ಟ್ರಂಪ್ ವಿರುದ್ಧದ ಲೈಂಗಿಕ ದುರ್ವರ್ತನೆ ಆರೋಪಗಳ ತನಿಖೆ ಮಾಡಿ

Update: 2017-12-12 17:08 GMT

ವಾಶಿಂಗ್ಟನ್, ಡಿ. 12: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಡಲಾಗಿರುವ ಲೈಂಗಿಕ ದುರ್ವರ್ತನೆ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಡೆಮಾಕ್ರಟಿಕ್ ಪಕ್ಷದ 54 ಕಾಂಗ್ರೆಸ್ ಸದಸ್ಯೆಯರು ಆಗ್ರಹಿಸಿದ್ದಾರೆ.

 ತಾವು ಅನುಭವಿಸಿದ ಲೈಂಗಿಕ ಕಿರುಕುಳ ಮತ್ತು ಹಲ್ಲೆಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಅಮೆರಿಕದಾದ್ಯಂತ ಹೆಚ್ಚೆಚ್ಚು ಮಹಿಳೆಯರು ಮುಂದೆ ಬರುತ್ತಿದ್ದಾರೆ ಎಂದು ನಿಗಾ ಮತ್ತು ಸರಕಾರಿ ಸುಧಾರಣೆಗಳ ಸದನ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಿದ ಪತ್ರದಲ್ಲಿ ಸಂಸದೆಯರು ಹೇಳಿದ್ದಾರೆ.

‘‘ಅನುಚಿತ ಲೈಂಗಿಕ ವರ್ತನೆಗಾಗಿ ಕಾಂಗ್ರೆಸ್‌ನ ಸದಸ್ಯರೂ ಪರಿಶೀಲನೆ ಮತ್ತು ತನಿಖೆಗೆ ಒಳಗಾಗಿದ್ದಾರೆ ಹಾಗೂ ಕೆಲವರು ರಾಜೀನಾಮೆ ನೀಡಿದ್ದಾರೆ’’ ಎಂದು ಪತ್ರದಲ್ಲಿ ಹೇಳಲಾಗಿದೆ.

‘‘ಟ್ರಂಪ್ ವಿರುದ್ಧವೂ ಹಲವಾರು ಮಹಿಳೆಯರು ಲೈಂಗಿಕ ದುರ್ವರ್ತನೆಯ ಆರೋಪ ಹೊರಿಸಿದ್ದಾರೆ. ಅವುಗಳನ್ನು ನಾವು ಕಡೆಗಣಿಸಬಾರದು. ಅದೇ ವೇಳೆ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಟ್ರಂಪ್‌ಗೆ ಅವಕಾಶ ನೀಡಬೇಕು’’ ಎಂದಿದೆ.

ಅಮೆರಿಕದ ಅಧ್ಯಕ್ಷರ ವಿರುದ್ಧ ತಾವು ಮಾಡಿರುವ ಆರೋಪಗಳ ಬಗ್ಗೆ ಅಮೆರಿಕದ ಕಾಂಗ್ರೆಸ್ ತನಿಖೆ ನಡೆಸಬೇಕು ಎಂಬುದಾಗಿ ಮೂವರು ಮಹಿಳೆಯರು ಸೋಮವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಒತ್ತಾಯಿಸಿರುವುದನ್ನು ಸ್ಮರಿಸಬಹುದಾಗಿದೆ.

ಫೇಕ್ ನ್ಯೂಸ್!: ಟ್ರಂಪ್

ತನ್ನ ವಿರುದ್ಧ ಮಾಡಲಾಗುತ್ತಿರುವ ಲೈಂಗಿಕ ದುರ್ವರ್ತನೆ ಆರೋಪಗಳು ಕಪೋಲಕಲ್ಪಿತವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ತನ್ನ ವಿರುದ್ಧ ಆರೋಪ ಮಾಡಿರುವ ಮಹಿಳೆಯರು ತನಗೆ ಗೊತ್ತಿಲ್ಲ ಅಥವಾ ಅವರನ್ನು ನಾನು ಯಾವತ್ತೂ ಭೇಟಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಎನ್‌ಬಿಸಿ ಟಿವಿ ಚಾನೆಲ್‌ನ ‘ಮೇಗಿನ್ ಕೆಲ್ಲಿ ಟುಡೆ’ ಕಾರ್ಯಕ್ರಮದಲ್ಲಿ ಮೂವರು ಮಹಿಳೆಯರು ತನ್ನ ವಿರುದ್ಧ ಲೈಂಗಿಕ ದುರ್ವರ್ತನೆ ಆರೋಪ ಹೊರಿಸಿದ ಒಂದು ದಿನದ ಬಳಿಕ ಟ್ರಂಪ್ ಟ್ವಿಟರ್‌ನಲ್ಲಿ ಹರಿಹಾಯ್ದರು

‘‘ಇದು ಫೇಕ್ ನ್ಯೂಸ್ (ಸುಳ್ಳು ಸುದ್ದಿ)’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News