ಇಂಧನ ಕಳವು ಆರೋಪ: ಕಂಪೆನಿ ಮಾಲಕ ವಿರುದ್ಧ ಮೊಕದ್ದಮೆ ದಾಖಲು

Update: 2017-12-12 16:39 GMT

 ಬೆಂಗಳೂರು, ಡಿ.13: ಇಂಧನ ಪೂರೈಕೆ ವೇಳೆ ಅಕ್ರಮವಾಗಿ ಕಳವು ಮಾಡಿದ ಆರೋಪದ ಮೇಲೆ ಬಿಪಿಸಿಎಲ್(ಡೀಸೆಲ್) ಪೂರೈಕೆ ಮಾಡುವ ಇಂಧನ ಕಂಪೆನಿಯ ಮಾಲಕ, ಮತ್ತು ಲಾರಿ ಚಾಲಕನ ವಿರುದ್ಧ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.

ವಿಜಯಲಕ್ಷ್ಮಿ ಟ್ರಾನ್ಸ್‌ಪೋರ್ಟ್ ಮಾಲಕ ಮತ್ತು ಚಾಲಕ ಸದಾನಂದ ಎಂಬುವರ ವಿರುದ್ಧ ಐಪಿಸಿ 406,420,379 ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ವಿವರ: ಕೆಎಸ್ಸಾರ್ಟಿಸಿ ನಿಗಮದ ಘಟಕಗಳಿಗೆ ಭಾರತ್ ಪೆಟ್ರೋಲಿಯಂ ಕಂಪೆನಿಯಿಂದ ಇಂಧನ ಸರಬರಾಜು ಮಾಡಲಾಗುತ್ತಿತ್ತು. ಆದರೆ, ನ.30 ರಂದು ಚಿಕ್ಕಮಗಳೂರು ವಿಭಾಗದ ಘಟಕಕ್ಕೆ ಇಂಧನ ಸರಬರಾಜು ಮಾಡಲು ಬಂದ ಸಂದರ್ಭದಲ್ಲಿ ವಾಹನದ ಟ್ಯಾಂಕ್‌ನಲ್ಲಿ ಚಿಕ್ಕ ಸಬ್ ಟ್ಯಾಂಕ್ ಅಳವಡಿಸಿಕೊಂಡು ಕಳ್ಳತನ ಮಾಡುತ್ತಿರುವುದಾಗಿ ಭದ್ರತಾ ಮತ್ತು ಜಾಗೃತ ಇಲಾಖೆಗೆ ಖಚಿತ ಮಾಹಿತಿ ಬಂದಿದೆ.

ಹೀಗಾಗಿ, ವಿಶೇಷ ಕಾರ್ಯಾಚರಣೆ ನಡೆಸಿದ ತನಿಖಾ ತಂಡ ಡಿ.1ರಂದು ಸಕಲೇಶಪುರ ಘಟಕಕ್ಕೆ ಇಂಧನ ಸರಬರಾಜು ಮಾಡಲು ಬಂದಿದ್ದ ವೇಳೆ 20 ಸಾವಿರ ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕರ್‌ನಲ್ಲಿ ಅಲೆನ್ ಕೀ ಮೆಕಾನಿಸಂ ತಂತ್ರಜ್ಞಾನ ಅಳವಡಿಸಿಕೊಂಡು 165 ಲೀಟರ್‌ಗಳಷ್ಟು ಇಂಧನವನ್ನು ಕಳವು ಮಾಡಿರುವುದನ್ನು ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಸಕಲೇಶಪುರ ಪೋಲಿಸ್ ಠಾಣೆಯಲ್ಲಿ ವಿಜಯಲಕ್ಷ್ಮಿ ಟ್ರಾನ್ಸ್‌ಪೋರ್ಟ್ ಮಾಲಕ ಮತ್ತು ಚಾಲಕ ಸದಾನಂದ ಎಂಬುವರ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News