ಐಟಿ ಅಧಿಕಾರಿಗಳ ಸೋಗಿನಲ್ಲಿ ಕಳವು ಪ್ರಕರಣ : ಇಬ್ಬರ ಬಂಧನ

Update: 2017-12-16 18:35 GMT

ಬೆಂಗಳೂರು, ಡಿ.16: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಇಬ್ಬರು ದುಷ್ಕರ್ಮಿಗಳನ್ನು ವಿದ್ಯಾರಣ್ಯಪುರ ಹಾಗೂ ವಿವೇಕನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ವಿವೇಕನಗರದ ಅಬ್ದುಲ್ ನಾಸೀರ್(24) ಹಾಗೂ ಮುಹಮ್ಮದ್(25) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ ನಗದು ಚಿನ್ನದ ಸರ ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಘಟನೆ ವಿವರ: ದೊಡ್ಡಬೊಮ್ಮಸಂದ್ರದಲ್ಲಿ ಪ್ರಾವಿಜನ್ ಸ್ಟೋರ್ ನಡೆಸುತ್ತಿರುವ ಲಾವಣ್ಯ ಅವರು ಡಿ.14ರ ರಾತ್ರಿ 10:30ರ ವೇಳೆ ಅಂಗಡಿ ಬಾಗಿಲು ಹಾಕಿಕೊಂಡು ಹತ್ತಿರದ ಮನೆಗೆ ನಡೆದುಕೊಂಡು ಹೊರಟಿದ್ದಾರೆ.

ಅಷ್ಟರಲ್ಲಿ ಅವರ ಮನೆಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮನೆ ಬಾಗಿಲು ಹಾಕಿಕೊಂಡಿದ್ದನ್ನು ನೋಡಿ ಒಳಗೆ ನುಗ್ಗಿ ಅವರ ಮನೆಯಲ್ಲಿದ್ದ 10 ವರ್ಷದ ಪುತ್ರ ಜಗನ್‌ನನ್ನು ಬೆದರಿಸಿ ಕಳವು ಮಾಡಿದ್ದರು ಎನ್ನಲಾಗಿದೆ.

ಮನೆಯೊಳಗೆ ಲಾವಣ್ಯ ಅವರು ಬಂದು ನೋಡಿದಾಗ ಜಗನ್ ಕೈಕಾಲು ಕಟ್ಟಿ ಕಳವು ಮಾಡಿರುವುದು ಕಂಡುಬಂದಿದ್ದು, ತಕ್ಷಣವೇ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿರುವ ಪೊಲೀಸರು ವಿವೇಕನಗರ ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಪುತ್ತೂರು ಮೂಲದ ಇಬ್ಬರು ಆರೋಪಿಗಳಲ್ಲಿ ಅಬ್ದುಲ್ ನಾಸೀರ್‌ಗೆ ಮೊದಲೇ ಲಾವಣ್ಯ ಪರಿಚಯವಿದ್ದರು ಎಂದು ತಿಳಿದುಬಂದಿದೆ. ಕಳೆದೊಂದು ವಾರದ ಹಿಂದೆ ಲಾವಣ್ಯ ಅವರ ಅಂಗಡಿ ಬಳಿ ಬಂದು ಅಬ್ದುಲ್ ಮಾತನಾಡಿಸಿಕೊಂಡು ಹೋಗಿದ್ದನು ಎನ್ನಲಾಗಿದೆ.

ಲಾವಣ್ಯ ಪುತ್ರ ಜಗನ್‌ಗೆ ಕೂಡ ಅಬ್ದುಲ್ ಪರಿಚಯವಿದ್ದ ಡಿ.14 ರಂದು ಅದೇ ಪರಿಚಯದ ಮೇಲೆ ಲಾವಣ್ಯ ಮನೆಗೆ ಬಂದಿದ್ದ ಜಗನ್ ಅಬ್ದುಲ್ ಜೊತೆ ಮತ್ತೊಬ್ಬ ಆರೋಪಿ ಇರುವುದನ್ನು ನೋಡಿ ಕಿರುಚಕೊಂಡಿದ್ದಾನೆ. ಆಗ ಇಬ್ಬರು ಸೇರಿ ಆತನ ಬಾಯಿಗೆ ಪ್ಲಾಸ್ಟರ್ ಹಾಕಿ ಹೊರಬಂದಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News