ಪರಿಶಿಷ್ಟರ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಎಚ್.ಡಿ.ದೇವೇಗೌಡ

Update: 2017-12-13 17:34 GMT

ಬೆಂಗಳೂರು, ಡಿ.13: ಪರಿಶಿಷ್ಟ ಜಾತಿ, ಪಂಗಡದವರನ್ನು ಕೇವಲ ಮತಗಳಿಗಾಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷ, ಅವರ ಸರ್ವಾಂಗೀಣ ಅಭಿವೃದ್ಧಿಗೆ ಯಾವುದೆ ಕಾಳಜಿಯನ್ನು ವಹಿಸಿಲ್ಲ. ಪರಿಶಿಷ್ಟರ ಇಂದಿನ ದುಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಆರೋಪಿಸಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಘಟಕಗಳ ‘ದಲಿತರ ನಡಿಗೆ-ಕುಮಾರಣ್ಣನ ಕಡೆಗೆ’ ಕಾರ್ಯಕರ್ತರ ಮಹಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿ ನವ ಕರ್ನಾಟಕ ನಿರ್ಮಾಣ ಮಾಡಲು ಒಂದು ತಿಂಗಳ ಯಾತ್ರೆ ಹೊರಟಿದ್ದಾರೆ. ಐದು ವರ್ಷ ಏನು ಕೆಲಸ ಮಾಡಿದ್ದಾರೆ. ಮೂಲ ಕಾಂಗ್ರೆಸ್‌ನವರು ಡಿ.28ರಿಂದ ಮುಳಬಾಗಿಲಿನಿಂದ ಪ್ರವಾಸ ಮಾಡಲು ಹೊರಟಿದ್ದಾರೆ. ಮೂಲ ಕಾಂಗ್ರೆಸಿಗರು ಒಂದು ಕಡೆ, ನಕಲಿ ಕಾಂಗ್ರೆಸಿಗರು ಒಂದು ಕಡೆ ಪ್ರವಾಸ ಮಾಡುತ್ತಿದ್ದಾರೆ ಎಂದು ದೇವೇಗೌಡ ವ್ಯಂಗ್ಯವಾಡಿದರು.

ಬಸವಣ್ಣನ ನಾಡು ಬಸವಕಲ್ಯಾಣದಿಂದ ಸಿದ್ದರಾಮಯ್ಯ ಪ್ರವಾಸ ಹೊರಟ್ಟಿರುವ ಉದ್ದೇಶವೇನು? ಲಿಂಗಾಯತ ಸಮುದಾಯವನ್ನು ನುಚ್ಚು ನೂರು ಮಾಡಿರುವ ಸಿದ್ದರಾಮಯ್ಯ, ಒಡೆದು ಆಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ಇಬ್ಬರು ಸಚಿವರನ್ನು ಬಿಟ್ಟಿದ್ದಾರೆ ಎಂದು ದೇವೇಗೌಡ ಆರೋಪಿಸಿದರು.

ಪರಿಶಿಷ್ಟ ಸಮಾಜದ ಸಚಿವರು ಎಷ್ಟು ದುಂದುವೆಚ್ಚ ಮಾಡಿದ್ದಾರೆ ಎಂಬುದು ಗೊತ್ತು. ನನ್ನ ಆಡಳಿತದಲ್ಲಿ ಯಾವ ಅಕ್ರಮವು ಮಾಡಿಲ್ಲ ಎಂದು ಹೇಳಿಕೊಂಡು ಯಾತ್ರೆ ಹೊರಟಿರುವ ಮುಖ್ಯಮಂತ್ರಿ, 5 ವರ್ಷದ ಸಾಧನೆ ಹೇಳಲು 600 ಕೋಟಿ ರೂ.ಗಳನ್ನು ಸರಕಾರ ವ್ಯಯ ಮಾಡುತ್ತಿದೆ ಎಂದು ಅವರು ದೂರಿದರು.

ವಿದೇಶಿ ಕಂಪೆನಿಗೆ ಸರಕಾರದ ಸಾಧನೆಯನ್ನು ಪ್ರಚಾರ ಮಾಡುವ ಗುತ್ತಿಗೆ ನೀಡಿದೆ. ಇದು ಮಾರ್ಕೆಟಿಂಗ್ ಸರಕಾರ. ಐದು ವರ್ಷದ ಹಿಂದೆ ಮುಖ್ಯಮಂತ್ರಿ ಆಯ್ಕೆ ವೇಳೆ ನಿಮ್ಮ ಪರವಾಗಿ 90 ಜನ ಕೈ ಎತ್ತಿದರು. ಅವರನ್ನು ಒಂದುಗೂಡಿಸಲು ಎಲ್ಲಿಂದ ಸಂಪನ್ಮೂಲ ತಂದ್ರಿ ಎಂದು ದೇವೇಗೌಡ ಪ್ರಶ್ನಿಸಿದರು.

ನವ ಕರ್ನಾಟಕ ಯಾತ್ರೆಗೆ ಪ್ಯಾಕೇಜ್ ಮಾಡಿದ್ದನ್ನು ನೋಡಿದರೆ ನಾಚಿಕೆ ಆಗುತ್ತದೆ. ನಾನಂತೂ ಇಂತಹ ಮುಖ್ಯಮಂತ್ರಿಯನ್ನ ನೋಡಿಲ್ಲ. ಕುಮಾರಸ್ವಾಮಿಗೆ 115 ಸೀಟಿಗೂ ಮೀರಿ ಶಕ್ತಿ ಕೊಡಬೇಕು. ಆಗ ಮಾತ್ರ ಎಲ್ಲ ಆಸೆಗಳು ಈಡೇರಲಿವೆ. ಇನ್ನೊಬ್ಬರ ಮನೆಗೆ ಹೋಗುವ ಸಂದರ್ಭ ಬರುವುದಿಲ್ಲ ಎಂದು ಅವರು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ದಲಿತ ಸಮಾವೇಶ ಯಶಸ್ವಿಯಾಗಿದೆ. ಜೀವನದ ಕೊನೆಯುಸಿರು ಇರೋವರೆಗೂ ನಾನು ಇದನ್ನು ಮರೆಯಲ್ಲ. ಕಳೆದ ರವಿವಾರ ತುಮಕೂರಿನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶವು ಯಶಸ್ವಿಯಾಗಿದೆ. ಇದೇ ಹುಮ್ಮಸ್ಸು ಇದ್ದಲ್ಲಿ ಬಹುಮತದ ಸರಕಾರ ತರಬಹುದು. ಚುನಾವಣೆ ಫಲಿತಾಂಶ ಬರೋವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದರು.

ಹಾಲು, ಅನ್ನ, ನೀರು ಕೊಟ್ಟಿದ್ದೇವೆ ಎಂದು ರಾಜ್ಯ ಸರಕಾರ ಜಾಹಿರಾತು ನೀಡುತ್ತಿದೆ. ಈ ಯೋಜನೆಗಳು ನಮ್ಮ ಸರಕಾರದಲ್ಲಿ ಜಾರಿಯಾಗಿದ್ದು. ಸರಕಾರ ಮದ್ಯದ ಬೆಲೆಯನ್ನು ಹೆಚ್ಚು ಮಾಡಿ ಬಡವರಿಂದ ವಸೂಲಿ ಮಾಡುತ್ತಿದೆ. ಆ ಹಣದಲ್ಲಿ ಅನ್ನ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಮೀಸಲಾತಿ ಒಂದರಿಂದಲೇ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ. ಮೀಸಲಾತಿ ಕಾರ್ಯಕ್ರಮಗಳು ಅರ್ಹರಿಗೆ ತಲುಪುತ್ತಿಲ್ಲ. ಮೀಸಲಾತಿಗೆ ಮೀರಿ ನಿಮ್ಮ ಅಭಿವೃದ್ಧಿ ಆಗಬೇಕಿದೆ. ಬಿಜೆಪಿಯ ನಾಯಕರು ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬರಲು ಹೊರಟಿದ್ದಾರೆ. ರಾಜ್ಯದಲ್ಲಿ ಬೆಂಕಿ ಹಚ್ಚೋಕೆ ಬಿಜೆಪಿ ಮುಂದಾಗಿದೆ. ಅಮಾಯಕರಿಗೆ ರಕ್ಷಣೆ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಅವರು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಸಾಧನೆ ಬಗ್ಗೆ ಶ್ವೇತಪತ್ರ ಹೊರಡಿಸಲಿ. 1ಲಕ್ಷ 28 ಸಾವಿರ ಕೋಟಿ ರೂ.ಸಾಲ ಮಾಡಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದೆ ನಿಮ್ಮ ದೊಡ್ಡ ಸಾಧನೆ. ಆ ಎಲ್ಲ ಹಣ ಏನು ಮಾಡಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲಿ 40 ವರ್ಷಗಳಿಂದ ದುಡಿದ ದಲಿತ ನಾಯಕರನ್ನೆ ಮೂಲೆಗುಂಪು ಮಾಡಿರುವ ಸಿದ್ದರಾಮಯ್ಯ, ಇನ್ನು ಯಾವ ದಲಿತರನ್ನು ಉದ್ಧಾರ ಮಾಡುತ್ತಾರೆ. ಕೆಪಿಸಿಸಿ ಅಧ್ಯಕ್ಷರು ಬೇಡಿಕೊಂಡ ಬಳಿಕ ಎಂಎಲ್ಸಿ ಮಾಡಿದ್ರಿ. ಉಪಮುಖ್ಯಮಂತ್ರಿ ಸ್ಥಾನ ಕೋಡಿ ಎಂದರೆ ಗೃಹ ಸಚಿವರನ್ನಾಗಿ ಮಾಡಿದ್ರಿ, ಆದರೆ, ಆಡಳಿತ ನಡೆಸಿದ್ದು ಮಾತ್ರ ಕೆಂಪಯ್ಯ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿ, ಕಾಂಗ್ರೆಸ್ ದುರಾಡಳಿತದ ಸವಾಲನ್ನು ಎದುರಿಸಿ ನಾನು ಹೊರಟಿದ್ದೇನೆ. ನಾನು ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮುಂದೆ ಸಮ್ಮಿಶ್ರ ಸರಕಾರ ಬರುವ ವಾತಾವರಣ ತರಬೇಡಿ. ಎರಡು ರಾಷ್ಟ್ರೀಯ ಪಕ್ಷಗಳಿಗೆ 10 ವರ್ಷ ಅವಕಾಶ ನೀಡಿದ್ದೀರಾ? ನಮಗೆ ಒಂದು ಅವಕಾಶ ನೀಡಿ ಎಂದು ಅವರು ಕೋರಿಕೊಂಡರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಉಪ ಸಭಾಪತಿ ಮರಿತಿಬ್ಬೆಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಮರಿಲಿಂಗೇಗೌಡ, ಎಚ್.ವಿಶ್ವನಾಥ್, ಶಾಸಕರಾದ ಪಿಳ್ಳಮುನಿಶಾಮಪ್ಪ, ಶಿವಲಿಂಗೇಗೌಡ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಕಾಂತರಾಜು, ಬಿಬಿಎಂಪಿ ಉಪ ಮೇಯರ್ ಪದ್ಮಾವತಿ, ಸೇರಿದಂತೆ ಹಲವು ದಲಿತ ನಾಯಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ದಲಿತರಿಗೆ ಪ್ರತ್ಯೇಕ ಬಜೆಟ್‌ಗೆ ಮನವಿ
ಜೆಡಿಎಸ್ ಅಧಿಕಾರಕ್ಕೆ ಬರುತ್ತೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂಬ ನಂಬಿಕೆ ಇದೆ. ದಲಿತರಿಗೆ ಪ್ರತ್ಯೇಕ ಬಜೆಟ್ ಮಂಡಿಸಲಿ ಎಂದು ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಅನ್ನದಾನಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News