ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನ

Update: 2017-12-12 14:02 GMT

ಬೆಂಗಳೂರು, ಡಿ. 12: ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾ.ಎ. ಜೆ.ಸದಾಶಿವ ಆಯೋಗದ ವರದಿ ಅಂಗೀಕಾರದ ಬಗ್ಗೆ ಪರಿಶಿಷ್ಟ ಜಾತಿಯ ಶಾಸಕರು, ಸಂಸದರು ಸಭೆಯನ್ನು ಡಿ.30ರಂದು ಕರೆದು ಎಲ್ಲರನ್ನು ವಿಶ್ವಾಸಕ್ಕೆ ಪಡೆದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಂಗಳವಾರ ಸಿಎಂ ಗೃಹ ಕೃಷ್ಣಾದಲ್ಲಿ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಮಠದ ಮಾದಾರ ಚೆನ್ನಯ್ಯ ಸ್ವಾಮಿ, ಸಂಸದರಾದ ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ಸಚಿವರಾದ ಆಂಜನೇಯ, ಆರ್.ಬಿ.ತಿಮ್ಮಾಪುರ ಸೇರಿದಂತೆ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದ ನಿಯೋಗಕ್ಕೆ ಸಿಎಂ ಆಶ್ವಾಸನೆ ನೀಡಿದ್ದಾರೆಂದು ಗೊತ್ತಾಗಿದೆ. ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮಾದಿಗ, ಛಲವಾದಿ, ಭೋವಿ, ಲಂಬಾಣಿ, ಕೊರಚ-ಕೊರಮ ಸೇರಿದಂತೆ ಎಲ್ಲ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಾಶಿವ ಆಯೋಗದ ವರದಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆಂದು ಮುಖಂಡರು ಹೇಳಿದ್ದಾರೆ.

ಎಲ್ಲ ಮುಖಂಡರ ಸಭೆಯ ಬಳಿಕ ಸದಾಶಿವ ಆಯೋಗದ ವರದಿ ಅನುಷ್ಠಾನ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಸರಕಾರ ತೀರ್ಮಾನಿಸಲಿದೆ. ಹೀಗಾಗಿ ಮಾದಿಗ ಸಮುದಾಯ ಕೈಗೊಂಡಿರುವ ಚಳವಳಿಯನ್ನು ಕೈಬಿಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು ಎಂದು ತಿಳಿಸಲಾಗಿದೆ. ಮಾದಿಗ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಮಾತಂಗ ಋಷಿಯ ಜನ್ಮದಿನವನ್ನು ಸರಕಾರ ಆಚರಿಸಬೇಕು. ಮಾದಾರ ಚೆನ್ನಯ್ಯರ ಅಧ್ಯಯನ ಪೀಠ ಸ್ಥಾಪಿಸುವ ಸಂಬಂಧ ಸರಕಾರ ಗಂಭೀರ ಚಿಂತನೆ ನಡೆಸಲಿದೆ ಎಂದು ಸಿಎಂ ತಿಳಿಸಿದ್ದಾರೆಂದು ಮುಖಂಡರು ಹೇಳಿದ್ದಾರೆ.

ನಿಯೋಗದಲ್ಲಿ ನಿವೃತ್ತ ಅಧಿಕಾರಿಗಳಾದ ಗೋನಾಳ್ ಭೀಮಪ್ಪ, ಬಾಬುರಾವ್ ಮುಡಬಿ, ಸಾಹಿತಿ ಎಲ್.ಹನುಮಂತಯ್ಯ, ಬಿಎಸ್ಪಿ ಮುಖಂಡ ಮಾರಸಂದ್ರ ಮುನಿಯಪ್ಪ, ಲೋಕೇಶ್, ಮುತ್ತುರಾಜ್, ಸಿದ್ದರಾಜು, ಎನ್.ಮೂರ್ತಿ, ಸಿದ್ದರಾಜು, ಅಂಬಣ್ಣ ಆರೋಲಿ, ಅಜಿತ್ ಮಾದರ, ರಂಗನಾಥ್ ಸೇರಿ ಇನ್ನಿತರ ಮುಖಂಡರು ಇದ್ದರು.

‘ಮಾದಿಗ ಸಮುದಾಯದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನ ಸಂಬಂಧ ಭರವಸೆ ನೀಡಿದ್ದಾರೆ. ಹೀಗಾಗಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಕೈಗೊಂಡಿದ್ದ ಹೋರಾಟವನ್ನು ಹಿಂಪಡೆಯಲಾಗಿದೆ’

-ಮುತ್ತುರಾಜ್ ಒಕ್ಕೂಟದ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News