ಹಲವು ರೀತಿಯ ವಾಹನ ತೆರಿಗೆ ವಿಧಿಸಬೇಡಿ: ಹೈಕೋರ್ಟ್ ವೌಖಿಕ ಅಭಿಪ್ರಾಯ

Update: 2017-12-12 17:00 GMT

ಬೆಂಗಳೂರು, ಡಿ.12: ಹಲವು ರೀತಿಯ ವಾಹನ ತೆರಿಗೆ ವಿಧಿಸುವುದು ಸರಿಯಲ್ಲ ಎಂಬ ವೈಯಕ್ತಿಕ ವೌಖಿಕ ಅಭಿಪ್ರಾಯವನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ವ್ಯಕ್ತಪಡಿಸಿದರು. ರಸ್ತೆ ತೆರಿಗೆ ನಿರ್ಬಂಧಿಸುವಂತೆ ಕೋರಿ ಎಸ್‌ಆರ್‌ಎಸ್ ಟ್ರಾವೆಲ್ಸ್ ಪ್ರವರ್ತಕ ಕೆ.ಟಿ.ರಾಜಶೇಖರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ವಕೀಲ ವಕೀಲ ಪುತ್ತಿಗೆ ಆರ್.ರಮೇಶ್ ಅರ್ಜಿದಾರರು 382 ಪ್ರವಾಸಿ ಬಸ್‌ಗಳನ್ನು ಹೊಂದಿದ್ದು ಕರ್ನಾಟಕ ಮೋಟಾರು ವಾಹನ ಕಾಯಿದೆ 1957ರ ಅನುಸಾರ ರಸ್ತೆ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ಕಾಲಕಾಲಕ್ಕೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸರಕಾರ ಸಂಗ್ರಹಿಸುವ ರಸ್ತೆ ತೆರಿಗೆ ಸಂವಿಧಾನ ಬಾಹಿರ. ಹೀಗಾಗಿ, ಈ ತೆರಿಗೆ ಸಂಗ್ರಹಿಸದಂತೆ ನಿರ್ದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ವಾಸ್ತವದಲ್ಲಿ ಹಲವು ರೀತಿಯ ವಾಹನಗಳ ತೆರಿಗೆ ಸಂಗ್ರಹ ವ್ಯವಸ್ಥೆ ಇದೆ. ಆದರೆ ಇದು ವೈಯಕ್ತಿಕವಾಗಿ ನನ್ನ ಪ್ರಕಾರ ಸರಿಯಲ್ಲ. ಏಕರೂಪ ತೆರಿಗೆ ಪದ್ಧತಿಯೇ ಸೂಕ್ತ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು ನಗರದ ರಸ್ತೆಗಳು ಗುಂಡಿಗಳಾಗುತ್ತಿದ್ದು, ಇದರಿಂದ, ಅಪಘಾತಗಳು ಹೆಚ್ಚಾಗುತ್ತಿವೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಅಲ್ಲದೆ, ವಾಹನ ತೆರಿಗೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ವಿವರ ಒದಗಿಸುವಂತೆ ಕೋರಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಎಂಟು ವಾರಗಳ ಕಾಲ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News