ದ.ಕ. ಸಹಿತ ರಾಜ್ಯದ ಹಲವೆಡೆ ಸರಕಾರಿ ಅಧಿಕಾರಿಗಳ ಕಚೇರಿ, ಮನೆ ಮೇಲೆ ಎಸಿಬಿ ದಾಳಿ

Update: 2017-12-13 06:40 GMT
ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿ

ಬೆಂಗಳೂರು, ಡಿ.13: ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವು ಇಂದು ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದೆ. ದಕ್ಷಿಣ ಕನ್ನಡ, ಬಳ್ಳಾರಿ, ಧಾರವಾಡ, ತುಮಕೂರು ಹಾಗೂ ಹುಬ್ಬಳ್ಳಿಗಳಲ್ಲಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್.ಮಿರಾಂಡ ಅವರ ಮನೆ ಹಾಗೂ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

ಎಸಿಬಿ ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಿರಾಂಡ ಅವರ ಬಂಟ್ವಾಳದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಬಳಿಕ ಮಂಗಳೂರಿನ ತಾಲೂಕಿನ ತೋಕೂರು ಪಕ್ಷಿಕೆರೆಯಲ್ಲಿರುವ ಮಿರಾಂಡ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಿರಾಂಡ ಅವರು ಇನ್ನೂ 3 ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಲಿರುವರು.

ತುಮಕೂರಿನ ಕೊರಟಗೆರೆಯ ಪಿಡಬ್ಲ್ಯುಡಿ ಎಇಇ ಜಗದೀಶ್ ಅವರ ತುಮಕೂರು ನಗರದ ಸರಸ್ವತಿಪುರಂನಲ್ಲಿರುವ ಮನೆ ಮೇಲೆ ದಾಳಿ ಭ್ರಷ್ಟಾಚಾರ ವಿರೋಧಿ ದಳದ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ತುಮಕೂರು ಎಸಿಬಿ ಡಿವೈಎಸ್ಪಿ ಜಿ.ಎನ್.ಮೋಹನ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಜಗದೀಶ್ ಅವರು ಕೊರಟಗೆರೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಬಳ್ಳಾರಿಯಲ್ಲಿ ಪ್ರದೇಶಾಭಿವೃದ್ಧಿ ನಿಗಮದ ಅಧಿಕಾರಿಯ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಧಾರವಾಡ ನಗರದ ಎಸಿಎಫ್ ಮನೆ ಮೇಲೆ ಇಬ್ಬರು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕಲಬುರ್ಗಿಯಲ್ಲಿರುವ ಸಣ್ಣ ನೀರಾವರಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೆ ಮೇಲೆ ಕೂಡ ದಾಳಿ ನಡೆದಿದೆ. ಅಲ್ಲದೆ ಹುಬ್ಬಳ್ಳಿ, ಚಿಕ್ಕಬಳ್ಳಾಪುರದಲ್ಲೂ ಎಸಿಬಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News