ದಿಲ್ಲಿಯ ಆಶ್ರಮದಿಂದ ಮತ್ತೆ 5 ಬಾಲಕಿಯರ ರಕ್ಷಣೆ

Update: 2017-12-24 15:05 GMT

ಹೊಸದಿಲ್ಲಿ, ಡಿ.24: ದಕ್ಷಿಣ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ದ್ವಾರಕಾಶ್ರಮದಿಂದ ಇನ್ನೂ ಐವರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಈ ಬಾಲಕಿಯರನ್ನು ‘ಬಂಧಿಸಿಟ್ಟ ರೀತಿಯಲ್ಲಿ’ ಕೂಡಿ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  ಇದರೊಂದಿಗೆ ಸ್ವಘೋಷಿತ ದೇವಮಾನವ ವೀರೇಂದ್ರದೇವ್ ದೀಕ್ಷಿತ್ ಮಾಲಕತ್ವದ ಆಶ್ರಮದಿಂದ ರಕ್ಷಿಸಲ್ಪಟ್ಟಿರುವ ಅಪ್ರಾಪ್ತ ಬಾಲಕಿಯರ ಸಂಖ್ಯೆ 45ಕ್ಕೇರಿದೆ. ರವಿವಾರ ರಕ್ಷಿಸಲಾದ ಬಾಲಕಿಯರು ಅಪ್ರಾಪ್ತ ವಯಸ್ಸಿನವರು ಎಂದು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿರುವುದಾಗಿ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಳ್ ಟ್ವೀಟ್ ಮಾಡಿದ್ದಾರೆ.

  ರಾತ್ರಿ ವೇಳೆ ಆಶ್ರಮದಿಂದ ಬಾಲಕಿಯರ ಚೀರಾಟ ಕೇಳಿಬರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಮಹಿಳಾ ಆಯೋಗ ಅಲ್ಲಿಗೆ ಭೇಟಿ ನೀಡುವ ಮೊದಲೇ ಹಲವು ಬಾಲಕಿಯರನ್ನು ಅಲ್ಲಿಂದ ಸ್ಥಳಾಂತರಿಸಲಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಸ್ವಾತಿ ತಿಳಿಸಿದ್ದಾರೆ.

 ಆಶ್ರಮದಲ್ಲಿ ಬಾಲಕಿಯರನ್ನು ಬೀಗ ಹಾಕಲಾದ ಕೋಣೆಯಲ್ಲಿ ಇರಿಸಲಾಗಿತ್ತು. ಬಾಲಕಿಯರು ಯಾವ ಊರಿನವರು ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಸಿರಿಂಜ್ ಸೇರಿದಂತೆ ಭಾರೀ ಪ್ರಮಾಣದಲ್ಲಿ ಔಷಧಗಳನ್ನು ಸಂಗ್ರಹಿಸಿಡಲಾಗಿತ್ತು. ಇಲ್ಲಿ ಹಲವು ಬಾಲಕಿಯರನ್ನು ಮಾನಸಿಕ ಚಿಕಿತ್ಸೆಗೆ ಒಳಪಡಿಸಲಾಗಿದ್ದು ಅವರನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ ಎಂದವರು ತಿಳಿಸಿದ್ದಾರೆ.

 ಇಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಶಂಕೆಯಿದ್ದು ಸಿಬಿಐ ಈ ಆಶ್ರಮವನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಮತ್ತು ಬಾಬಾನನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಪೊಲೀಸರು ಹಾಗೂ ರಾಜಕಾರಣಿಗಳ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸುವ ಅಗತ್ಯವಿದೆ ಎಂದು ಸ್ವಾತಿ ಆಗ್ರಹಿಸಿದ್ದಾರೆ. ಆಶ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ದಿಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

  ದ್ವಾರಕಾಶ್ರಮದಲ್ಲಿ ಹಲವು ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರನ್ನು ಸಂದೇಹಾಸ್ಪದವಾಗಿ ಕೂಡಿ ಹಾಕಲಾಗಿದೆ ಎಂದು ಎನ್‌ಜಿಒ ಸಂಸ್ಥೆಯೊಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆಗೆ ದಿಲ್ಲಿ ಹೈಕೋರ್ಟ್ ನೇಮಿಸಿದ್ದ ಸಮಿತಿ ನೀಡಿದ ವರದಿಯಲ್ಲಿ, ಆಶ್ರಮದಲ್ಲಿ ಬಾಲಕಿಯರು ಹಾಗೂ ಮಹಿಳೆಯರನ್ನು ಪ್ರಾಣಿಗಿಂತ ಕಡೆಯಾಗಿ ಪರಿಗಣಿಸಲಾಗಿತ್ತು. ಅವರ ಸ್ನಾನಕ್ಕೂ ಏಕಾಂತ ವ್ಯವಸ್ಥೆ ಇರಲಿಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News