ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಸೌಕರ್ಯ ಕೊರತೆ

Update: 2017-12-12 17:18 GMT

ಬೆಂಗಳೂರು, ಡಿ.12: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ರಾಜ್ಯದ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಸೌಕರ್ಯಗಳ ಕೊರತೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಹೈಕೋರ್ಟ್ ಮಂಗಳವಾರ ತುರ್ತು ನೋಟಿಸ್ ಜಾರಿಗೊಳಿಸಿದೆ.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆಗಾಗಿ ಮೇಲ್ವಿಚಾರಣಾ ಸಮಿತಿಯೊಂದನ್ನು ರಚಿಸಬೇಕೆಂದು ಕೋರಿ ವಕೀಲ ವಿನಯ್ ವೇಣುಗೋಪಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿದ್ದ ಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗಾಗಿ ರಾಜ್ಯ ಸರಕಾರ ಪ್ರತಿ ವರ್ಷ 1300 ಕೋಟಿ ರೂ ಅನುದಾನ ಬಿಡುಗಡೆ ಮಾಡುತ್ತಿದೆ. ಹೀಗಿದ್ದರೂ ಹಾಸ್ಟೆಲ್‌ಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಮೂಲ ಸೌಕರ್ಯಗಳನ್ನೇ ಕಲ್ಲಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಲ್ಲ. ಮಲಗಲು ಹಾಸಿಗೆಗಳಿಲ್ಲ. ವಿದ್ಯಾರ್ಥಿ ನಿಲಯಗಳಲ್ಲಿ ಶುಚಿತ್ವ ಕಾಪಾಡಿಲ್ಲ ಎಂದು ದೂರಿದರು.

ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಬೆಕು. ಜೊತೆಗೆ ಹಾಸ್ಟೆಲ್‌ಗಳ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಯಾವ ಯಾವ ಕಾರಣಗಳಿಗೆ ಖರ್ಚು ಮಾಡಲಾಗಿದೆ ಎಂಬುದರ ಕುರಿತು ಲೆಕ್ಕವಿಲ್ಲ. ಹೀಗಾಗಿ ಹಾಸ್ಟೆಲ್‌ಗಳ ನಿರ್ವಹಣೆಗಾಗಿ ಮೇಲ್ವಿಚಾರಣಾ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಂಗಾಮಿ ಸಿಜೆ ಎಚ್.ಜಿ.ರಮೇಶ್, ಮುಖ್ಯ ಕಾರ್ಯದರ್ಶಿಗಳು ಈ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಬೇಕು ಎಂದು ವೌಖಿಕವಾಗಿ ಸೂಚಿಸಿದರು. ಅರ್ಜಿಯ ಸಂಬಂಧ ಎಲ್ಲ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ವಿಚಾರಣೆಯನ್ನು 2018ರ ಜ.11ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News