ಭಾವಸಾರ ಕ್ಷತ್ರಿಯ ಸಮುದಾಯದ ಸಮಾವೇಶ

Update: 2017-12-12 14:12 GMT

ಬೆಂಗಳೂರು, ಡಿ.12: ಹಿಂದುಳಿದ ಭಾವಸಾರ ಕ್ಷತ್ರಿಯ ಸಮುದಾಯಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಡಿ.16 ರಿಂದ ಎರಡು ದಿನಗಳ ಕಾಲ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ತಿಳಿಸಿದೆ.

ಮಂಗಳವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಎಸ್.ಸುಧೀರ್, ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

 ರಾಜ್ಯ ಸರಕಾರದಿಂದ ಸಿಗಬೇಕಾದ ಸವಲತ್ತುಗಳಿಂದ ಭಾವಸಾರ ಸಮುದಾಯ ವಂಚಿತವಾಗಿದ್ದು, ಸರಕಾರ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದ ಅವರು, ಭಾವಸಾರ ಕ್ಷತ್ರಿಯ ಸಮುದಾಯ ದರ್ಜಿ ವೃತ್ತಿಯಲ್ಲಿ ತೊಡಗಿದ್ದು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟೈಲರಿಂಗ್ ಫೆಡರೇಷನ್ ಸ್ಥಾಪಿಸಲಾಗಿತ್ತು ಎಂದು ಹೇಳಿದರು.

ನಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸೌಲಭ್ಯಕ್ಕಾಗಿ ಕಲ್ಪಿಸಬೇಕೆನ್ನುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಲು ನಿರ್ಧರಿಸಿದ್ದು, ಸಮುದಾಯದ ಅಭ್ಯುದಯಕ್ಕಾಗಿ ಭಾವಸಾರ ಕ್ಷತ್ರಿಯ ನಿಗಮ ಸ್ಥಾಪಿಸಿ ಪ್ರತ್ಯೇಕ ನಿಧಿ ಮೀಸಲಿಡಬೇಕು. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಕ್ಕೆ ಸೂಕ್ತ ರೀತಿಯಲ್ಲಿ ಸರಕಾರಿ ಸೌಲಭ್ಯ ಒದಗಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.

ರಾಜ್ಯದ ಯಾವುದೇ ನಿಗಮ ಮತ್ತು ಮಂಡಳಿಗಳಲ್ಲಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿ ನೇಮಕಾತಿ ಮಾಡಲು ಮುಂದಾಗಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಾಂಗದ ಅರ್ಹ ಆಕಾಂಕ್ಷಿಗಳಿಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು. ವಿಧಾನಪರಿಷತ್ತಿಗೆ ಸಮುದಾಯದ ಮುಖಂಡರನ್ನು ನಾಮನಿರ್ದೇಶನ ಮಾಡಬೇಕೆಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಧಿವೇಶನದ ಮಂಥನ ರಾಜ್ಯಾಧ್ಯಕ್ಷ ರಮೇಶ್ ತಾಪ್ಸೆ, ಮಹಿಳಾ ಘಟಕದ ಅಧ್ಯಕ್ಷೆ ಮೀನಾ ಬೊಂಗಾಲೆ, ಯುವ ಪರಿಷತ್ ಅಧ್ಯಕ್ಷೆ ವೀಣಾ ಅರುಣ್ ಮಾಳದ್ಕರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News