ಕರಗುತ್ತಿರುವ ನೀಲಿ ನರಿಯ ಬಣ್ಣ

Update: 2017-12-19 04:50 GMT

ಗುಜರಾತ್ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಮಾರ್ಕ್ಸ್ ಕಾರ್ಡ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಗುಜರಾತ್‌ನ ಜನರು ಬಿಜೆಪಿಗೆ ಗೆಲುವಿನ ಶಾಲು ಹೊದಿಸಿದ್ದಾರೋ ಅಥವಾ ಕಲ್ಲು ಕಟ್ಟಿ ಶಾಲನ್ನು ಬಿಜೆಪಿಯೆಡೆಗೆ ಬೀಸಿದ್ದಾರೋ ಎನ್ನುವ ಕುರಿತಂತೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಯಾವ ಗುಜರಾತನ್ನು ಮಾದರಿ ಎಂದು ಬಿಂಬಿಸಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದರೋ ಅದೇ ಗುಜರಾತ್ ಈ ಚುನಾವಣೆಯಲ್ಲಿ ಆ ಮಾದರಿಯನ್ನು ತಿರಸ್ಕರಿಸಿದೆ.

ಇದೇ ಸಂದರ್ಭದಲ್ಲಿ ತನ್ನ ರಾಜ್ಯದ ಪ್ರತಿನಿಧಿಯಾಗಿ ದೇಶವನ್ನು ಆಳುತ್ತಿರುವ ಮೋದಿಯವರ ಗೌರವಕ್ಕೆ ಕುಂದುಂಟಾಗಬಾರದು ಎನ್ನುವ ಕಾರಣಕ್ಕಾಗಿಯೋ ಎಂಬಂತೆ ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸಿಲ್ಲ. ಗುಜರಾತ್‌ನಲ್ಲಿ ಪ್ರಯಾಸದ ಗೆಲುವನ್ನು ಮೋದಿ ನೇತೃತ್ವದ ಬಿಜೆಪಿ ತನ್ನದಾಗಿಸಿಕೊಂಡಿದೆ. 2019ರ ಲೋಕಸಭಾ ಚುನಾವಣೆ ಬಿಜೆಪಿಯ ಪಾಲಿಗೆ ಸುಲಭದ ತುತ್ತಲ್ಲ ಎನ್ನುವ ಸ್ಪಷ್ಟ ಸೂಚನೆ ಗುಜರಾತ್‌ನ ಮೂಲಕವೇ ದೇಶಕ್ಕೆ ದೊರಕಿದೆ. ಗುಜರಾತ್‌ನ ಗೆಲುವನ್ನು ಬಿಜೆಪಿ ಅದೆಷ್ಟು ಸಂಭ್ರಮದಿಂದ ಆಚರಿಸಿಕೊಂಡರೂ ಆಳದಲ್ಲಿ ಅದು ಕಳವಳಗೊಂಡಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ವಿಜಯೋತ್ಸವದ ಮಾತಿನಲ್ಲಿ ಸಂಭ್ರಮಗಳು ಕಾಣುತ್ತಿಲ್ಲ. ಚುನಾವಣೆಯುದ್ದಕ್ಕೂ ಅಭಿವೃದ್ಧಿಯ ವಿಷಯವನ್ನು ಬದಿಗಿಟ್ಟು, ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಯತ್ನಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ‘ಅಭಿವೃದ್ಧಿಗೆ ಸಿಕ್ಕಿದ ಗೆಲುವು’ ಎಂದು ಸಮಜಾಯಿಷಿ ನೀಡುತ್ತಿರುವುದು ಅವರ ಒಳಗಿನ ಮುಜುಗರವನ್ನು ಹೇಳುತ್ತಿದೆ. ಹಾಗಾದರೆ 16 ಸ್ಥಾನಗಳನ್ನು ಕಳೆದುಕೊಂಡಿರುವುದು ಯಾವ ಕಾರಣಕ್ಕೆ ಎಂಬ ಪ್ರಶ್ನೆಗೂ ಬಿಜೆಪಿ ಉತ್ತರಿಸಬೇಕಾಗುತ್ತದೆ.

ನರೇಂದ್ರ ಮೋದಿಯವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಆಧಿಪತ್ಯವನ್ನು ಸ್ಥಾಪಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಸಂಪೂರ್ಣ ತಿರಸ್ಕರಿಸಲ್ಪಟ್ಟಿದೆ. ಭಾರೀ ಪ್ರಮಾಣದ ಶೇಕಡವಾರು ಮತಗಳನ್ನು ಬಿಜೆಪಿ ಕಳೆದುಕೊಂಡಿದೆ. ಇವೆಲ್ಲವೂ ನರೇಂದ್ರ ಮೋದಿಯ ಅಭಿವೃದ್ಧಿಗೆ ಸಿಕ್ಕ ಪ್ರತಿಕ್ರಿಯೆಯೇ ಆಗಿದೆ. ಆದುದರಿಂದ ತಮ್ಮ ಅಭಿವೃದ್ಧಿಯ ದಾರಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ. ಹಿಮಾಚಲ ಪ್ರದೇಶದ ಸೋಲಿಗೆ ಹೋಲಿಸಿದರೆ, ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ ಸೋತು ಗೆದ್ದಿದೆ ಎನ್ನಬಹುದು. ಜಿಗ್ನೇಶ್, ಅಲ್ಪೇಶ್, ಹಾರ್ದಿಕ್ ಪಟೇಲ್ ಮೊದಲಾದ ಯುವ ಮುಖಗಳ ಜೊತೆ ಸೇರಿ ರಾಹುಲ್‌ಗಾಂಧಿಯವರು ನರೇಂದ್ರ ಮೋದಿಯ ಪ್ರಭಾವಳಿಯನ್ನು ಭೇದಿಸುವುದರಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ಈ ಸಂದರ್ಭದಲ್ಲಿ ರಾಹುಲ್‌ಗೆ ಗುಜರಾತ್‌ನ ಜನರು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಹಣ, ತಂತ್ರಗಾರಿಕೆ, ಕಣ್ಣೀರು ಈ ಎಲ್ಲ ತಂತ್ರಗಳನ್ನು ಭಾಗಶಃ ತಿರಸ್ಕರಿಸಿ ಜನರು ರಾಹುಲ್‌ಗಾಂಧಿಯ ಸರಳತೆಗೆ ಸ್ಪಂದಿಸಿರುವುದು ಎದ್ದು ಕಾಣುತ್ತದೆ. ಇದೇ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಅವರ ಸ್ನೇಹ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಒಂದೆಡೆ ದಲಿತರು ಮತ್ತು ಹಿಂದುಳಿದ ವರ್ಗದ ಜೊತೆಗೆ ಕೈ ಜೋಡಿಸಿದ ಕಾಂಗ್ರೆಸ್ ಮಗದೊಂದೆಡೆ ಪಟೇಲರ ಜೊತೆಗೂ ಕೈ ಜೋಡಿಸಿತು. ಇದು ವಿರೋಧಾಭಾಸದ, ಸಮಯ ಸಾಧಕ ಮೈತ್ರಿಯಾಗಿತ್ತು.

ದಲಿತರು ಮೀಸಲಾತಿಯಿಂದ ಮೇಲೇರುವುದನ್ನು ಸಹಿಸಲಾಗದೆ, ಗುಜರಾತ್‌ನಾದ್ಯಂತ ಪಟೇಲರು ಸಂಘಟಿತರಾಗಿ ಪ್ರತಿಭಟನೆಗಿಳಿದರು. ‘ತಮಗೂ ಮೀಸಲಾತಿ ಬೇಕು’ ಎನ್ನುವ ಘೋಷಣೆಯ ಉದ್ದೇಶವೇ, ದಲಿತರು ಮತ್ತು ಹಿಂದುಳಿದ ವರ್ಗಕ್ಕಿರುವ ಮೀಸಲಾತಿಯ ಕುರಿತ ಅಸಹನೆಯಾಗಿದೆ. ಪ್ರಬಲ ಸಮುದಾಯವಾಗಿರುವ ಪಟೇಲರು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲ್ ಸ್ತರದಲ್ಲಿದ್ದಾರೆ. ಯಾವ ರೀತಿಯಲ್ಲೂ ಅವರು ಸಂವಿಧಾನ ಬದ್ಧವಾದ ಮೀಸಲಾತಿಗೆ ಅರ್ಹರಲ್ಲ. ಆದರೂ ಕಾಂಗ್ರೆಸ್ ಮೀಸಲಾತಿಯ ಭರವಸೆ ನೀಡಿ ಪಾಟಿದಾರರ ಜೊತೆಗೆ ಮೈತ್ರಿ ಮಾಡಿಕೊಂಡಿತು. ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿ ಒಂದೇ ಅಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ದಲಿತರ ನೋವು ದುಮ್ಮಾನಗಳ ಧ್ವನಿಯಾಗಿ ಮೇವಾನಿ ಹೊಮ್ಮಿದರೆ, ಪಟೇಲರ ದರ್ಪ, ಹಣ, ಜನಸಂಖ್ಯೆಯ ಬಲದ ಪ್ರತಿನಿಧಿಯಾಗಿ ಹಾರ್ದಿಕ್ ಪಟೇಲ್ ಹೊಮ್ಮಿದ್ದಾರೆ. ಪಟೇಲ್‌ಗೆ ಬೆಂಬಲ ನೀಡುವುದೆಂದರೆ ಪರೋಕ್ಷವಾಗಿ ಅದು ದಲಿತ ವಿರೋಧಿ ನೀತಿಯೇ ಆಗಿದೆ.

ಕಾಂಗ್ರೆಸ್‌ನ ಈ ಇಬ್ಬಗೆ ನೀತಿಯೇ ಚುನಾವಣೆಯ ವೇಳೆ ಅದಕ್ಕೆ ತಿರುಗುಬಾಣವಾಗಿರಬಹುದು. ಒಂದು ವೇಳೆ ಈ ಚುನಾವಣೆಯಲ್ಲಿ ಪಟೇಲರು ಸಂಪೂರ್ಣ ಬೆಂಬಲಿಸಿ ಕಾಂಗ್ರೆಸ್ ಸರಳ ಬಹುಮತ ಪಡೆಯಿತು ಎಂದೇ ಇಟ್ಟುಕೊಳ್ಳೋಣ. ಜಾತ್ಯತೀತತೆಯ ಕುರಿತಂತೆ ಹಾಗೂ ಸಂವಿಧಾನದ ಮೀಸಲಾತಿಯ ಕುರಿತಂತೆ ಬದ್ಧತೆಯಿಲ್ಲದ ಹಾರ್ದಿಕ್ ಪಟೇಲ್ ಬಣ ಒಂದು ವರ್ಷದಲ್ಲೇ ಸರಕಾರವನ್ನು ಉರುಳಿಸಿ ಬಿಡುವ ಅಪಾಯವಿತ್ತು. ಮೀಸಲಾತಿಗೆ ಕಾಂಗ್ರೆಸ್ ಬದ್ಧವಾಗದೇ ಇದ್ದರೆ, ಪಟೇಲರ ಗುಂಪು ಸಿಡಿದು ಬಿಜೆಪಿಯೊಂದಿಗೆ ಕೈ ಜೋಡಿಸಿ ಹೊಸದಾಗಿ ಸರಕಾರ ರಚಿಸುವುದರಲ್ಲಿ ಯಾವ ಅನುಮಾನವೂ ಇದ್ತರಲಿಲ್ಲ. ಒಂದರ್ಥದಲ್ಲಿ ಈ ಚುನಾವಣೆಯಲ್ಲಿ ಪಟೇಲರ ಬಣಕ್ಕೆ ಮುಖಭಂಗವಾಗಿದೆ. ಇದೇ ಸಂದರ್ಭದಲ್ಲಿ ಉನಾ ಚಳವಳಿಯ ಮೂಲಕ ಗುಜರಾತ್‌ನಲ್ಲಿ ನಾಯಕನಾಗಿ ಹೊರಹೊಮ್ಮಿದ ಜಿಗ್ನೇಶ್ ಗೆಲುವು ದೇಶದ ಪಾಲಿಗೆ ಹೊಸತೊಂದು ಭರವಸೆಯನ್ನು ಮೂಡಿಸಿದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ್ಗದ ಜನರು ಒಂದಾಗಿ ರಾಜಕೀಯ ಶಕ್ತಿಯಾಗುವ ದಿಕ್ಸೂಚಿಯೊಂದು ಈ ಮೂಲಕ ದೇಶಕ್ಕೆ ಸಿಕ್ಕಿದೆ. ಗುಜರಾತ್‌ನಲ್ಲಿ ದಲಿತರನ್ನು ಸಂಘಟಿಸಿ ಜಿಗ್ನೇಶ್ ಹುಟ್ಟು ಹಾಕಿದ ಚಳವಳಿ ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ವಿಸ್ತರಿಸುವ ಸಾಧ್ಯತೆಗಳನ್ನು ಈ ಫಲಿತಾಂಶ ಹೇಳಿದೆ. ಈ ನಿಟ್ಟಿನಲ್ಲಿಯೂ ಜಿಗ್ನೇಶ್ ಗೆಲುವು ಬಿಜೆಪಿಗೆ, ಸಂಘಪರಿವಾರದೊಳಗೆ ಸಣ್ಣದೊಂದು ನಡುಕ ಹುಟ್ಟಿಸಿದೆ.

 ಗ್ರಾಮೀಣ ಜನರು ಮೋದಿ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ನೋಟು ನಿಷೇಧ ಮತ್ತು ಜಿಎಸ್‌ಟಿಯಿಂದ ತತ್ತರಿಸಿರುವ ಈ ಜನರ ನೋವು, ದುಮ್ಮಾನಗಳು ಮೋದಿಯ ಪಾಲಿನ ಸೋಲಾಗಿ ಪರಿವರ್ತನೆಗೊಂಡಿದೆ. ಗುಜರಾತ್ ರಾಜ್ಯವು ನಗರ ಮತ್ತು ಹಳ್ಳಿಯಾಗಿ ಸ್ಪಷ್ಟವಾಗಿ ಒಡೆದಿದೆ. ಇದು ಬರೇ ಗುಜರಾತ್‌ಗೆ ಸೀಮಿತವೆಂದು ಮೋದಿ ಬಳಗ ಭಾವಿಸಬೇಕಾಗಿಲ್ಲ. ಮೋದಿಯ ಅಭಿವೃದ್ಧಿಯ ತಾರತಮ್ಯ ನೀತಿ, ಇಡೀ ದೇಶವನ್ನು ನಗರ ಮತ್ತು ಹಳ್ಳಿಯಾಗಿ ಒಡೆಯುತ್ತಿದೆ.

ಮೋದಿ ನಗರಗಳನ್ನೇ ದೇಶವೆಂದು ಕರೆಯುತ್ತಾ ಹಳ್ಳಿಯನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ. ಗ್ರಾಮೀಣ ಉದ್ಯಮಗಳು ನಾಶಗೊಂಡಿವೆ. ಹೈನೋದ್ಯಮವೂ ತತ್ತರಿಸಿದೆ. ಹಳ್ಳಿಗರ ನೋವು ದುಮ್ಮಾನಗಳಿಗೆ ಸರಕಾರ ಸಂಪೂರ್ಣ ಕಿವುಡಾಗಿದೆೆ. ಕಾರ್ಪೊರೇಟ್ ಶಕ್ತಿಯ ಬಲವೊಂದರಿಂದಲೇ ಈ ದೇಶವನ್ನು ತಾನು ಆಳಬಲ್ಲೆ ಎಂಬ ದುರಹಂಕಾರಕ್ಕೆ ಸಣ್ಣದೊಂದು ಪೆಟ್ಟು ಗುಜರಾತ್ ಚುನಾವಣೆಯಲ್ಲಿ ಮೋದಿಗೆ ಬಿದ್ದಿಗೆ. ತನ್ನ ನಿಜ ಬಣ್ಣವನ್ನು ಮುಚ್ಚಿಟ್ಟು, ನೀಲಿಬಣ್ಣ ಬಳಿದು ಕಾಡಿನ ಪ್ರಾಣಿಗಳನ್ನು ಯಾಮಾರಿಸಿದ ನರಿಯ ಕತೆಯಂತಾಗುತ್ತಿದೆ ಮೋದಿಯ ಅಭಿವೃದ್ಧಿಯ ಕಲ್ಪನೆ. ಗುಜರಾತ್ ಚುನಾವಣೆಯ ಮಳೆಯಲ್ಲಿ ಈ ನೀಲಿ ಬಣ್ಣ ಕರಗತೊಡಗಿದೆ. ಮುಂದಿನ ಲೋಕಸಭಾ ಚುನಾವಣೆಯವರೆಗೆ ನರಿ ತನ್ನ ಬಣ್ಣವನ್ನು ಕಾಪಾಡಿಕೊಳ್ಳುವು ಕಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News