ಇರಾನ್‌ನಲ್ಲಿ ಮತ್ತೆ ಭೂಕಂಪ: 58 ಮಂದಿಗೆ ಗಾಯ

Update: 2017-12-13 17:39 GMT

ಟೆಹರಾನ್ (ಇರಾನ್), ಡಿ. 13: ಹಲವಾರು ಪಶ್ಚಾತ್ ಕಂಪನಗಳ ಬಳಿಕ ದಕ್ಷಿಣ ಇರಾನ್‌ನಲ್ಲಿ ಇನ್ನೊಂದು ಭೂಕಂಪ ಸಂಭವಿಸಿದೆ ಎಂದು ದೇಶದ ಮಾಧ್ಯಮಗಳು ವರದಿ ಮಾಡಿವೆ.

ರಾಜಧಾನಿ ಟೆಹರಾನ್‌ನಿಂದ ಸುಮಾರು 700 ಕಿಲೋಮೀಟರ್ ದೂರದಲ್ಲಿರುವ ಕರ್ಮಲ್ ಪ್ರಾಂತದ ಹಜ್ದಕ್ ಗ್ರಾಮದಲ್ಲಿ ಬುಧವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿದ್ದ ಭೂಕಂಪ ಸಂಭವಿಸಿದೆ ಎಂದು ‘ಇಸ್ನಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದ್ದು 58 ಮಂದಿ ಗಾಯಗೊಂಡಿದ್ದಾರೆ. ಭೂಕಂಪ ಅನುಭವಕ್ಕೆ ಬರುತ್ತಿದ್ದಂತೆಯೇ ಜನರು ಮನೆಗಳಿಂದ ಹೊರಗೋಡಿದರು.

ಈ ಭೂಕಂಪದ ಬಳಿಕ ಕಡಿಮೆ ತೀವ್ರತೆಯ ಹಲವಾರು ಪಶ್ಚಾತ್ ಕಂಪನಗಳು ಈ ವಲಯದಲ್ಲಿ ಸಂಭವಿಸಿವೆ.

ಭೂಕಂಪ ವಲಯದಲ್ಲಿ ಇರಾನ್

ಇರಾನ್ ಪ್ರಮುಖ ಭೂಕಂಪ ವಲಯದಲ್ಲಿದೆ ಹಾಗೂ ಇಲ್ಲಿ ಪ್ರತಿದಿನವೆಂಬಂತೆ ಭೂಕಂಪಗಳು ನಡೆಯುತ್ತವೆ.

ನವೆಂಬರ್‌ನಲ್ಲಿ ಪಶ್ಚಿಮ ಇರಾನ್‌ನಲ್ಲಿ ಸಂಭವಿಸಿದ 7.2ರ ತೀವ್ರತೆಯ ಭೂಕಂಪದಲ್ಲಿ 600ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

2003ರಲ್ಲಿ ನಡೆದ 6.6ರ ತೀವ್ರತೆಯ ಭೀಕರ ಭೂಕಂಪವು ಐತಿಹಾಸಿಕ ನಗರ ಬಾಮ್‌ನ್ನು ನೆಲಸಮಗೊಳಿಸಿತ್ತು. ಆ ಪ್ರಾಕೃತಿಕ ವಿಕೋಪದಲ್ಲಿ 26,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News