ಸಹಾಯಧನ ಅರ್ಜಿ ಸ್ವೀಕರಿಸಲು ನಿರ್ಲಕ್ಷ: ಆಟೊ ಚಾಲಕರ ಆರೋಪ

Update: 2017-12-13 17:21 GMT

ಬೆಂಗಳೂರು, ಡಿ.13: ಸಾರಿಗೆ ಇಲಾಖೆಯಿಂದ ಆಟೊ ರಿಕ್ಷಾ ಚಾಲಕರಿಗೆ ಅನ್ಯಾಯವಾಗುತ್ತಿದ್ದು, ಸಹಾಯಧನಕ್ಕಾಗಿ ಲಾನುಭವಿಗಳು ಅರ್ಜಿ ಸಲ್ಲಿಸಿದರೆ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್ ಸಿಐಟಿಯು ಆರೋಪಿಸಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ನಗರದಲ್ಲಿ 2 ಸ್ಟ್ರೋಕ್ ಆಟೊ ರಿಕ್ಷಾ ರದ್ದುಗೊಳಿಸಿದ್ದ ಸರಕಾರ 2 ಸ್ಟ್ರೋಕ್ ರಹದಾರಿಯಲ್ಲಿ ವಾಹನ ಬದಲಾಯಿಸಿ 4 ಸ್ಟ್ರೋಕ್ ವಾಹನ ಕೊಂಡರೆ ಸಾರಿಗೆ ಇಲಾಖೆ ಸಂಗ್ರಹಿಸುವ ಹಸಿರು ತೆರಿಗೆ ಮೂಲಕ 30 ಸಾವಿರ ರೂ. ಸಹಾಯ ಧನ ನೀಡುವುದಾಗಿ ಹೇಳಿತ್ತು. ಆದರೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಹೋದರೆ ಯಾರೊಬ್ಬರೂ ಸ್ವೀಕರಿಸುತ್ತಿಲ್ಲ ಎಂದು ದೂರಿದರು.

ಮೋಟಾರು ವಾಹನ ಕಾಯಿದೆಯಲ್ಲಿ ಯಾವುದೇ ನೋಂದಣಿಯಾಗಿರುವ ವಾಹನವನ್ನು ರದ್ದು ಮಾಡಲು ಅವಕಾಶ ಇರುವುದಿಲ್ಲ. ಆದಾಗಿಯೂ ಇದನ್ನು ದುರುಪಯೋಗ ಪಡಿಸಿಕೊಂಡ ಸಾರಿಗೆ ಇಲಾಖೆ ಹಳೇ ರಹದಾರಿಗೆ 4 ಸ್ಟ್ರೋಕ್ ಆಟೊ ಖರೀದಿ ಮಾಡುವವರು 2 ಸ್ಟ್ರೋಕ್ ಆಟೊವನ್ನು ಸ್ಕ್ರಾಪ್ ಮಾಡಲು ಘಟಕಗಳನ್ನು ಸ್ಥಾಪಿಸಿದೆ. ಇದರಿಂದ ಆಟೊ ಚಾಲಕರಿಗೆ ಆರ್ಥಿಗವಾಗಿ ನಷ್ಟವಾಗಲಿದ್ದು, ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ ಎಂದ ಅವರು, ಸಾಲದೆಂದು ಆಟೊ ರಿಕ್ಷಾ ಪರ್ಮಿಟ್ ಕುರಿತು ಸಾರಿಗೆ ಪ್ರಾಧಿಕಾರದೊಂದಿಗೆ ಚರ್ಚಿಸದೆ ಇ-ಪರ್ಮಿಟ್ ಜಾರಿಗೆ ಇಲಾಖೆ ಮುಂದಾಗಿದೆ. ಒಟ್ಟಾರೆ ಇಲಾಖೆ ಯಾವುದೇ ಕ್ರಮ ಕೈಗೊಂಡರೂ ಆಟೊ ಚಾಲಕರಿಗೆ ಸಮಸ್ಯೆ ಆಗುವ ರೀತಿಯಲ್ಲಿರುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.

2 ಸ್ಟ್ರೋಕ್ ಆಟೊ ರಿಕ್ಷಾದಿಂದ 4 ಸ್ಟ್ರೋಕ್‌ಗೆ ಬದಲಾಯಿಸಿಕೊಂಡಿರುವವರಿಗೆ ತಕ್ಷಣವೇ 30 ಸಾವಿರ ರೂ. ಸಹಾಯಧನ ನೀಡಬೇಕು. ಇನ್ನು ಮುಂದೆ ಬದಲಾಯಿಸಿಕೊಳ್ಳುವವರಿಗೆ ಸಬ್ಸಿಡಿ ಹಣ 30ರಿಂದ 50 ಸಾವಿರಕ್ಕೆ ಏರಿಕೆ ಮಾಡಬೇಕು. ಈಗಾಗಲೇ ನೋಂದಣಿಯಾಗಿರುವ 2 ಸ್ಟ್ರೋಕ್ ಆಟೊಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು. ಓಲಾ ಊಬರ್‌ಗಳನ್ನು ನಿಯಂತ್ರಿಸಿ, ಸರಕಾರ ನಿಗದಿ ಮಾಡಿರುವ ದರಗಳಲ್ಲಿ ಫೇರ್ ಮೀಟರ್ ಮೂಲಕ ಪ್ರಯಾಣಿಕರಿಂದ ಹಣ ಪಡೆಯುವಂತೆ ನಿಯಮ ರೂಪಿಸಬೇಕು. ಪರ್ಮಿಟ್ ಆಧಾರ್ ಲಿಂಕ್ ಮತ್ತು ಥಂಬ್ ಇಂಪ್ರೆಷನ್ ವ್ಯವಸ್ಥೆ ಜಾರಿಗೊಳಿಸಿವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News