ಬಿಜೆಪಿಯಿಂದ ಬೆಂಕಿ ಹಚ್ಚುವ ಕೆಲಸ: ದಿನೇಶ್‌ ಗುಂಡೂರಾವ್

Update: 2017-12-12 16:15 GMT

ಬೆಂಗಳೂರು, ಡಿ.12: ದೇಶದಲ್ಲೆ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯವು ಮೊದಲ ಸ್ಥಾನದಲ್ಲಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಸರಕಾರಕ್ಕೆ ಕೆಟ್ಟ ಹೆಸರು ತಂದು, ರಾಜ್ಯದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಲು ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಹೇಳಿದರು.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಶಾಸಕರ ಮನೆ ಮೇಲೆ ಕಲ್ಲು ತೂರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿ ನಡೆದ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಸದ ನಳೀನ್‌ಕುಮಾರ್ ಕಟೀಲು ಇಡೀ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಬಹಿರಂಗ ಬೆದರಿಕೆ ಹಾಕಿದ್ದರು. ಈಗ ಹೊನ್ನಾವರದಲ್ಲಿ ಪರೇಶ್ ಸಾವಿನ ಪ್ರಕರಣವಿಟ್ಟುಕೊಂಡು ಬಿಜೆಪಿ ಅದನ್ನೆ ಮಾಡುತ್ತಿದೆ ಎಂದು ದಿನೇಶ್‌ಗುಂಡೂರಾವ್ ದೂರಿದರು.

ಸುಳ್ಳು ಹೇಳಿ, ನಾವು ಮಾತನಾಡುವುದಕ್ಕಿಂತ ಕೆಟ್ಟದಾಗಿ ಮಾತನಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಮಾರ್ಗದರ್ಶನ ಮಾಡುತ್ತಾರೆ. ಕೋಮುಗಲಭೆ, ಪ್ರಚೋದನೆ, ಗಲಾಟೆ, ಸುಳ್ಳು ಹೇಳುವುದೇ ಬಿಜೆಪಿ ನಾಯಕರ ಕಾರ್ಯಸೂಚಿ ಎಂದು ಅವರು ಆರೋಪಿಸಿದರು.

 ಪರೇಶ್ ಸಾವಿನ ಕುರಿತು ತನಿಖೆ ನಡೆದು ವಾಸ್ತವ ಗೊತ್ತಾಗಲಿದೆ. ಆದರೆ, ಈಗಲೆ ಬಿಜೆಪಿಯವರು ಮತ್ತೊಬ್ಬರ ವಿರುದ್ಧ ಆರೋಪಗಳನ್ನು ಹೊರಿಸುವುದು ಸರಿಯಲ್ಲ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News