ನಕಲಿ ಖಾತೆಯ ಟ್ವೀಟನ್ನು ರಿಟ್ವೀಟ್ ಮಾಡಿ ನಗೆಪಾಟಲಿಗೀಡಾದ ಸಂಸದ ಪ್ರತಾಪ್ ಸಿಂಹ

Update: 2017-12-19 16:53 GMT

“ನಟ ಸೈಫ್ ಅಲಿ ಖಾನ್ ಅವರ ಪುತ್ರಿಯ ತಿಳುವಳಿಕೆಯ ಮಟ್ಟವನ್ನು ಗಮನಿಸಿ. ನೆರೆತ ಕೂದಲಿನ, ಬೋಳು ತಲೆಯ ಪತ್ರಕರ್ತರಲ್ಲಿ ಹಾಗು ರಾಜಕೀಯ ಪಂಡಿತರಲ್ಲಿ ಇಂತಹ ತಿಳುವಳಿಕೆಯ ಕೊರತೆಯಿದೆ”.

ಇದು ಗುಜರಾತ್ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾಡಿರುವ ಟ್ವೀಟ್. ರಾಹುಲ್ ಗಾಂಧಿಯವರನ್ನು ಅಣಕಿಸಿ ಹಾಗು ಪ್ರಧಾನಿ ಮೋದಿಯವರನ್ನು ಹೊಗಳಿ ವೆರಿಫೈ ಆಗದ ಟ್ವಿಟರ್ ಖಾತೆಯೊಂದು ಮಾಡಿದ್ದ ಟ್ವೀಟನ್ನು ರಿಟ್ವೀಟ್ ಮಾಡಿದ್ದ ಪ್ರತಾಪ್ ಸಿಂಹ ಮೇಲಿನಂತೆ ಬರೆದಿದ್ದರು.

ಆದರೆ ಕೆಲ ಸಮಯದಲ್ಲೇ ತಮ್ಮ ಟ್ವೀಟನ್ನು ಪ್ರತಾಪ್ ಸಿಂಹ ಡಿಲಿಟ್ ಮಾಡಿದ್ದಾರೆ. ಏಕೆಂದರೆ ಗುಜರಾತ್ ಚುನಾವಣೆಯ ಫಲಿತಾಂಶದ ಉತ್ಸಾಹದಲ್ಲಿದ್ದ ಪ್ರತಾಪ್ ಸಿಂಹ ಸೈಫ್ ಅಲಿ ಖಾನ್ ಪುತ್ರಿಯ ಹೆಸರಿನಲ್ಲಿದ್ದ ನಕಲಿ ಖಾತೆಯೊಂದರ ಟ್ವೀಟನ್ನು ರಿಟ್ವೀಟ್ ಮಾಡಿ ಪತ್ರಕರ್ತರ, ರಾಜಕೀಯ ಪಂಡಿತರ ತಿಳುವಳಿಕೆಯ ಮಟ್ಟವನ್ನು ಪ್ರಶ್ನಿಸಿದ್ದು ನಗೆಪಾಟಲಿಗೀಡಾಗಿದ್ದಾರೆ. ಇದು ಅರಿವಿಗೆ ಬರುತ್ತಲೇ ಸಂಸದರು ಟ್ವೀಟನ್ನು ಡಿಲಿಟ್ ಮಾಡಿದ್ದಾರೆ.

ಈ ಬಗ್ಗೆ altnews.in ವರದಿ ಮಾಡಿದ್ದು, ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಹೆಸರಿನಲ್ಲಿರುವ ಈ ಖಾತೆ ಬಿಜೆಪಿ ಪರ ಟ್ವೀಟ್ ಮಾಡುವ, ದ್ವೇಷ ಹರಡುವಲ್ಲಿ ಕುಪ್ರಸಿದ್ಧವಾಗಿದೆ ಎಂದು ಬಹಿರಂಗ ಪಡಿಸಿದೆ. ಈ ಖಾತೆಗೆ 15000 ಫಾಲೋವರ್ ಗಳಿದ್ದು, 33 ಟ್ವೀಟ್ ಗಳಿವೆ. ಹಳೆಯ ಟ್ವೀಟ್ ಗಳನ್ನು ಈ ಖಾತೆ ಅಳಿಸಿ ಹಾಕುತ್ತಿದೆ.

ಬಾಲಿವುಡ್ ಗೆ ಇನ್ನೂ ಪಾದಾರ್ಪಣೆ ಮಾಡಬೇಕಾಗಿರುವ ಸಾರಾ ಖಾನ್ ಹೆಸರಿನಲ್ಲಿ ಈ ಖಾತೆ ದ್ವೇಷ ಕಾರುವ, ಬಿಜೆಪಿಯನ್ನು ಹೊಗಳುವ ಟ್ವೀಟ್ ಗಳನ್ನು ಮಾಡುತ್ತಲೇ ಇದೆ. “ತನ್ನ ಕುಟುಂಬದ ವ್ಯವಹಾರ ನಡೆಸಲು ಕೇವಲ 35 ಶೇ. ಅಂಕ ಬೇಕಾಗಿರುವ. ಆದರೆ ಪದೇ ಪದೇ ವಿಫಲವಾಗುತ್ತಿರುವ ರಾಹುಲ್ ಗಾಂಧಿ ಅಷ್ಟೊಂದು ಶ್ರೀಮಂತ. ಬದುಕುವುದಕ್ಕಾಗಿ 99 ಶೇ. ಅಂಕವನ್ನು ಪ್ರತಿ ಬಾರಿ ಪಡೆಯಲೇಬೇಕಾದ ನರೇಂದ್ರ ಮೋದಿ ಅಷ್ಟೊಂದು ಬಡವ” ಎಂದು ಸಾರಾ ಅಲಿ ಖಾನ್ ಹೆಸರಿನ ನಕಲಿ ಖಾತೆ ಟ್ವೀಟ್ ಮಾಡಿತ್ತು. ಇದೇ ಟ್ವೀಟನ್ನು ರಿಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ‘ಬೋಳುತಲೆಯ ಪತ್ರಕರ್ತರ ಹಾಗು ರಾಜಕೀಯ ಪಂಡಿತರ ತಿಳುವಳಿಕೆಯ ಮಟ್ಟ’ವನ್ನು ಪ್ರಶ್ನಿಸಿದ್ದರು!.

ಇದೇ ಖಾತೆಯಿಂದ ಹೊರಬಿದ್ದ ಕೆಲ ದ್ವೇಷಕಾರುವ ಟ್ವೀಟ್ ಗಳು ಈ ರೀತಿಯಿದೆ.

“ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ತ್ರಿವಳಿ ತಲಾಕ್ ಕ್ರಿಮಿನಲ್ ಅಪರಾಧವಾಗಲಿದೆ. ಆದ್ದರಿಂದ ಪ್ರೀತಿಯ ಮುಸ್ಲಿಮರೇ ನಿಮ್ಮ ಪತ್ನಿಯರಿಗೆ ವಿಚ್ಚೇದನ ನೀಡಬೇಕೆಂದಿದ್ದರೆ ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕೆಂದು ನಿಮಗೆ ತಿಳಿದಿದೆ. ಕಾನೂನು ಮಾನವವ ಸ್ವಭಾವವನ್ನು ಬದಲಾಯಿಸಬಹುದು. ಆದರೆ ಪ್ರಾಣಿಗಳು ಹಾಗು ಮುಸ್ಲಿಮರ ಮನಸ್ಥಿತಿಯನ್ನಲ್ಲ”.

ಯೂರೋಪ್ ನಲ್ಲಿನ ನಿರಾಶ್ರಿತರ ಚಿತ್ರವನ್ನು ಪಶ್ಚಿಮ ಬಂಗಾಳದಲ್ಲಿರುವ ಬಾಂಗ್ಲಾ ನಿರಾಶ್ರಿತರು ಎಂದು ತಿರುಚಿದ ಕುಖ್ಯಾತಿಯೂ ಈ ಖಾತೆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News