ದುರ್ದೈವ. ಆದರೆ, ಒಂದು ಸಾವನ್ನು ಧರ್ಮದ ದೃಷ್ಟಿಕೋನದಲ್ಲಿ ನೋಡುವುದು ಸರಿಯಲ್ಲ. ಬೇಕಾದರೆ, ಹತ್ಯೆಯಾದವರನ್ನು ಬಿಜೆಪಿ ಕಾರ್ಯಕರ್ತರು, ಶ್ರೀರಾಮ ಸೇನೆ ಕಾರ್ಯಕರ್ತ ಎಂದು ಹೇಳಿಕೊಳ್ಳಲಿ.

-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News