ಕರ್ಕರೆ ಸಾವಿನ ಕುರಿತ ಹೇಳಿಕೆ | ವಡೆಟ್ಟಿವಾರ್ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗಕ್ಕೆ ಬಿಜೆಪಿ ಆಗ್ರಹ

Update: 2024-05-06 15:57 GMT

ಹೇಮಂತ್ ಕರ್ಕರೆ | PC : PTI 

ಮುಂಬೈ : ಮಹಾರಾಷ್ಟ್ರ ಎಟಿಎಸ್ ನ ಮಾಜಿ ವರಿಷ್ಠ ಹೇಮಂತ್ ಕರ್ಕರೆ ಅವರ ಸಾವಿನ ಕುರಿತು ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಅವರ ವಿರುದ್ಧ ಕ್ರಮಕ್ಕೆ ಕೋರಿ ಬಿಜೆಪಿ ರವಿವಾರ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ.

ಲಷ್ಕರೆ-ತಯ್ಯಬಕ್ಕೆ ಸೇರಿದ 10 ಮಂದಿ ಭಯೋತ್ಪಾದಕರು ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಮುಂಬೈಗೆ ಆಗಮಿಸಿದ್ದರು ಹಾಗೂ 2008 ನವೆಂಬರ್ 26ರಂದು ನಗರದಾದ್ಯಂತ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಈ ದಾಳಿಯ ಪರಿಣಾಮ 26 ಮಂದಿ ವಿದೇಶಿ ಪ್ರಜೆಗಳು ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಕರ್ಕರೆ ಅವರು ಕೂಡ ಮೃತಪಟ್ಟಿದ್ದರು.

ಮಹಾರಾಷ್ಟ್ರ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಅವರು, ಕರ್ಕರೆ ಅವರು ಕಸಬ್ ನಂತಹ ಭಯೋತ್ಪಾದಕರ ಗುಂಡಿಗೆ ಬಲಿಯಾಗಿಲ್ಲ, ಬದಲಾಗಿ ಆರೆಸ್ಸೆಸ್ ನೊಂದಿಗೆ ನಂಟು ಹೊಂದಿದ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾದರು ಎಂದು ಸುದ್ದಿಗಾರರಿಗೆ ಶನಿವಾರ ತಿಳಿಸಿದ್ದರು.

26/11ರ ಮುಂಬೈ ದಾಳಿ ಪ್ರಕರಣದಲ್ಲಿ ವಿಶೇಷ ಸರಕಾರಿ ವಕೀಲರಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಉಜ್ವಲ್ ನಿಕಮ್ ಅವರು ಈ ಸತ್ಯವನ್ನು ಮರೆ ಮಾಚಿದ ದೇಶದ್ರೋಹಿ. ಇಂತಹ ದೇಶದ್ರೋಹಿಗಳಿಗೆ ಬಿಜೆಪಿ ಚುನಾವಣಾ ಟಿಕೆಟ್ ನೀಡಿದೆ ಎಂದು ಅವರು ಆರೋಪಿಸಿದ್ದರು. ಅನಂತರ ರವಿವಾರ ಅವರು, ತಾನು ಮಹಾರಾಷ್ಟ್ರದ ಮಾಜಿ ಐಜಿಪಿ ಎಸ್.ಎಂ. ಮುಶ್ರಿಫ್ ಅವರು ಬರೆದ ಪುಸ್ತಕದ ಆಧಾರದಲ್ಲಿ ಈ ಹೇಳಿಕೆ ನೀಡಿದೆ ಎಂದು ಸ್ಪಷ್ಟನೆ ನೀಡಿದ್ದರು.

ಲೋಕಸಭಾ ಚುನಾವಣೆಗೆ ಪ್ರಚಾರ ನಡೆಸುವುದರಿಂದ ವಡೆಟ್ಟಿವಾರ್ ಅವರನ್ನು ತಡೆಯುವಂತೆ, ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಆಗ್ರಹಿಸಿದೆ. ಅಲ್ಲದೆ ಹಾನಿಕಾರಕ ನಿರೂಪಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಪಾತ್ರದ ಕುರಿತು ತನಿಖೆ ನಡೆಸುವಂತೆ ಕೂಡ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News