ಫೆ.1ರಿಂದ ಜಿಎಸ್‌ಟಿಯ ಇ-ವೇ ಬಿಲ್ ಜಾರಿ : ಸುಶೀಲ್‌ ಕುಮಾರ್ ಮೋದಿ

Update: 2017-12-16 14:30 GMT

ಬೆಂಗಳೂರು, ಡಿ.16: ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸುವುದರ ಮೇಲೆ ನಿಗಾ ಇರಿಸಲು ಇ-ವೇ ಬಿಲ್‌ಗಳನ್ನು ಮುಂದಿನ ಫೆಬ್ರವರಿ 1ರಿಂದ ಜಾರಿಗೆ ತರಲಾಗುವುದು ಎಂದು ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಜಿಎಸ್‌ಟಿ ಮಂಡಳಿಯ ಅಧ್ಯಕ್ಷ ಸುಶೀಲ್‌ಕುಮಾರ್ ಮೋದಿ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.15 ರಿಂದ ಪರೀಕ್ಷಾರ್ಥ ಪ್ರಯೋಗ ಆರಂಭಗೊಳ್ಳಲಿದೆ. ಮಾಹಿತಿ ತಂತ್ರಜ್ಞಾನ ಜಾಲವು ಜಿಎಸ್‌ಟಿಯ ಬೆನ್ನೆಲುಬು ಆಗಿದೆ. ಕೇಂದ್ರ ವಿತ್ತ ಸಚಿವರು ಇಂದು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಎಲ್ಲ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದರು.

ಸರಕು ಸಾಗಿಸುವ ಮುಂಚೆಯೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಜಿಎಸ್‌ಟಿ ಪದ್ಧತಿ ಇದೇ ವರ್ಷದ ಜುಲೈಯಿಂದ ಜಾರಿಗೆ ಬಂದಿದ್ದು, ಇದರ ಅಂಗವಾದ ಇ-ವೇ ಬಿಲ್ ಪದ್ಧತಿಯಿಂದ ತೆರಿಗೆ ನೋಂದಣಿ, ಆನ್‌ಲೈನ್ ತೆರಿಗೆ ವಹಿವಾಟು ಹಾಗೂ ಇತರ ವಾಣಿಜ್ಯ ವ್ಯವಹಾರಗಳಿಗೆ ಬಹಳ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

 ಜಿಎಸ್‌ಟಿ ಪ್ರಾರಂಭವಾದಾಗಿನಿಂದಲೇ ಈ ಇ-ವೇ ಬಿಲ್‌ನನ್ನು ಜಾರಿಗೊಳಿಸಲು ಪ್ರಯತ್ನ ನಡೆಯಿತಾದರೂ ಅದು ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲಿ ಇ-ವೇ ಬಿಲ್ ಸುವಿಧಾ ಬಿಲ್ ಮುಂತಾದ ಹೆಸರಿನಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಸುಶೀಲ್‌ಕುಮಾರ್ ಮೋದಿ ಹೇಳಿದರು.

ಇದರ ತಂತ್ರಾಂಶವನ್ನು ಅಭಿವೃದ್ದಿಪಡಿಸಲು ಸರಕಾರಿ ಸಾಮ್ಯದ ಎನ್‌ಐಸಿ(ನ್ಯಾಷನಲ್ ಇನ್ಫರ್ಮೆಶನ್ ಸೆಂಟರ್)ಗೆ ಸೂಚಿಸಲಾಗಿದ್ದು, ಇದಕ್ಕಾಗಿ ಮುಂಗಡವಾಗಿ 40 ಕೋಟಿ ರೂ.ಗಳನ್ನು ಜಿಎಸ್‌ಟಿ ಕೌನ್ಸಿಲ್ ವತಿಯಿಂದ ಪಾವತಿಸಲಾಗಿದೆ. ಇಂದಿನ ಸಭೆಯಲ್ಲಿ ಎನ್‌ಐಸಿಯವರು ಅದರ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.

ಅಕ್ಟೋಬರ್‌ನಲ್ಲಿ 9-10 ಸಾವಿರ ಕೋಟಿ ರೂ.ಆದಾಯ ಕೊರತೆಯಾಗಿದೆ. ಜಿಎಸ್‌ಟಿ ಬಂದ ಬಳಿಕ ಚೆಕ್‌ಪೋಸ್ಟ್‌ಗಳು ಇಲ್ಲದೆ ಇದ್ದರಿಂದ ಅಕ್ರಮವಾಗಿ ಸರಕುಗಳ ಸಾಗಾಟ ನಡೆದಿದೆ. ಆದಾಯ ಸೋರಿಕೆಯನ್ನು ತಡೆಗಟ್ಟಲು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಇ-ವೇ ಬಿಲ್ ಕೆಲವು ರಾಜ್ಯಗಳಲ್ಲಿ ಮಾತ್ರ ಜಾರಿಯಲ್ಲಿದೆ. ಇದರಿಂದಾಗಿ, ಅಕ್ರಮ ವಹಿವಾಟು ನಡೆಯುತ್ತಿವೆ. ಇದನ್ನೆಲ್ಲ ತಡೆಗಟ್ಟಲು ಇ-ವೇ ಬಿಲ್ ಸಹಕಾರಿಯಾಗಲಿದೆ. ಇನ್ಫೋಸಿಸ್ ಜೊತೆ ಈ ಸಂಬಂಧ ಒಡಂಬಡಿಕೆ ಮಾಡಿಕೊಂಡಿದ್ದು, ವ್ಯಾಪಾರ ವಹಿವಾಟು ಹಿಂದಿಗಿಂತ ಸುಲಭವಾಗಲಿದೆ ಎಂದು ಸುಶೀಲ್‌ಕುಮಾರ್ ಮೋದಿ ತಿಳಿಸಿದರು.

ತೆರಿಗೆ ಪಾವತಿದಾರರಿಗೆ ಇ-ವೇ ಪದ್ಧತಿ ಸಹಾಯಕವಾಗಿದೆ. ಇದರಿಂದ ರಫ್ತು ವ್ಯವಹಾರ ನವೆಂಬರ್‌ನಿಂದ ಶೇ 30.6ರಷ್ಟು ಹೆಚ್ಚಿದೆ. ಜಿಎಸ್‌ಟಿ ಪದ್ಧತಿ ಜಾರಿಗೊಂಡಾಗಿನಿಂದ 37 ತೆರಿಗೆಗಳು ರದ್ದಾಗಿ ಏಕರೂಪದ ತೆರಿಗೆ ಜಾರಿಗೊಂಡಿದೆ ಎಂದು ಸುಶೀಲ್‌ಕುಮಾರ್ ಮೋದಿ ತಿಳಿಸಿದರು.

ಇನ್‌ಫೋಸಿಸ್ ಮತ್ತು ಜಿಎಸ್‌ಟಿ ನೆಟ್‌ವರ್ಕ್ ಕಾರ್ಯವೈಖರಿ ತೃಪ್ತಿ ತಂದಿದೆ. ಶೇ.80 ರಷ್ಟು ದೂರುಗಳು ಕಡಿಮೆಯಾಗಿವೆ. ಜಿಎಸ್‌ಟಿಎನ್ ಅಡಿ 65 ಕೋಟಿ ಇನ್‌ವಾಯ್ಸಿ ಪ್ರೊಸೆಸ್ ಆಗಿದ್ದುಮ, 3.25 ಕೋಟಿ ರಿಟರ್ನ್ ಸಲ್ಲಿಕೆಯಾಗಿದೆ. ಈವರೆಗೆ 1.40 ಕೋಟಿ ‘ನಂಬರ್ ಆ್ ಪೇಮೆಂಟ್ ಟ್ರಾನ್ಸಾಕ್ಷನ್’ ಆಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಎಸ್‌ಟಿ ನೆಟ್‌ವರ್ಕ್ ಅಧ್ಯಕ್ಷ ಎ.ಬಿ.ಪಾಂಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News