ಪ್ರಧಾನಿ ಮೋದಿ ಕ್ಷಮೆ ಯಾಚನೆಗೆ ಕಾಂಗ್ರೆಸ್ ನಾಯಕರ ಪಟ್ಟು

Update: 2017-12-19 09:46 GMT

ಹೊಸದಿಲ್ಲಿ,ಡಿ.19 : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಮಾಡಿದ ಆಪಾದನೆಗಾಗಿ ಅವರು ಕ್ಷಮೆ ಕೋರಬೇಕೆಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದ ಕಾರಣ ಲೋಕಸಭಾ ಕಾರ್ಯಕಲಾಪವನ್ನು ಮಂಗಳವಾರ ಸುಮಾರು 30 ನಿಮಿಷಗಳ ಕಾಲ ಮುಂದೂಡಬೇಕಾಗಿ ಬಂತು.

ಲೋಕಸಭೆಯ ಪ್ರಶ್ನೋತ್ತರ ವೇಳೆ ಆರಂಭಗೊಳ್ಳುತ್ತಿದ್ದಂತೆಯೇ ವಿಪಕ್ಷ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ವಿಚಾರ ಎತ್ತಿದರೂ  ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಈ ವಿಚಾರ ಚರ್ಚಿಸಲು ಅನುಮತಿ ನಿರಾಕರಿಸಿದ್ದರು. ಅದೇ ಕ್ಷಣದಲ್ಲಿ ಎಲ್ಲಾ ಕಾಂಗ್ರೆಸ್ ಸಂಸದರೂ ಸ್ಪೀಕರ್ ಆಸನದ ಬಳಿ ಬಂದ  ‘ಪ್ರಧಾನ ಮಂತ್ರಿ ಮಾಫಿ ಮಾಂಗೋ,  ಪ್ರಧಾನ್ ಮಂತ್ರಿ ಸದನ್ ಮೇ ಆವೋ' (ಪ್ರಧಾನಿ ಕ್ಷಮೆ ಯಾಚಿಸಿ, ಪ್ರಧಾನಿ ಲೋಕಸಭೆಗೆ ಬನ್ನಿ) ಎಂಬ ಘೋಷಣೆಗಳನ್ನು ಕೂಗಿದರು.

ಚಳಿಗಾಲದ ಅಧಿವೇಶನವನ್ನು ನಿಗದಿತ ಸಮಯಕ್ಕೆ ನಡೆಸಿಲ್ಲ ಎಂದು ಸರಕಾರವನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಸದಸ್ಯರು ಇದೀಗ ಸಭೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಹೇಳಿದ ಸುಮಿತ್ರಾ ಮಹಾಜನ್ ಸಭೆಯನ್ನು ಅಪರಾಹ್ನದ ತನಕ ಮುಂದೂಡಿದ್ದರು.

ಡಿಸೆಂಬರ್ 15ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನ ಜನವರಿ 5ರಂದು ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News