ಯಮನ್: 84 ಲಕ್ಷ ಜನರಿಗೆ ಆಹಾರದ ಅಭಾವ

Update: 2017-12-12 16:56 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಡಿ. 12: ಆಂತರಿಕ ಸಂಘರ್ಷ ಪೀಡಿತ ಯಮನ್‌ನಲ್ಲಿ ಸುಮಾರು 84 ಲಕ್ಷ ಜನರು ಆಹಾರದ ಅಭಾವವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ. ಹಾಗಾಗಿ, ಈ ಜನರಿಗೆ ಹೆಚ್ಚಿನ ನೆರವು ತಲುಪಲು ಯುದ್ಧನಿರತ ಬಣಗಳು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಯಮನ್‌ನಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಕಳೆದ ತಿಂಗಳು ಯಮನ್‌ನಿಂದ ಕ್ಷಿಪಣಿಯೊಂದನ್ನು ಸೌದಿ ಅರೇಬಿಯದ ರಾಜಧಾನಿಯತ್ತ ಉಡಾಯಿಸಲಾಗಿತ್ತು. ಅದನ್ನು ಸೌದಿ ರಕ್ಷಣಾ ವ್ಯವಸ್ಥೆಯು ಮಧ್ಯದಲ್ಲೇ ತುಂಡರಿಸಿತ್ತು.

ಆ ಘಟನೆಯ ಬಳಿಕ, ಯಮನ್‌ಗೆ ಹೊರಗಿನಿಂದ ಶಸ್ತ್ರಾಸ್ತ್ರಗಳು ಬರುವುದನ್ನು ನಿಲ್ಲಿಸುವ ಉದ್ದೇಶದಿಂದ ದೇಶದ ಎಲ್ಲ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಮುಚ್ಚಿ ದಿಗ್ಬಂಧನ ವಿಧಿಸಲಾಗಿತ್ತು.

ದಿಗ್ಬಂಧನವನ್ನು ಈಗ ಸಡಿಲಗೊಳಿಸಲಾಗಿದೆಯಾದರೂ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ ಎಂದು ಯಮನ್‌ನಲ್ಲಿ ವಿಶ್ವಸಂಸ್ಥೆಯ ಮಾನವೀಯ ಸಮನ್ವಯಕಾರ ಜೇಮೀ ಮೆಕ್‌ಗಾಲ್ಡ್‌ರಿಕ್ ಹೇಳಿದ್ದಾರೆ.

‘‘ಬಂದರುಗಳ ಮೇಲೆ ವಿಧಿಸಲಾಗಿರುವ ನಿರ್ಬಂಧ ಮುಂದುವರಿದಿರುವುದರಿಂದ ಇಂಧನ, ಆಹಾರ ಮತ್ತು ಔಷಧಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ, ನೆರವಿನ ಅಗತ್ಯವಿರುವ ಸಂತ್ರಸ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ’’ ಮೆಕ್‌ಗಾಲ್ಡ್‌ರಿಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News