ಜೀವಕ್ಕೆ ಕುತ್ತಾದ ಸ್ಟಂಟ್: 62 ಮಹಡಿಯ ಕಟ್ಟಡದಿಂದ ಬಿದ್ದು ಮೃತಪಟ್ಟ ಪ್ರಸಿದ್ಧ ಸಾಹಸಿ

Update: 2017-12-12 15:03 GMT

ಚೀನಾ, ಡಿ.12: ಎದೆನಡುಗಿಸುವ ಸಾಹಸಗಳನ್ನು ಪ್ರದರ್ಶಿಸಿ ಪ್ರಸಿದ್ಧರಾಗಿದ್ದ ಚೀನಾದ ಸಾಹಸಿಯೊಬ್ಬರು 62 ಮಹಡಿಯ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತನ್ನ ಹೊಸ ಸಾಹಸ ಪ್ರದರ್ಶನದ ವೇಳೆ ಇವರು ಮೃತಪಟ್ಟಿದ್ದಾರೆ.

26 ವರ್ಷದ ವು ಯೋಂಗ್ನಿಂಗ್ ಅವರಿಗೆ ಚೀನಾದ ಸಾಮಾಜಿಕ ಜಾಲತಾಣವಾದ ವೀಬೋದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಯಾವುದೇ ಸುರಕ್ಷತಾ ನೆಟ್ ಗಳನ್ನು ಬಳಸದೆ ಅವರು ಪ್ರದರ್ಶಿಸುತ್ತಿದ್ದ ಸಾಹಸಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹುನಾನ್ ಪ್ರಾಂತ್ಯದಲ್ಲಿರುವ ಚಾಂಗ್ಶಾದ ಹುವಾಯುವಾನ್ ಯುವಾ ಸೆಂಟರ್ ನಲ್ಲಿ ಇವರು ಸಾಹಸ ಪ್ರದರ್ಶನಕ್ಕೆ ಸಿದ್ದತೆ ನಡೆಸಿದ್ದರು. ಕಟ್ಟಡದ ಮೇಲೆ ಹತ್ತಿ ಕಟ್ಟಡದ ಅಂಚಿನಲ್ಲಿ ಪುಲ್ ಅಪ್ ತೆಗೆಯುವುದು ಅವರ ಸಾಹಸವಾಗಿತ್ತು. ಆದರೆ ಪುಲ್ ಅಪ್ ತೆಗೆದ ನಂತರ ಮೇಲೇರಲಾಗದೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಅವರು ಮೃತಪಟ್ಟಿದ್ದಾರೆ.

ತಾನು ಪ್ರದರ್ಶಿಸಿದ ಕೊನೆಯ ಸಾಹಸದಿಂದ ಬಂದ ಹಣವನ್ನು ತನ್ನ ಮದುವೆಗೆ ಹಾಗು ತಾಯಿಯ ಚಿಕಿತ್ಸೆಗೆ ವ್ಯಯಿಸಲು  ಯೋಂಗ್ನಿಂಗ್ ನಿರ್ಧರಿಸಿದ್ದರು ಎಂದು ಸಂಬಂಧಿಯೋರ್ವರು ತಿಳಿಸಿರುವುದಾಗಿ ಚೀನಾ ಮಾಧ್ಯಮಗಳು ವರದಿ ಮಾಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News