ಎಸ್‌ಐಗೆ ಒಂದು ತಿಂಗಳು ಕಾರಾಗೃಹ ಶಿಕ್ಷೆ, ಎರಡು ಸಾವಿರ ದಂಡ: ಹೈಕೋರ್ಟ್

Update: 2017-12-12 16:34 GMT

ಬೆಂಗಳೂರು, ಡಿ.12: ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನು ಪ್ರತಿಯನ್ನು ನೆಲಕ್ಕೆ ಬಿಸಾಕಿದ ಸಬ್ ಇನ್ಸ್‌ಪೆಕ್ಟರ್‌ಗೆ ಒಂದು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

ಕಗ್ಗಲಿಪುರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಎಚ್.ಬಿ.ಸುನೀಲ್ ವಿರುದ್ಧ ಹೈಕೋರ್ಟ್ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ಜಾನ್ ಮೈಕಲ್ ಕುನ್ನಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬರು ತಮಗೆ ನೀಡಿದ್ದ ನಿರೀಕ್ಷಣಾ ಜಾಮೀನು ಪ್ರತಿಯನ್ನು 2016ರ ಆ.22ರಂದು ಕಗ್ಗಲಿಪುರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅವರಿಗೆ ತಮ್ಮ ವಕೀಲರೊಂದಿಗೆ ಸಲ್ಲಿಸಲು ಹೋದಾಗ ಇನ್ಸ್‌ಪೆಕ್ಟರ್ ಅವರು ಇಂತಹ ಕೋರ್ಟ್‌ಗಳ ಆದೇಶವನ್ನು ಬೇಕಾದಷ್ಟು ನೋಡಿದ್ದೇವೆಯೆಂದು ಹೇಳಿ ಆದೇಶದ ಪ್ರತಿಯನ್ನು ಮುದುಡಿ ಮಾಡಿ ನೆಲಕ್ಕೆ ಎಸೆದಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಯು 2016ರ ಆ.22ರಂದು ಪುನಹ ಕೋರ್ಟ್ ಮೆಟ್ಟಿಲೇರಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಇನ್ಸ್‌ಪೆಕ್ಟರ್ ಅವರು ಕೋರ್ಟ್‌ನ ಪ್ರತಿಯನ್ನು ನೆಲಕ್ಕೆ ಬಿಸಾಕಿದ್ದು ತನಿಖೆಯಿಂದ ಸಾಬೀತಾಗಿತ್ತು. ಹೀಗಾಗಿ, ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ಇನ್ಸ್‌ಪೆಕ್ಟರ್ ಅವರಿಗೆ ಒಂದು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News