ಹೊಸ ವರ್ಷಕ್ಕೆ ಎರಡು ದಿನ ಮದ್ಯ ನಿಷೇಧಿಸಿ ಡಿ.13ರಂದು ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

Update: 2017-12-12 17:15 GMT

ಬೆಂಗಳೂರು, ಡಿ.13: ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎರಡು ದಿನ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಸಲ್ಲಿಕೆಯಾಗಿದೆ.

 ನಗರದ ನಿವಾಸಿ ಎನ್.ನಾಗೇಶ್ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. 2016ರ ಡಿ.31ರ ಮಧ್ಯರಾತ್ರಿ ಮತ್ತು ಜ.1ರಂದು ಹೊಸ ವರ್ಷದ ಆಚರಣೆ ವೇಳೆ ನಗರದ ವಿವಿಧಡೆ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳು ನಡೆದಿವೆ. ಹಾಗೆಯೇ, ಹೊಸ ವರ್ಷದ ಆಚರಣೆ ಪ್ರಯುಕ್ತ ಯುವಕರು ರಾತ್ರಿಯ ವೇಳೆ ಮದ್ಯಪಾನ ಸೇವಿಸಿ ವಾಹನ ಚಲಾಯಿಸಿ ಅಪಘಾತಕ್ಕೆ ಗುರಿಯಾದ ಉದಾಹರಣೆಗಳು. ಈ ಬಾರಿ ಇಂತಹ ಅವಘಡ ತಪ್ಪಿಸುವ ಸಲುವಾಗಿ 2017ರ ಡಿ.31 ಮತ್ತು ಹೊಸ ವರ್ಷದ ದಿನವಾದ 2018ರ ಜನವರಿ 1ರಂದು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯಲ್ಲಿ ರಾಜ್ಯ ಅಬಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಯನ್ನು ಪ್ರತಿ ವಾದಿ ಮಾಡಲಾಗಿದೆ. ಈ ಅರ್ಜಿ ಬುಧವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿರುವ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News