ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆ ಕುರಿತು ಚರ್ಚೆ: ರಮೇಶ್ ಕುಮಾರ್ ಭರವಸೆ

Update: 2017-12-18 16:18 GMT

ಬೆಂಗಳೂರು, ಡಿ.18: ರಾಜ್ಯ ಸರಕಾರವು ಎಸ್ಸಿ-ಎಸ್ಟಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನ ಯೋಜನಾ ಗಾತ್ರದಲ್ಲಿ ಅನುದಾನ ಒದಗಿಸುತ್ತಿರುವ ರೀತಿಯಲ್ಲಿ ಅಲ್ಪಸಂಖ್ಯಾತರಿಗೂ ಶೇ.15ರಷ್ಟು ಅನುದಾನ ಮೀಸಲಿಡುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸಲ್ಲಿಸಿರುವ ಮನವಿಯನ್ನು ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಭರವಸೆ ನೀಡಿದರು.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಆಯೋಜಿಸಲಾಗಿದ್ದ ‘ಅಲ್ಪಸಂಖ್ಯಾತರ ಹಕ್ಕು ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಅಲ್ಪಸಂಖ್ಯಾತ ಸಮುದಾಯಗಳಿಗೆ ಒದಗಿಸಲಾಗುವ ಶೇ.15ರಷ್ಟು ಅನುದಾನದಲ್ಲಿ ಶೇ.10ರಷ್ಟು ಮುಸ್ಲಿಮರಿಗೆ, ಶೇ.5ರಷ್ಟು ಇನ್ನುಳಿದ ಅಲ್ಪಸಂಖ್ಯಾತ ವರ್ಗಗಳಿಗೆ ನಿಗದಿಪಡಿಸಬೇಕು. ಅನುದಾನ ಖರ್ಚಾಗದಿದ್ದರೆ ಅದನ್ನು ಮುಂದಿನ ಹಣಕಾಸು ವರ್ಷದಲ್ಲಿ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೋರಲಾಗಿದೆ. ಈ ವಿಚಾರವು ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಲ್ಲ. ಜೈನರು, ಸಿಖ್ಖರು, ಬೌದ್ಧರು ಹಾಗೂ ಪಾರ್ಸಿಗಳು ಇದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಎರಡನೆ ಸ್ಥಾನದಲ್ಲಿದ್ದು, ಅವರಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕಿದೆ ಎಂದು ಅವರು ಹೇಳಿದರು.

  ಜನಸಂಖ್ಯೆಗೆ ಅನುಗುಣವಾಗಿ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕಾನೂನಾತ್ಮಕವಾಗಿ ಕಲ್ಪಿಸಿಕೊಡುವ ಸಂಬಂಧ ಮೂರು ತಿಂಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಅಲ್ಪಸಂಖ್ಯಾತರು ಹೆಚ್ಚು ವಾಸಿಸುವ ಕಡೆಗಳಲ್ಲಿ ಅಂಗನವಾಡಿಗಳನ್ನು ತೆರೆಯಲು ಸರಕಾರ ಸಿದ್ಧವಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ (ಅಲ್ಪಸಂಖ್ಯಾತ) ಹೆಚ್ಚಿನ ಆರ್ಥಿಕ ಔದ್ಯೋಗಿಕ ಅವಕಾಶಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ರಮೇಶ್‌ಕುಮಾರ್ ತಿಳಿಸಿದರು.

ಬಡವರಿಗೆ ಗೌರವಯುತ ಜೀವನ ಕಲ್ಪಿಸಿಕೊಡಬೇಕಾದದ್ದು ಪ್ರತಿಯೊಂದು ನಾಗರಿಕ ಸರಕಾರದ ಜವಾಬ್ದಾರಿಯಾಗಿದೆ. ಕೆಲವರು, ಬೇರೆ ಬೇರೆ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ಜಗಳ ಹಚ್ಚಬೇಕು, ಜನರಿಗೆ ತೊಂದರೆ ನೀಡಬೇಕು. ಅದು ಬಿಟ್ಟು ಬೇರೆ ಕಾರ್ಯಕ್ರಮಗಳು ಅವರ ಮುಂದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡರಿಗೆ ರಮೇಶ್‌ಕುಮಾರ್ ಟೀಕಿಸಿದರು.

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಅಲ್ಪಸಂಖ್ಯಾತರ ವಿರುದ್ಧ ದಾಖಲಾಗುವ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು ಆ ಪ್ರಕರಣಗಳನ್ನು ಕಾನೂನು ರೀತ್ಯಾ ಪರಾಮರ್ಶಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಅರೆನ್ಯಾಯಿಕ ಶಾಸನಾತ್ಮಕ ಪ್ರಾಧಿಕಾರ ರಚಿಸಲು ಮುಂದಿನ ಹದಿನೈದು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆ ನೀಡಬೇಕು ಅನ್ನುವುದು 1984ರಿಂದಲೇ ನಡೆದುಕೊಂಡು ಬಂದಿದೆ. ಅದೇ ರೀತಿಯಲ್ಲಿ ಅಲ್ಪಸಂಖ್ಯಾತರಿಗೂ ಪ್ರಾಧ್ಯಾನ್ಯತೆ ನೀಡಬಹುದೇ ಎಂಬ ವಿಚಾರ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚೆಯ ಹಂತದಲ್ಲಿದೆ ಎಂದು ರಮೇಶ್‌ಕುಮಾರ್ ತಿಳಿಸಿದರು.

ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಜನಪ್ರತಿನಿಧಿಗಳು ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಸಂವಿಧಾನದ ರಕ್ಷಕರು ಎಚ್ಚರಿಕೆಯ ಸಂದೇಶವನ್ನು ನೀಡಬೇಕು. ಆದರೆ, ದುರಾದೃಷ್ಟವಶಾತ್ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಜಿಸ್ಕಿ ಲಾಠಿ ಉಸ್ಕಿ ಭೈಂಸ್’(ಯಾರ ಬಳಿ ಲಾಠಿ ಇದೆಯೋ ಅವರದ್ದೆ ಎಮ್ಮೆ)ಎನ್ನುವ ಪರಿಸ್ಥಿತಿಯಿದೆ ಎಂದು ಅವರು ಹೇಳಿದರು.

ಈಗಲಾದರೂ ಎದ್ದೇಳಿ, ನಿದ್ದೆ ಮಾಡಿದ್ದು ಸಾಕು. ಸಂವಿಧಾನಬದ್ಧವಾಗಿ ನಿಮಗೆ ನೀಡಲಾಗಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಜಾಗೃತರಾಗಿ, ಮುಂದಿನ ಸಾಲಿನ ಜನವರಿ 4ರಂದು ನಮ್ಮ ಸಂಪುಟ ಉಪಸಮಿತಿಯ ಸಭೆಯಿದೆ, ಅದರಲ್ಲಿ ಅಲ್ಪಸಂಖ್ಯಾತರ ಆಯೋಗ ನೀಡಿರುವ ಮನವಿಯ ಕುರಿತು ಚರ್ಚೆ ನಡೆಯಲಿದೆ ಎಂದು ರಮೇಶ್‌ಕುಮಾರ್ ತಿಳಿಸಿದರು.

ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಕ್ಫ್ ಆಸ್ತಿಗಳ ನೋಂದಣಿಗೆ ಸ್ಟಾಂಪು ಶುಲ್ಕದಿಂದ ವಿಯಾಯಿತಿ ನೀಡಬೇಕು. ವಕ್ಫ್ ಆಸ್ತಿಗಳನ್ನು ‘ಭೂಮಿ’ ಸಾಫ್ಟ್‌ವೇರ್ ವ್ಯಾಪಿತಿಗೆ ತರಬೇಕು. ವಸತಿ ಯೋಜನೆಯಲ್ಲಿ ಶೇ.15ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಕೋರಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಆರೋಗ್ಯ ರಕ್ಷಣೆಯ ಕುರಿತು ಮನವಿ ಬಂದಿದೆ. ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಯೂನಿವರ್ಸಲ್ ಹೆಲ್ತ್ ಸ್ಕೀಮ್’ ಜಾರಿಯಿಂದಾಗಿ ರಾಜ್ಯದ ಎಲ್ಲ ಜನರಿಗೂ ಆರೋಗ್ಯ ರಕ್ಷಣೆ ಸಿಗಲಿದೆ ಎಂದು ರಮೇಶ್‌ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News