ರವಿಬೆಳಗೆರೆ ಆಸ್ಪತ್ರೆಗೆ ದಾಖಲು

Update: 2017-12-12 16:48 GMT

ಬೆಂಗಳೂರು, ಡಿ.12: ಸಹೋದ್ಯೋಗಿ ಹತ್ಯೆಗೆ ಸುಪಾರಿ ಆರೋಪ ಪ್ರಕರಣ ಸಂಬಂಧ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಗಾಗಿರುವ ‘ಹಾಯ್ ಬೆಂಗಳೂರು’ ಸಂಸ್ಥಾಪಕ ರವಿಬೆಳಗೆರೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರವಿಬೆಳಗೆರೆ ಸೋಮವಾರವಷ್ಟೇ ನ್ಯಾಯಾಂಗ ಬಂಧನಕ್ಕೊಳಗಾಗಿ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ, ಅವರ ಆರೋಗ್ಯದಲ್ಲಾದ ಏರುಪೇರಿನಿಂದಾಗಿ ತುರ್ತು ಚಿಕಿತ್ಸೆ ನೀಡುವ ಅವಶ್ಯಕತೆ ಇರುವ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಂದಿಖಾನೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಪಾಸಣೆ: ರಕ್ತದೊತ್ತಡ, ಮಧುಮೇಹ, ಕಾಲುನೋವು, ನಿದ್ದೆ ಸಮಸ್ಯೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರವಿಬೆಳಗೆರೆ ಅವರಿಗೆ ಮಂಗಳವಾರ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯಲ್ಲೇ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು ದೇಹದಲ್ಲಿ ಬಳಲಿಕೆ ಕಂಡು ಬರುತ್ತಿರುವುದರಿಂದ ನಡೆಯಲಾಗದ ಕಾರಣ ಜೈಲಿನ ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಹೋಗಲು ವೀಲ್‌ಚೇರ್ ಸಹಾಯ ಪಡೆದೆ ಕೌನ್ಸಿಲಿಂಗ್ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.

ಜೈಲು ದಿನಚರಿ: ಸೋಮವಾರ ಜೈಲು ಸೇರಿದ ನಂತರ ಮಗಳು ಚೇತನಾ ಮನೆಯಿಂದ ತಂದ ಊಟ ಸೇವಿಸಿ ನಿದ್ದೆಗೆ ಜಾರಿದ ರವಿ ಬೆಳಗೆರೆಯವರು ಮತ್ತೆ ಖಾಲಿ ಹಾಳೆ, ಪೆನ್ನು ಪಡೆದು ಬರೆಯುತ್ತಾ ಕಾಲ ಕಳೆದಿದ್ದರು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಕಾರಣ ಜೈಲಿನಲ್ಲಿರುವ ಆಸ್ಪತ್ರೆ ಕೊಠಡಿ ಸಂಖ್ಯೆ 10ರಲ್ಲಿಯೆ ರಾತ್ರಿ ಕಳೆದಿದ್ದು, ವೈದ್ಯರು ಕೂಡ ಅವರೊಂದಿಗೆ ಕೆಲ ಸಮಯ ಕಳೆದಿದ್ದಾರೆ ಎನ್ನಲಾಗಿದೆ.

ಜಾಮೀನಿಗಾಗಿ ಅರ್ಜಿ: ಅನಾರೋಗ್ಯದಿಂದ ಬಳಲುತ್ತಿರುವ ರವಿ ಬೆಳಗೆರೆ ಅವರಿಗೆ ಜಾಮೀನು ನೀಡುವಂತೆ ಕೋರಿ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಬೆಳಗೆರೆ ಪರ ವಕೀಲ ದಿವಾಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News