ಬಿಜೆಪಿ ಅಧಿಕಾರಕ್ಕೆ ಬಂದರೆ ಗೌರಿ ಹಂತಕರ ಬಂಧನ : ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

Update: 2017-12-17 12:31 GMT

ಬೆಂಗಳೂರು, ಡಿ. 17: ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಬಂಧಿಸಲು ರಾಜ್ಯ ಸರಕಾರ ಮೀನಾಮೇಷ ಏಣಿಸುತ್ತಿದ್ದು, ತನಿಖೆಯನ್ನು ಪೂರ್ಣಗೊಳಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಆ ಪ್ರಕರಣದ ನಿಸ್ಪಕ್ಷಪಾತ ತನಿಖೆ ನಡೆಸಿ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ರವಿವಾರ ನಗರದ ಮುರುಗೇಶ್‌ಪಾಳ್ಯದ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕನ್ನಡದಲ್ಲಿ ಭಾಷಣ ಆರಂಭಿಸಿ ‘ಎಲ್ಲರಿಗೂ ನಮಸ್ಕಾರ ಹೇಳಿದರು. ಮಾಜಿ ಸಿಎಂ ಬಿಎಸ್‌ವೈ 6128 ಕಿ.ಮೀ ಪರಿವರ್ತನಾ ಯಾತ್ರೆ ನಡೆಸಿದ್ದು, ಕರ್ನಾಟಕದಲ್ಲಿ ಪರಿವರ್ತನೆ ಆರಂಭವಾಗಿದೆ ಎಂದರು.

ಎರಡ್ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಸರಕಾರ ಮನೆಯ ಹಾದಿ ಹಿಡಿಯಲಿದ್ದು, ಬಿಎಸ್‌ವೈ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬರಲಿದೆ ಎಂದ ಅವರು, ನನಗೆ ಕರ್ನಾಟಕದೊಂದಿಗೆ ವಿಶೇಷ ಸಂಬಂದವಿದೆ. 1968ರಲ್ಲಿ ಉಡುಪಿಯಲ್ಲಿ ನಗರಸಭೆಯಲ್ಲಿ ಜನಸಂಘದ ಮೂಲಕ ಅಧಿಕಾರ ಹಿಡಿದಿದ್ದೆವು. ಆಗ ನಾನು ಯುಪಿಯಲ್ಲಿ ಎಬಿವಿಪಿಯಲ್ಲಿದ್ದೆ. ಆಗ ಬಹಳ ಸಂತೋಷ ಪಟ್ಟಿದ್ದೆವು. ರಾಜ್ಯದಲ್ಲಿ ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ಗೊತ್ತಾಗಿತ್ತು

ಭ್ರಷ್ಟ ಸರಕಾರ: ಸ್ಟೀಲ್ ಬ್ರಿಡ್ಜ್ ಹಗರಣ, ಸರಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ಮಿತಿಮೀರಿದೆ. ಲೋಕಾಯುಕ್ತ ಸಂಸ್ಥೆ ಮುಚ್ಚಿದ್ದು, ಎಸಿಬಿಯನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಸ ವಿಲೇವಾರಿಯಲ್ಲೂ ಅವ್ಯವಹಾರ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರೈತರ ಆತ್ಮಹತ್ಯೆ:ರಾಜ್ಯದಲ್ಲಿನ ರೈತರು ಸಂಕಷ್ಟದಲ್ಲಿದ್ದು, ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಪ್ರತಿ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದ ಅವರು, ದಕ್ಷ ಅಧಿಕಾರಿಗಳನ್ನು ಸಂಚು ರೂಪಿಸಿ ಕೊಲ್ಲಲಾಗುತ್ತಿದೆ. ಸಾಮಾಜಿಕ ಕಾರ್ಯಕರ್ತರ ಹತ್ಯೆಯೂ ನಡೆಯುತ್ತಿವೆ.

ಆದರೆ, ರಾಜ್ಯ ಸರಕಾರ ಸಾಲದಲ್ಲಿ ಮುಳುಗಿಹೋಗಿದೆ. 2.5ಲಕ್ಷ ಕೋಟಿ ರೂ. ಸಾಲ ಜನರ ತಲೆಯ ಮೇಲಿದೆ. ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಗುರಿ ಎಂದ ರಾಜನಾಥ್ ಸಿಂಗ್, ಟಿಪ್ಪು ಜಯಂತಿ ಬದಲಿಗೆ ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ ಜಯಂತಿ ಆಚರಿಸಲಿ ಎಂದು ಸಲಹೆ ನೀಡಿದರು.

ಖಾಲಿ ಕುರ್ಚಿ ದರ್ಶನ: ಪರಿವರ್ತನಾ ರ‍್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಬಹುತೇಕ ಕುರ್ಚಿಗಳು ಖಾಲಿ ಇದ್ದವು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಅಶೋಕ್, ರಘು, ನಂದೀಶ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ಬೆಂಕಿ ಹಚ್ಚುವ ಕೆಲಸ ಮಾಡುವುದು ಕಾಂಗ್ರೆಸ್. ದೇಶದಲ್ಲಿನ ಕೋಮು ಗಲಭೆಗೆ ಯಾರು ಕಾರಣ?, 1984ರ ಸಿಖ್ ಹತ್ಯಾಕಾಂಡಕ್ಕೆ ಯಾರು ಕಾರಣ? ಬಿಜೆಪಿ ಎಂದು ಅಂತಹ ಕೃತ್ಯಕ್ಕೆ ಕೈಹಾಕುವುದಿಲ್ಲ. ಬದಲಿಗೆ ಬೆಂಕಿ ಆರಿಸುವ ಕೆಲಸ ಮಾಡುತ್ತಿದೆ’

-ರಾಜನಾಥ್ ಸಿಂಗ್ ಕೇಂದ್ರ ಗೃಹ ಸಚಿವ 

‘ಕರ್ನಾಟಕ ರಾಜ್ಯದಲ್ಲಿ 25 ಸೀಟು ಗೆಲ್ಲುತ್ತೀವಿ ಅಂತ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ನಾನು ಭರವಸೆ ಕೊಡಲಾ ಎಂದು ಸಮಾವೇಶದಲ್ಲಿದ್ದ ಕಾರ್ಯಕರ್ತರನ್ನು ಪ್ರಶ್ನಿಸಿದ ಕೇಂದ್ರ ಸಚಿವ ಅನಂತ್ ಕುಮಾರ್, ಬೆಂಗಳೂರು ಎನ್ನುವ ಬದಲು ಕರ್ನಾಟಕ ಎಂದು ತೀವ್ರ ಮುಜುಗರಕ್ಕೆ ಸಿಲುಕಿದರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News