ಬಿಜೆಪಿಯಿಂದ ಮಹದಾಯಿ ವಿವಾದ ಪರಿಹಾರದ ನಾಟಕ: ಸಿದ್ದರಾಮಯ್ಯ

Update: 2017-12-20 09:13 GMT

 ಮುದ್ದೇಬಿಹಾಳ, ಡಿ.20: ‘‘ಉತ್ತರಕರ್ನಾಟಕ ಜನತೆಯ ಜ್ವಲಂತ ಸಮಸ್ಯೆಯಾಗಿರುವ ಮಹದಾಯಿ ನದಿನೀರು ಹಂಚಿಕೆ ವಿವಾದ ಬಗೆಹರಿಸುವಂತೆ ಪ್ರಧಾನಮಂತ್ರಿಗೆ ಎರಡು-ಮೂರು ಬಾರಿ ಪತ್ರ ಬರೆದಿದ್ದೇನೆ. ಸರ್ವ ಪಕ್ಷ ನಿಯೋಗದೊಂದಿಗೆ ಅವರನ್ನು ಖುದ್ದು ಭೇಟಿಯಾಗಿದ್ದೇನೆ. ಆಗ ಅವರು ವಿವಾದ ಪರಿಹರಿಸುವ ಯಾವುದೇ ಭರವಸೆ ನೀಡಲಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ವಿವಾದ ಇತ್ಯರ್ಥ ಪಡಿಸುವ ಬಗ್ಗೆ ಬಿಜೆಪಿ ನಾಟಕವಾಡುತ್ತಿದೆ’’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಹುಬ್ಬಳ್ಳಿ ಸಂಸದ ಪ್ರಹ್ಲಾದ್ ಜೋಶಿ ಬುಧವಾರ ಬೆಳಗ್ಗೆ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಮಧ್ಯಾಹ್ನ 3 ಗಂಟೆಗೆ ಭೇಟಿಯಾಗುವ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ ಮುಂಬರುವ ಚುನಾವಣೆಯ ದೃಷ್ಟಿಯಿಂದ ಮಹದಾಯಿ ವಿವಾದಕ್ಕೆ ಪರಿಹಾರ ಒದಗಿಸುವಂತೆ ಕೇಳಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಕೇಂದ್ರ ಸರಕಾರ ಮಧ್ಯಸ್ಥಿಕೆವಹಿಸಬೇಕೆಂದು ಬಿಎಸ್‌ವೈ ಮನವಿ ಮಾಡುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸವಾಲೊಡ್ಡುವ ತಂತ್ರ ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News