ರಾಜಕಾರಣಿಗಳ ಶೀಘ್ರ ವಿಚಾರಣೆಗಾಗಿ 12 ನ್ಯಾಯಾಲಯಗಳ ಸ್ಥಾಪನೆ: ಕೇಂದ್ರ

Update: 2017-12-12 15:49 GMT

ಹೊಸದಿಲ್ಲಿ, ಡಿ.12: ಶಾಸಕರು ಮತ್ತು ಸಂಸದರ ವಿರುದ್ಧದ ದೂರುಗಳ ಶೀಘ್ರ ವಿಚಾರಣೆಗಾಗಿ ದೇಶದಲ್ಲಿ 12 ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಮತ್ತು ಅದಕ್ಕಾಗಿ ಈಗಾಗಲೇ ರೂ. 7.8 ಕೋಟಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರದಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ. 2014ರ ವೇಳೆಗೆ ರಾಜಕಾರಣಿಗಳ ವಿರುದ್ಧದ 1,500 ಪ್ರಕರಣಗಳ ವಿಚಾರಣೆ ಬಾಕಿಯುಳಿದಿದ್ದು, ಈ ಪ್ರಕರಣಗಳ ಶೀಘ್ರ ವಿಚಾರಣೆ ನಡೆಸಲು ಪ್ರತ್ಯೇಕ ಫಾಸ್ಟ್ ಟ್ರಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಮತ್ತು ಅದಕ್ಕೆ ಅಗತ್ಯವಿರುವ ನಿಧಿಯನ್ನು ಬಿಡುಗಡೆ ಮಾಡುವಂತೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿತ್ತು.

ಬಿಜೆಪಿ ಸದಸ್ಯ ಮತ್ತು ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವ ವೇಳೆ ಸರ್ವೋಚ್ಛ ನ್ಯಾಯಾಲಯ ಈ ಸೂಚನೆ ನೀಡಿತ್ತು. ತಪ್ಪಿತಸ್ಥರೆಂದು ಸಾಬೀತಾದ ಶಾಸಕರು ಅಥವಾ ಸಂಸದರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಸದ್ಯವಿರುವ ಕಾನೂನಿನ ಬಗ್ಗೆಯೂ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ರಾಜಕಾರಣಿಗಳಿಗೆ ಜೀವಾವಧಿ ನಿಷೇಧ ಹೇರಬೇಕೆಂಬ ಕುಮಾರ್ ಮನವಿಯನ್ನು ನವೆಂಬರ್ ತಿಂಗಳಲ್ಲಿ ನಡೆದ ವಿಚಾರಣೆಯ ವೇಳೆ ನ್ಯಾಯಾಲಯ ಅಂಗೀಕರಿಸಿತ್ತು.

ನ್ಯಾಯಾಲಯವು ಈ ಜೀವಾವಧಿ ನಿಷೇಧ ನಿರ್ಧಾರವನ್ನು ಜಾರಿಗೆ ತಂದರೆ ಬಿಹಾರದ ಮಾಜಿಮುಖ್ಯಮಂತ್ರಿ, ಮೇವು ಹಗರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಲಾಲೂ ಪ್ರಸಾದ್ ಯಾದವ್ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ವಿಕೆ ಶಶಿಕಲಾ ರಾಜಕೀಯ ಭವಿಷ್ಯವು ಅಂತ್ಯವಾಗಲಿದೆ.

ನಿಷೇಧದ ಅವಧಿಯ ಬಗ್ಗೆ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗದ ಮಧ್ಯೆ ಭಿನ್ನಾಭಿಪ್ರಾಯವಿದೆ. ಕೇಂದ್ರವು ಸದ್ಯದ ಆರು ವರ್ಷಗಳ ನಿಷೇಧ ಸಾಕೆಂದು ಹೇಳುತ್ತಿದ್ದರೆ ಆರಂಭದಲ್ಲಿ ಅಸ್ಪಷ್ಟ ನಿಲುವನ್ನು ತಳೆದ ಕಾರಣಕ್ಕೆ ನ್ಯಾಯಾಲಯದಿಂದ ಟೀಕೆಗೊಳಗಾದ ಚುನಾವಣಾ ಆಯೋಗ ಜೀವಮಾನ ನಿಷೇಧವನ್ನು ಬೆಂಬಲಿಸುತ್ತಿದೆ. 2014ರಿಂದೀಚೆಗೆ ರಾಜ್ಯ ಮತ್ತು ಕೇಂದ್ರದ ಮಂತ್ರಿಗಳ ವಿರುದ್ಧ ಹೂಡಲಾಗಿರುವ 1581 ದಾವೆಗಳ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಒಪ್ಪಿಸುವಂತೆ ನ್ಯಾಯಾಲಯ ಸರಕಾರಕ್ಕೆ ಹಿಂದಿನ ವಿಚಾರಣೆಯ ವೇಳೆ ಸೂಚಿಸಿತ್ತು. ಒಂದು ವರ್ಷದ ಒಳಗೆ ಎಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಮತ್ತು ಎಷ್ಟು ಪ್ರಕರಣಗಳಲ್ಲಿ ಶಿಕ್ಷೆ ಅಥವಾ ದೋಷಮುಕ್ತಿಗೊಳಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಈ ಬಗ್ಗೆ ಅಂಕಿಅಂಶಗಳನ್ನು ಕಲೆ ಹಾಕಲು ಹೆಚ್ಚಿನ ಸಮಯದ ಅಗತ್ಯವಿರುವುದಾಗಿ ಕೇಂದ್ರ ನ್ಯಾಯಾಲಯಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News