ರಾಜಸ್ಥಾನ: ನದಿಗೆ ಉರುಳಿದ ಬಸ್; 32 ಪ್ರಯಾಣಿಕರ ಮೃತ್ಯು

Update: 2017-12-23 15:44 GMT

ಜೈಪುರ,ಡಿ.23:ರಾಜಸ್ಥಾನದ ಸವಾಯ್ ಮಾಧೋಪುರ ಜಿಲ್ಲೆಯಲ್ಲಿ ಬಸ್ಸೊಂದು, ಬನಾಸ್ ನದಿಯ ಮೇಲಿನ ಸೇತುವೆಯಿಂದ ಉರುಳಿ, ಕನಿಷ್ಠ 32 ಮಂದಿ ಪ್ರಯಾಣಿಕರು ಜಲಸಮಾಧಿಯಾದ ಧಾರುಣ ಘಟನೆ ಶನಿವಾರ ನಡೆದಿದೆ. ಈ ನತದಷ್ಟ ಬಸ್ ಲಾಲ್ ಸೋತ್ ಎಂಬಲ್ಲಿಂದ 65 ಕಿ.ಮೀ. ದೂರದ ಸವಾಯ್ ಮಾಧೋಪುರ್ ನಗರಕ್ಕೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ.

 ಅವಘಡ ಸಂಭವಿಸಿದಾಗ 16 ವರ್ಷ ವಯಸ್ಸಿನ ಕಂಡಕ್ಟರ್, ಬಸ್‌ನ್ನು ಚಲಾಯಿಸುತ್ತಿದ್ದನೆನ್ನಲಾಗಿದೆ. ವೇಗವಾಗಿ ಬಸ್ ಚಲಾಯಿಸುತ್ತಿದ್ದ ಆತ, ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಅದು ದುಬಿ ಸಮೀಪದ 100 ಅಡಿ ಎತ್ತರದ ಸೇತುವೆಯಿಂದ ನದಿಗೆ ಉರುಳಿದೆ. ಈ ವೇಳೆ ಚಾಲಕನು ನಿದ್ರಿಸುತ್ತಿದ್ದನೆನ್ನಲಾಗಿದೆ. ದುರಂತದಲ್ಲಿ ಇವರಿಬ್ಬರೂ ಸಾವನ್ನಪ್ಪಿದ್ದಾರೆ.

 ಅಪಘಾತಕ್ಕೀಡಾದ ಬಸ್‌ನಲ್ಲಿ 50 ಮಂದಿ ಪ್ರಯಾಣಿಕರಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನದಿಯಲ್ಲಿ ಮುಳುಗಿದ್ದ ಬಸ್‌ನೊಳಗೆ ಹಲವರು ಸಿಲುಕಿಕೊಂಡಿದ್ದು,ರಕ್ಷಣಾ ಕಾರ್ಯಕರ್ತರು ಉಕ್ಕಿನ ಕಟರ್‌ಗಳನ್ನು ಬಳಸಿ ಅವರನ್ನು ಪಾರು ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಬಸ್‌ನಲ್ಲಿದ್ದ ಪ್ರಯಾಣಿಕರು ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಅಸ್ಸಾಂನವರಾಗಿದ್ದು ಅವರಲ್ಲಿ ಅನೇಕರು ಸವಾಯಿ ಮಾಧೋಪುರ ಜಿಲ್ಲೆಯ ಮಾಲಾರ್ನಾ ಚೌರ್ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದರೆಂದು ಹೇಳಿದ್ದಾರೆ.

ಈ ಭೀಕರ ಬಸ್ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ತನ್ನ ಸಂತಾಪವನ್ನು ಸೂಚಿಸಿದ್ದಾರೆ.ಈ ಮಧ್ಯೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರರಾಜೆ ಸಿಂಧ್ಯಾ ಹೇಳಿಕೆ ನೀಡಿ, ತನ್ನ ಸರಕಾರವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ರಕ್ಷಣಾಕಾರ್ಯಾಚರಣೆ ಭರದಿಂದ ಸಾಗಿದೆಯೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News