ಮೈಸೂರಿನ ‘ಕೆಎಸ್‌ಒಯು’ ತಾಂತ್ರಿಕೇತರ ಕೋರ್ಸ್‌ಗಳಿಗೆ ಮಾನ್ಯತೆ ನೀಡಲು ಹೈಕೋರ್ಟ್ ಆದೇಶ

Update: 2017-12-12 16:36 GMT

ಬೆಂಗಳೂರು, ಡಿ.12: ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ(ಕೆಎಸ್‌ಒಯು) 2017-18ನೆ ಸಾಲಿನ ತಾಂತ್ರಿಕೇತರ ಕೋರ್ಸ್‌ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

  ಕೆಎಸ್‌ಒಯುನ ವಿವಿಧ ಕೋರ್ಸ್‌ಗಳಿಗೆ ಮಾನ್ಯತೆ ನೀಡಲು ಯುಜಿಸಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠ, ಯಾವುದೇ ಅಧ್ಯಯನ ಕೇಂದ್ರಗಳಲ್ಲದೇ ನೇರವಾಗಿ ವಿಶ್ವವಿದ್ಯಾನಿಲಯದಲ್ಲಿ ದಾಖಲಾಗಿರುವ ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ 2017-18ನೆ ಸಾಲಿಗೆ ಮಾನ್ಯತೆ ನೀಡುವಂತೆ ಯುಜಿಸಿಗೆ ನಿರ್ದೇಶಿಸಿತು.

 ನ.21ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಹೊಸದಿಲ್ಲಿಯಲ್ಲಿರುವ ಯಜಿಸಿ ಅಧಿಕಾರಿಗಳನ್ನು ನ.27ರಂದು ಭೇಟಿ ಮಾಡಿ 2017-18ನೆ ಸಾಲಿನ ಮಾನ್ಯತೆಗಾಗಿ ಮನವಿ ಮಾಡುವಂತೆ ಕೆಎಸ್‌ಒಯು ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಅದರಂತೆ ಕೆಎಸ್‌ಒಯು ಅಧಿಕಾರಿಗಳು ಯುಜಿಸಿಗೆ ಮನವಿ ಸಲ್ಲಿಸಿದ್ದರು. ಆದರೆ ಈಗಾಗಲೇ 2017-18ನೇ ಸಾಲಿನ ಕೋರ್ಸ್‌ಗಳ ಮಾನ್ಯತೆಗಾಗಿ ಅರ್ಜಿ ಸಲ್ಲಿಕೆಗೆ ನೀಡಿದ್ದ ಗಡುವು ಮೀರಿದೆ ಎಂಬ ಕಾರಣ ನೀಡಿದ್ದ ಯುಜಿಸಿ ಕೆಎಸ್‌ಒಯು ಮನವಿಯನ್ನು ತಿರಸ್ಕರಿಸಿತ್ತು.

 ಅರ್ಜಿಯು ಮಂಗಳವಾರ ಮತ್ತೆ ವಿಚಾರಣೆಗೆ ಬಂದಿತ್ತು. ಈ ವೇಳೆ ಕೆಎಸ್‌ಯು ಪರ ವಕೀಲರು ವಾದಿಸಿ, 2017-18ನೆ ಸಾಲಿಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಅವಧಿ ಪೂರ್ಣಗೊಂಡಿದೆ ಎಂಬ ಕಾರಣ ನೀಡಿ ಯುಜಿಸಿ ತಿರಸ್ಕರಿಸಿದೆ. ಆದರೆ ದೇಶದ ನೂರಾರು ವಿವಿಗಳಿಗೆ ಅವಧಿ ಮುಗಿದ ನಂತರವೂ ಮಾನ್ಯತೆ ನೀಡಿರುವ ಯುಜಿಸಿ, ನಮ್ಮ ಮನವಿಯನ್ನು ಮಾತ್ರ ತಿರಸ್ಕರಿಸಿದೆ ಎಂದು ದೂರಿದರು.

ಇತರ ವಿವಿಗಳಿಗೆ ಅವಧಿ ಮೀರಿದ ಬಳಿಕವೂ ಮಾನ್ಯತೆ ನೀಡಬಹುದಾದರೆ ಕೆಎಸ್‌ಯುಗೆ ಏಕೆ ನೀಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ನ್ಯಾಯಪೀಠ, ಕೆಎಸ್‌ಒಯು ಮನವಿ ತಿರಸ್ಕರಿಸಲು ಯುಜಿಸಿ ಅಧಿಕಾರಿಗಳು ನೀಡಿರುವ ಕಾರಣ ಸಮರ್ಪಕವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, 2 ವಾರಗಳಲ್ಲಿ ಕೆಎಸ್‌ಒಯುನ 2017-18ನೇ ಸಾಲಿನ ತಾಂತ್ರಿಕೇತರ ಕೋರ್ಸ್‌ಗಳಿಗೆ ಮಾನ್ಯತೆ ನೀಡುವಂತೆ ಯುಜಿಸಿಗೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News