ಕೇಂದ್ರದ ಆರ್ಥಿಕ ನೀತಿಗಳು ಜನಸಾಮಾನ್ಯರ ವಿರೋಧಿ: ದಿನೇಶ್ ಗುಂಡೂರಾವ್

Update: 2017-12-12 16:19 GMT

ಬೆಂಗಳೂರು, ಡಿ.12: ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡಿರುವ ಬೃಹತ್ ಆರ್ಥಿಕ ನೀತಿಗಳು ಜನಸಾಮಾನ್ಯರ ಪರವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಅಂತಹ ಯಾವುದೆ ಛಾಯೆಗಳು ಗೋಚರಿಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಆರೋಪಿಸಿದರು.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೋಟುಗಳ ಅಮಾನ್ಯೀಕರಣ, ತರಾತುರಿಯಲ್ಲಿ ಕೈಗೊಂಡಿರುವ ಜಿಎಸ್‌ಟಿ ಅನುಷ್ಠಾನ, ತೆರಿಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ನಿಯಮಗಳು, ವಿತ್ತೀಯ ಮಸೂದೆ-2017 ಇವೆಲ್ಲವೂ ಜನಸಾಮಾನ್ಯರನ್ನು ನಿರ್ಲಕ್ಷಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಟೀಕಿಸಿದರು.

‘ಹಣಕಾಸು ಮಸೂದೆ-2017’ ಐಟಿ ಅಧಿಕಾರಿಗಳಿಗೆ ಅಧಿಕ ಶಕ್ತಿ ನೀಡಿದಂತೆ ಕಂಡರೂ ಅದನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿರುವ ಆಪಾದನೆಗಳು ಕೇಳಿ ಬರುತ್ತಿವೆ. ಚುನಾವಣಾ ನಿಧಿಯ ಸಂಗ್ರಹಣೆಗಾಗಿ ಮತ್ತೆ ಇದೇ ಮಸೂದೆಗೆ ಬಿಜೆಪಿ ಮೊರೆ ಹೋಗಿರುವುದು ಅಚ್ಚರಿ ತಂದಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಕೇಂದ್ರದ ನಿರ್ಧಾರವು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಗಳ ಮೇಲಿನ ನಂಬಿಕೆಗಳೆ ನಾಶವಾಗುವ ಸುಳಿಯಲ್ಲಿ ಸಿಲುಕಿದೆ. 10 ಲಕ್ಷ ಕೋಟಿಗೂ ಹೆಚ್ಚಿನ ಎನ್‌ಪಿಎ ಹೊರೆಯಿದ್ದು, ಇವುಗಳನ್ನು ಮನ್ನಾ ಮಾಡುವ ಮೂಲಕ ಹಣಕಾಸಿನ ವಿವೇಚನೆ ಇಲ್ಲವೆಂದು ಕೇಂದ್ರ ಸಾಬೀತುಪಡಿಸಿದೆ ಎಂದು ಅವರು ಆರೋಪಿಸಿದರು.
ಬೃಹತ್ ಉದ್ದಿಮೆದಾರರ ಸಾವಿರಾರು ಕೋಟಿ ರೂ.ಗಳ ಮನ್ನಾ ಮಾಡುವುದಷ್ಟೇ ಅಲ್ಲದೆ ಅವರಿಗೆ ಪುನಃ ಸಾಲ ನೀಡುವುದರ ಮೂಲಕ ಮೋದಿ ಸರಕಾರ ತಾನು ಯಾರ ಪರವಾಗಿದ್ದೇನೆ ಎಂಬುದನ್ನು ಎತ್ತಿ ತೋರುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಈಗ ಸಾಮಾನ್ಯರಿಗೆ ಹಾನಿಕಾರ ಎನಿಸುವ ಶಾಸನವನ್ನು ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿದೆ ಎಂದು ದಿನೇಶ್‌ಗುಂಡೂರಾವ್ ದೂರಿದರು.

‘ಹಣಕಾಸಿನ ನಿರ್ಣಯ ಮತ್ತು ಠೇವಣಿ ವಿಮಾ ಮಸೂದೆ-2017’ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದರನ್ವಯ ಬ್ಯಾಂಕುಗಳಲ್ಲಿರುವ ಜನಸಾಮಾನ್ಯರ ಹಣವನ್ನು ಬ್ಯಾಂಕುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ. ಈ ಕಾನೂನು ಜಾರಿಗೆ ಬಂದಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಗಳು ಆಗಲಿದೆ. ಇದನ್ನು ಹಿಂಪಡೆಯದಿದ್ದರೆ ಕೇಂದ್ರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಯಾವುದೇ ಸಹಾಯವಿಲ್ಲದೆ ಮೂಲಭೂತವಾಗಿ, ಈ ಸಂಸ್ಥೆಗಳಿಗೆ ನಮ್ಮ ಆಸ್ತಿಗಳನ್ನು ಸರಿ ಹೊಂದುವಂತೆ ಅವಕಾಶ ಮಾಡಿಕೊಡಲಿದೆ. ಇದಲ್ಲದೆ, ಯಾಂತ್ರೀಕೃತವಾಗಿ ಮೇಲ್ಮನವಿ ಮತ್ತು ವಿಮರ್ಶೆ ಅಸ್ತಿತ್ವಕ್ಕೂ ಬಾರದು. ಇಂತಹ ನಿಯಮಗಳು ಶ್ರೀಮಂತರ ಮೇಲೆ ಕೆಟ್ಟ ಪರಿಣಾಮ ಬೀರದೆ ಶ್ರೀಸಾಮಾನ್ಯರ ಮೇಲೆ ಹೊರೆಯಾಗಲಿದೆ. ನಿಶ್ಚಿತ ಠೇವಣಿ ಇರಿಸಿಕೊಳ್ಳದವರಿಗೆ ಇದು ಮಾರಕವಾಗಿ ಕಾಡಲಿದೆ ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.

ಕಠಿಣವಾದ ನಿಬಂಧನೆಗಳನ್ನು ಮರು ಪರಿಶೀಲನೆ ಮಾಡಲು ಅರ್ಹವಾಗಿರುವ ಜಂಟಿ ಸಂಸದೀಯ ಸಮಿತಿಗೆ ಇಂತಹ ನಿಯಮಗಳ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಬಾರದು. ಇಂತಹ ಕಾನೂನುಗಳು ಜಾರಿಯಾದಲ್ಲಿ ಅದರಿಂದ ವಿತ್ತೀಯ ಸಂಸ್ಥೆಗಳ ಮೇಲೆ ಜನರ ವಿಶ್ವಾಸಕ್ಕೆ ಧಕ್ಕೆಯಾಗುವುದಲ್ಲದೆ, ಅಮೆರಿಕದಲ್ಲಿ ಅನುಭವಿಸಿದಂತಹ ಆರ್ಥಿಕ ಕುಸಿತ ಉಂಟಾಗುವ ಅಪಾಯಗಳಿವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಮುಂಬರುವ ಸಂಸತ್ತು ಅಧಿವೇಶನದಲ್ಲಿ ಈ ವಿಚಾರವಾಗಿ ನಮ್ಮ ಪಕ್ಷದ ಸಂಸದರು ಸದನದಲ್ಲಿ ಧ್ವನಿ ಎತ್ತಲಿದ್ದಾರೆ. ಅಲ್ಲದೆ, ಜಂಟಿ ಸಂಸದೀಯ ಸಮಿತಿಯಲ್ಲಿರುವ ನಮ್ಮ ಪಕ್ಷದ ಸದಸ್ಯರು ಬಲವಾಗಿ ಜನ ವಿರೋಧಿಯಾದ ಅಂಶಗಳನ್ನು ಕೈಬಿಡುವಂತೆ ಪಟ್ಟು ಹಿಡಿಯಲಿದ್ದಾರೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಕೇಂದ್ರ ಸರಕಾರವು ಬೃಹತ್ ಉದ್ದಿಮೆದಾರರಿಂದ ಉಂಟಾಗಿರುವ ಆರ್ಥಿಕ ದುಸ್ಥಿತಿಯನ್ನು ಸುಧಾರಿಸಿಕೊಳ್ಳಲು ಶ್ರೀ ಸಾಮಾನ್ಯರ ಉಳಿತಾಯದ ಹಣಕ್ಕೆ ಲಗ್ಗೆ ಹಾಕಲು ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಕಳವಳಕಾರಿ. ಪ್ರಧಾನಿ ಮೋದಿ ‘ಜನ ವಿರೋಧಿ’ ಹಾಗೂ ‘ಶ್ರೀಮಂತ ಉದ್ದಿಮೆದಾರರ’ ಪರವಾಗಿ ನಿಂತಿರುವುದು ಖಂಡನೀಯ.

-ದಿನೇಶ್ ಗುಂಡೂರಾವ್ ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News