ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಿದ್ದ : ರಾಜ್ಯಪಾಲ ವಜೂಭಾಯಿ ವಾಲಾ

Update: 2017-12-17 12:48 GMT

ಬೆಂಗಳೂರು, ಡಿ.17: ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಒಕ್ಕೂಟ ಮನವಿ ಸಲ್ಲಿಸಿದರೆ, ಅದನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ರಾಜ್ಯಪಾಲ ವಜೂಬಾಯಿ ವಾಲಾ ಹೇಳಿದ್ದಾರೆ.

ರವಿವಾರ ತುಳುಕೂಟದಿಂದ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ತುಳುನಾಡು ಉತ್ಸವ’ ಉದ್ಘಾಟನೆ ಮಾಡಿ ಮಾತನಾಡಿದ ಅವರು, ದೇಶದಲ್ಲಿರುವ ದ್ರಾವಿಡ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಗೆ ಸಾಂವಿಧಾನಿಕ ಮಾನ್ಯತೆ ನೀಡಲಾಗಿದೆ. ಅದೇ ರೀತಿ ತುಳು ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಅದಕ್ಕೂ ಸಾಂವಿಧಾನಿಕ ಮಾನ್ಯತೆ ಸಿಗಬೇಕಿದೆ ಎಂದರು.

ದೇಶದಲ್ಲಿ ಹಿಂದೂ, ಮುಸ್ಲಿಂ, ಬೌದ್ಧ, ಕ್ರೈಸ್ತ ಸೇರಿ ಹಲವು ಜಾತಿ-ಧರ್ಮಗಳಿಂದ ಕೂಡಿದ್ದು, ವಿಭಿನ್ನವಾದ ಭಾಷೆ ಮತ್ತು ಸಂಸ್ಕೃತಿ ಅನುಸರಿಸುತ್ತಿದ್ದೇವೆ. ಆದರೆ, ನಾವೆಲ್ಲರೂ ಮಾನವರು. ನಮ್ಮದೆಲ್ಲ ಮಾನವ ಧರ್ಮವಾಗಬೇಕೆಂದ ಅವರು, ಭಾಷೆ ಹೆಸರಿನಲ್ಲಿ ಜಗಳ ಬೇಡ. ಶಾಂತಿಯುತವಾಗಿ ಮನವಿ ಮಾಡಿ ಎಂದು ಅವರು ಸಲಹೆ ನೀಡಿದರು.

ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆಗಳು ನಡೆಯಲಿದ್ದು, ಈ ವೇಳೆ ಸಾಮಾನ್ಯ ಜನರ ಬೇಡಿಕೆಗಳ ಕಡೆ ರಾಜಕೀಯ ಮುಖಂಡರು ಆಸಕ್ತಿ ವಹಿಸುತ್ತಾರೆ. ಹಾಗೆಯೇ ನೀವು ನಿಮ್ಮ ಮನವಿ ಅಥವಾ ಬೇಡಿಕೆಯನ್ನು ಸಲ್ಲಿಸಿ, ಬಹುತೇಕ ಅದು ಈಡೇರುತ್ತದೆ ಎಂದ ಅವರು, ತುಳು ಸಮುದಾಯದ ನ್ಯಾಯಯುತವಾದ ಬೇಡಿಕೆ ಈಡೇರಿಸುವ ಕಡೆ ಗಮನ ಹರಿಸಬೇಕು ಎಂದರು.

ಏಕೀಕರಣಕ್ಕೂ ಮೊದಲು ಕರ್ನಾಟಕ ಎಂಬುದೇ ಇರಲಿಲ್ಲ. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಎಲ್ಲ ರಾಜ್ಯಗಳೂ ಸೇರಿ ಕರ್ನಾಟಕವಾಗಿದೆ ಎಂದ ಅವರು, ತುಳು ಭಾಷಿಕರದ್ದು ಪ್ರತ್ಯೇಕ ರಾಜ್ಯದ ಬೇಡಿಕೆಯಲ್ಲ. ಆದರೆ, ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಬೆೀಕು ಎಂಬುದಾಗಿದೆ ಎಂದು ನುಡಿದರು.

‘ಕಂಬಳ’ ನಡೆಸುವುದು ಪ್ರಾಣಿ ಮೇಲೆ ಹಿಂಸೆ ನಡೆಸಿದಂತೆ, ಜನರು ಐದು ಕಿ.ಮೀ ಓಡುತ್ತಾರೆ. ಇದರಿಂದಾಗಿ ಜನರಿಗೆ ಯಾವುದೇ ತೊಂದರೆಯಾಗಲ್ಲ. ಜನರಿಗೆ ಹೇಗೆ ಏನು ಆಗುವುದಿಲ್ಲವೋ, ಅದೇ ರೀತಿ ಪ್ರಾಣಿಗಳಿಗೆ ಏನೂ ಆಗುವುದಿಲ್ಲ. ಇಂತಹ ಕ್ರೀಡೆಗಳಿಂದ ಕೈ ಕಾಲುಗಳಿಗೆ ಬಲ ಬರುತ್ತದೆ. ಯಾರಲ್ಲಿ ಶಕ್ತಿಯಿದೆಯೋ ಅವರು ಗೆಲ್ಲುತ್ತಾರೆ. ಅದೇ ರೀತಿ ನೀವೂ ನಿಮ್ಮ ಬೇಡಿಕೆಯನ್ನು ಸಲ್ಲಿಸುತ್ತಿದ್ದರೆ, ಕೊನೆಗೊಂದು ದಿನ ಗೆಲ್ಲುತ್ತೀರ ಎಂದು ವಾಲಾ ತಿಳಿಸಿದರು.
ವಸತಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ಮಾತೃ ಭಾಷೆ ನೀಡುವ ಆನಂದ ಬೇರೆ ಭಾಷೆ ನೀಡಲು ಸಾಧ್ಯವಿಲ್ಲ. ನಮ್ಮ ಭಾಷೆ ಆನಂದ ಹಾಗೂ ಮಾನಸಿಕ ನೆಮ್ಮದಿ ನೀಡುತ್ತದೆ. ಇದು ಬೇರೆ ಭಾಷೆಯಿಂದ ಸಿಗುವುದಿಲ್ಲ. ಆದರೆ, ಕರ್ನಾಟಕದಲ್ಲಿ ಇದ್ದೇವೆ ಎಂದ ಮೇಲೆ ಕನ್ನಡ ಭಾಷೆಯನ್ನು ಮರೆಯಬಾರದು ಎಂದು ಹೇಳಿದರು.

ತುಳು ಕೂಟಕ್ಕೆ ಕಚೇರಿಗಾಗಿ ಸ್ಥಳ ನೀಡುವ ಕುರಿತು ಮನವಿ ಸಲ್ಲಿಸಿದೆ. ಕೆಂಗೇರಿ ಬಳಿ ಸಿಎ ಜಾಗಗಳಿವೆ. ಅರ್ಜಿ ಸಲ್ಲಿಸಿದರೆ ನೀಡಲಾಗುತ್ತದೆ ಎಂದು ಇದೇ ವೇಳೆ ಭರವಸೆ ನೀಡಿದರು.

ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಮಾತನಾಡಿ, ದಕ್ಷಿಣ ಭಾರತದ ಐದು ಭಾಷೆಗಳಲ್ಲಿ ತುಳು ಒಂದಾಗಿದೆ. ಆದರೆ, ಸಂವಿಧಾನಕ್ಕ ಸೇರ್ಪಡೆ ಮಾಡಲು ಅನೇಕ ಮಾನದಂಡಗಳಿವೆ ಎಂದ ಅವರು, ತುಳುವಿಗೆ ಲಿಪಿಯಿದೆ. ಈ ನಿಟ್ಟಿನಲ್ಲಿ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕಾದರೆ ಬಲಿಷ್ಟ ಹೋರಾಟ ಮಾಡಬೇಕು. ಜೊತೆಗೆ, ಸಾಹಿತಿಗಳು ಮತ್ತು ಸಾರ್ವಜನಿಕರ ಸಹಕಾರ ಬೇಕಾಗಿದೆ ಎಂದು ಹೇಳಿದರು.

ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಬೇಡಿಕೆ ಮಂಡಿಸಿದರೆ ಸಾಕಾಗುವುದಿಲ್ಲ. ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತುಳು ಸಾಹಿತಿಗಳು, ಚಿಂತಕರು ಈ ಕುರಿತು ಗಂಭೀರವಾದ ಚಿಂತನೆ ನಡೆಸಬೇಕು. ತುಳು ಭಾಷೆಯನ್ನು ಹೆಚ್ಚಿನ ಅಧ್ಯಯನಗಳು ನಡೆಯಬೇಕು ಎಂದ ಅವರು, ಉನ್ನತ ಹುದ್ದೆಗಳಲ್ಲಿ ತುಳು ಸಮುದಾಯ ಕಡಿಮೆ ಪ್ರಮಾಣದಲ್ಲಿ, ಹೆಚ್ಚು ಜನರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ತುಳು ಕೂಟದ ಅಧ್ಯಕ್ಷ ಕೆ.ಜಯರಾಮ್ ಸೂಡ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ವಿ.ರಾಜೇಂದ್ರ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಕಾರ್ಕಳ ಮೂಲದ ಸುದೀರ್ ಶೆಟ್ಟಿ ಎಂಬುವವರು ಮೂವತ್ತು ವರ್ಷಗಳಿಂದ ಸಂಗ್ರಹಿಸಿದ್ದ ಬ್ರಿಟಿಷರ ಕಾಲದ ವ್ಯವಹಾರಿಕ, ಪೂಜೆ-ಆರಾಧನೆಗೆ ಸಂಬಂಧಿಸಿದ ವಸ್ತುಗಳನ್ನು, ನೂರಾರು ವರ್ಷದ ಹಿಂದಿನ ಸಂಸ್ಕೃತ ಮಂತ್ರಗಳು, ತುಳು ಲಿಪಿ ಸಾಕ್ಷೀಕರಿಸುವ ಭಾಷೆಯ ತುಣುಕುಗಳನ್ನು ಪ್ರದರ್ಶಿನಕ್ಕಿಡಲಾಗಿತ್ತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News