ನೀರು ದೇವರ ಸೃಷ್ಟಿ, ಜಾತಿ-ಮತ ಮಾನವನ ಸೃಷ್ಟಿ

Update: 2017-12-26 18:37 GMT

ನಮ್ಮ ಹತ್ತು ವರ್ಷಗಳ ಸುದೀರ್ಘ ವಾಸ್ತವ್ಯದಲ್ಲಿ ನೀರಿಗಾಗಿ ಪಟ್ಟ ಬವಣೆಯನ್ನು ಈಗಾಗಲೇ ಹೇಳಿದ್ದೇನೆ. ನಳ್ಳಿ ನೀರಾದರೂ ಎಲ್ಲರ ಹಿತ್ತಲಲ್ಲಿ ತೆಂಗಿನ ಮರಗಳು ನಳನಳಿಸುತ್ತಾ ಕಾಯಿಗಳ ಭಾರದಿಂದ ತೂಗುತ್ತಿದ್ದುವು. ಆದುದರಿಂದ ನಮ್ಮ ಹಿತ್ತಲಲ್ಲೂ ಒಂದೆರಡಲ್ಲ ಸುಮಾರು ಹತ್ತು ಗಿಡಗಳನ್ನು ಹಾಕಿದ್ದೆವು. ಅವುಗಳಲ್ಲಿ ಒಂದು ಗಿಡಕ್ಕೆ ಬಚ್ಚಲಿನ ನೀರು, ಒಂದು ಗಿಡಕ್ಕೆ ಪಾತ್ರೆ ತೊಳೆದ ನೀರು. ಒಂದು ಗಿಡಕ್ಕೆ ಬಟ್ಟೆ ಒಗೆದ ನೀರು ಹೋದರೆ ಉಳಿದ ಗಿಡಗಳಿಗೆ ಬೇಸಗೆಯಲ್ಲಿ ನಳ್ಳಿ ನೀರು ಸಿಕ್ಕಷ್ಟನ್ನು ಹಂಚಿಕೊಂಡು ಹಾಕಿ ಬೆಳೆಸಿದ್ದೆವು. ಇದಲ್ಲದೆ ದಾಳಿಂಬೆ, ಚಿಕ್ಕು, ಅಂಜೂರ, ದೀವಿ ಹಲಸು, ನುಗ್ಗೆಗಳಲ್ಲದೆ ಮಳೆಗಾಲದಲ್ಲಿ ಬೆಂಡೆ, ಅಲಸಂಡೆ, ಹೀರೆ, ಚಪ್ಪರದ ಅವರೆ, ತೊಂಡೆ ಚಪ್ಪರ, ಬಸಳೆ ಇವುಗಳೆಲ್ಲ ಇದ್ದು ಅಡುಗೆ ಮನೆಯ ರುಚಿಯೊಂದಿಗೆ ಗಿಡಗಳ ಸಾಮೀಪ್ಯ ಒದಗಿಸುವ ನೆಮ್ಮದಿಯನ್ನು ಅನುಭವಿಸಿದ್ದೆವು. ಮಕ್ಕಳು ಮರಗಳಿಗೆ ಉಯ್ಯೆಲೆ ಹಾಕಿ ಜೋಕಾಲಿಯಲ್ಲಿ ಜೀಕಿ ಆನಂದಿಸಿದ್ದಾರೆ. ನನ್ನ ಮಕ್ಕಳೊಂದಿಗೆ ನೆರೆಮನೆಯ ಮಕ್ಕಳೂ ಸೇರಿದ್ದಾರೆ. ಈ ಎಲ್ಲಾ ಹಣ್ಣಿನ ಮರಗಳು ಕಾಯಿ, ಹಣ್ಣುಗಳನ್ನು ಬಿಡುವ ಹೊತ್ತಿಗೆ ನೀರು ಸಾಲದು ಎನ್ನುವ ವಿಚಾರ ಬಂದಾಗ ಸುಡುವ ಬಿಸಿಲಿಗೆ ಬಾಡುವ ಅವುಗಳನ್ನು ನೋಡಿದರೆ ಸಂಕಟವಾಗುತ್ತಿತ್ತು.

ಆಗೆಲ್ಲ ನೀರಿನ ಬಗ್ಗೆ ಬರೆಯುತ್ತಿದ್ದ ಶ್ರೀ ಪಡ್ರೆಯವರ ಲೇಖನಗಳನ್ನು (80ರ ದಶಕದಲ್ಲಿ) ತಪ್ಪದೆ ಓದುತ್ತಿದ್ದ ನಾನು ಕೊನೆಗೆ ಸುಮಾರು ಹತ್ತು ಹದಿನೈದು ದೊಡ್ಡ ದೊಡ್ಡ ಮಣ್ಣಿನ ಕೊಡಪಾನಗಳನ್ನು ಖರೀದಿಸಿ ಅವುಗಳಿಗೆ ಸಣ್ಣ ತೂತು ಕೊರೆದು ಮರಗಳ ಬುಡದಲ್ಲಿಟ್ಟು ನೀರು ತುಂಬಿದೆ. ಸಣ್ಣದಾಗೆ ಹನಿಯುವ ನೀರಿನಿಂದಾಗಿ ಮೇಲೆ ಬಿಸಿಲಿದ್ದರೂ ಒದ್ದೆ ನೆಲದ ತೇವದಿಂದ ಗಿಡಗಳ ತುದಿಗಳು ಹಸಿರಾಗಿದ್ದುವು. ಪಡ್ರೆಯವರ ಓದು ಸಾರ್ಥಕವಾಯಿತು. ಆದರೂ ಬಾವಿಯೊಂದನ್ನು ತೋಡಬೇಕು ಎನ್ನುವ ನಮ್ಮ ಆಸೆ ಸುತ್ತಮುತ್ತಲಿನವರ ಮಾತುಗಳಿಂದ ತಡೆಯಲ್ಪಟ್ಟಿತ್ತು. ಆದರೆ ಅದೇಕೋ ಈಗ ಆದದ್ದಾಗಲೀ ನಮ್ಮ ಹಿತ್ತಲಲ್ಲಿ ನೀರಿನ ಒರತೆ ಇದೆಯೇ ಎಂದು ಪರೀಕ್ಷಿಸಿಯೇ ಬಿಡೋಣ ಎಂದು ನಿರ್ಧಾರ ಕೈಗೊಂಡೆವು.

ಭೂಮಿಯೊಳಗೆ ನೀರು ಇರುವುದನ್ನು ಪರೀಕ್ಷಿಸುವ ತಂತ್ರಗಾರಿಕೆ ಎಲ್ಲರಿಗೂ ತಿಳಿದಿರುವುದಿಲ್ಲ. ಕೆಲವರು ಕಬ್ಬಿಣದ ಬೀಗದ ಕೈಯನ್ನು ಇನ್ನು ಕೆಲವರು ಇನ್ನಾವುದೋ ಗಿಡದ ಕಡ್ಡಿಯನ್ನು ಬಳಸಿ ಗುರುತಿಸುತ್ತಾರಂತೆ. ಇನ್ನು ಕೆಲವರು ಕೆಲವುಗಿಡಗಳು ಸೊಂಪಾಗಿ ಬೆಳೆದ ಜಾಗವನ್ನು ಗಮನಿಸಿ ಅಲ್ಲಿ ನೀರು ಇದೆ ಎಂದು ಅನುಭವದಿಂದ ಹೇಳುತ್ತಾರಂತೆ. ಸರಿ ಇವುಗಳಲ್ಲಿ ಯಾವುದಾದರೂ ಸರಿ. ಅಂತಹವರು ಯಾರು ಎಲ್ಲಿದ್ದಾರೆ ಎನ್ನುವುದನ್ನು ವಿಚಾರಿಸಿದಾಗ ಹಳೆಯಂಗಡಿಯಲ್ಲಿ ಆಯುರ್ವೇದ ಔಷಧಿ ನೀಡುವ ವೈದ್ಯರಾಗಿ ದಂತಕತೆಯಂತೆ ಪ್ರಸಿದ್ಧರಾಗಿದ್ದ ಹರಿಭಟ್ಟರ ಹೆಸರನ್ನು ಊರವರು ತಿಳಿಸಿದರು. ಹರಿಭಟ್ಟರು ನನಗೆ ಪರಿಚಿತರೇ. ಈಗಾಗಲೇ ನಾಲ್ಕೈದು ವರ್ಷಗಳಿಂದ ನಾನವರ ಬಳಿಯಿಂದ ಔಷಧಿ ತರುತ್ತಿದ್ದೆ. ಆದುದರಿಂದ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅವರು ಮನೆ ಬಿಟ್ಟು ಹೊರಡುವುದಕ್ಕೆ ಬಿಡುವಿಲ್ಲದ ವ್ಯಕ್ತಿ. ಅವರನ್ನು ಕರೆತಂದು ವಾಪಾಸು ಕಳುಹಿಸುವುದಕ್ಕೆ ವಾಹನದ ವ್ಯವಸ್ಥೆ ಮಾಡಿದರೆ ಅವರ ಊಟದ ಹೊತ್ತನ್ನು ನಮಗಾಗಿ ನೀಡಲು ಒಪ್ಪಿಕೊಂಡರು.

ಬಂದವರು ಹೇಗೆ ಗುರುತಿಸಿದರು ಎನ್ನುವುದು ನೆನಪಿಲ್ಲ. ಎರಡು ಕಡೆ ಗುರುತು ಮಾಡಿಕೊಟ್ಟರು. ಅವರ ಶ್ರಮಕ್ಕೆ, ತಿಳುವಳಿಕೆಗೆ ಪ್ರತಿಯಾಗಿ ಅವರಿಗೆ ಏನನ್ನು ನೀಡುವುದು ಎಂದು ತಿಳಿಯಲಿಲ್ಲ. ಅವರೂ ಏನನ್ನೂ ಪಡೆದುಕೊಳ್ಳಲಿಲ್ಲ. ಇದು ಅವರ ಸಮಾಜ ಸೇವೆ. ತನಗೆ ತಿಳಿದ ವಿದ್ಯೆಯನ್ನು ಇತರರಿಗಾಗಿ ಉಪಯೋಗಿಸಿದರೆ ಮಾತ್ರವಲ್ಲವೇ ಅದು ವಿದ್ಯೆ. ಹರಿಭಟ್ಟರ ಔಷಧಿಯೂ ಹಾಗೆಯೇ. ಅವರು ಕುಳಿತುಕೊಳ್ಳುವ ಸ್ಥಳದ ಬಳಿ ಎರಡೂ ದೊಡ್ಡ ಕ್ಯಾನುಗಳಲ್ಲಿ ಆರಿಷ್ಠಗಳಿರುತ್ತವೆ. ಕೆಲವರಿಗೆ ಅದರಲ್ಲಿ ಒಂದನ್ನು, ಇನು ಕೆಲವರಿಗೆ ಎರಡನ್ನೂ ಬೆರೆಸಿ ನೀಡಿದರೆ ಅದು ಸಂಜೀವಿನಿಯಂತೆ ಕೆಲಸ ಮಾಡುತ್ತಿತ್ತು. ಎಲ್ಲರೂ ನೋಡುತ್ತಿದ್ದ ಹಾಗೆಯೇ ಎಲ್ಲರಿಗೂ ಅದನ್ನೇ ನೀಡುವುದನ್ನು ನೋಡಿದ ಜನ ಅದು ಯಾವ ಔಷಧಿ ಎಂದು ತಿಳಿಯದೆ, ಕಾಯಿಲೆ ಗುಣವಾಗುವುದು ಔಷಧಕ್ಕಿಂತ ಹೆಚ್ಚಾಗಿ ಅವರ ‘‘ಕೈ ಗುಣ’’ದಿಂದ ಎಂದೇ ಹೇಳುತ್ತಿದ್ದರು.
ಹರಿಭಟ್ಟರು ತೋರಿಸಿದ ಮನೆಯ ಅಡುಗೆ ಕೋಣೆಯ ಪಕ್ಕದಲ್ಲಿ ಅಂಗಳದ ಬಲ ಬದಿಯಲ್ಲಿದ್ದ ಜಾಗದಲ್ಲಿ ಬಾವಿ ತೋಡಿದರೆ ಮನೆಯೊಳಗೆ ನೀರು ಸೇದಿ ಒಯ್ಯುವುದಕ್ಕೂ ಅನುಕೂಲವಲ್ಲವೇ? ಆದ್ದರಿಂದ ಆ ಜಾಗದಲ್ಲೇ ಮೇ ತಿಂಗಳಲ್ಲಿ ಬಾವಿ ತೋಡಿಸುವ ಕೆಲಸ ಪ್ರಾರಂಭವಾಯಿತು.

ನೀರೂ ಸಿಕ್ಕಿತು. ಸುಂದರವಾದ ಕಟ್ಟೆ. ಒರಳಿನ ರಾಟೆ ಹಾಕಿ ನೀರು ಸೇದಲು ವ್ಯವಸ್ಥೆ ಮಾಡಿಕೊಂಡೆವು. ಮನೆಯ ಮುಂದೆ ಬಾವಿಕಟ್ಟೆಯೊಂದಿದ್ದರೆ ಆ ಮನೆಯ ಚಂದವೇ ಬೇರೆ ಎನ್ನುವುದು ಗೊತ್ತಿತ್ತು. ಈಗ ಅದು ಒದಗಿದುದಕ್ಕೆ ಆದ ಸಂತೋಷದೊಂದಿಗೆ ಛೇ... ನಾವು ಈ ಹಿಂದೆಯೇ ಈ ಕೆಲಸ ಮಾಡಬೇಕಾಗಿತ್ತು. ಊರವರ ಮಾತು ನಂಬಿ ಕೆಟ್ಟೆವು ಅಂದುಕೊಂಡುದೂ ಉಂಟು. ಕೊನೆಗೆ ಈಗಲಾದರೂ ಬಾವಿ ತೋಡಿಸಿದೆವಲ್ಲಾ ಎಂಬ ಸಮಾಧಾನ, ತೃಪ್ತಿ. ಮೇ ತಿಂಗಳಲ್ಲಿ ನೀರು ಸಿಕ್ಕಿದರೆ ಬಾವಿಯಲ್ಲಿ ನೀರು ಬತ್ತುವುದಿಲ್ಲ ಎನ್ನುವ ಅನುಭವದ ಮಾತು ಸತ್ಯವಾಯಿತು. ಬಾವಿ ನಮ್ಮದಾದರೂ ನೀರು ನಮ್ಮದು ಮಾತ್ರವಲ್ಲ ಎಂಬ ಎಚ್ಚರ ನಮ್ಮದು. ಅದು ದೇವರ ಸೃಷ್ಟಿ. ಅದನ್ನು ಇನ್ನೊಬ್ಬರಿಗೆ ಇಲ್ಲ ಎನ್ನುವವರು ಬಾಯಿಗೆ ನೀರಿಲ್ಲದೆ ಸಾಯುತ್ತಾರೆ ಎಂಬ ನಂಬಿಕೆ ನಮ್ಮ ಹಿರಿಯದ್ದು. ಆದರೆ ಅದೆಷ್ಟೋ ಮಂದಿ ಜಾತಿಯ ಹೆಸರಲ್ಲಿ ಬಾವಿ ಮಟ್ಟಬಾರದು, ನೀರು ಸೇದಬಾರದು ಎಂಬ ಕಠಿಣ ಶಾಸನವನ್ನೇ ಮಾಡಿದ್ದರಲ್ಲ! ಅದೇನೆ ಇರಲಿ ನಮ್ಮ ಬಾವಿಯ ನೀರು ಶೂದ್ರರಿಗೆ ದಲಿತರಿಗೆ ಎಲ್ಲರಿಗೂ ದಕ್ಕಿತು. ಡಾ.ಶಿವರಾಮ ಕಾರಂತರು ಅನ್ನ ಮಾರುವುದು ತಪ್ಪಲ್ಲ ಎಂದರು. ಆದ್ದರಿಂದ ಬ್ರಾಹ್ಮಣರ ಹೊಟೇಲುಗಳು ಪ್ರಸಿದ್ಧವಾಯಿತು. ಅವರು ವ್ಯಾಪಾರಿಗಳಾದರೂ ಬ್ರಾಹ್ಮಣರಾಗಿಯೇ ಉಳಿದಿದ್ದಾರೆ. ಆದರೆ ಇಂದು ನೀರು ಮಾರಾಟವಾಗುವುದನ್ನು ಕಂಡಾಗ ಸರಿ ಎನ್ನಲು ಮನಸ್ಸು ಒಪ್ಪುವುದಿಲ್ಲ. ಆದರೆ ದುಡ್ಡು ಕೊಡದೆ ನೀರು ಕುಡಿಯಲು ಹೋದರೆ ಡಾಕ್ಟರರಿಗೆ ದುಡ್ಡು ಕೊಡಬೇಕಾದ ಸ್ಥಿತಿ ಇಂದು ಕುಡಿಯುವ ನೀರಿಗೆ ಒದಗಿದೆಯಲ್ಲಾ? ಯಾರು ಇದಕ್ಕೆ ಹೊಣೆಗಾರರು? ನಾವೇ ಎನ್ನಬೇಕು. ಅಂದರೆ ಅರಿವಿಲ್ಲದ ಅಥವಾ ಅರಿವು ಮಾಡಿಕೊಳ್ಳಲು ಮನಸ್ಸಿಲ್ಲದ ಹೊಣೆಗೇಡಿಗಳಾದ ನಾವು.

ನನ್ನೂರು ಎಂದಾಗ ಅಲ್ಲಿನ ಜನರು ಅವರ ಬದುಕು ಅವರ ಸಂಬಂಧಗಳು ಸುತ್ತಮುತ್ತಲ ಜನರ ನಡುವೆ ಇರುವುದನ್ನು ಈಗಾಗಲೇ ತಿಳಿಸಿದ್ದೇವೆ. ಇದು ಊರಿನಲ್ಲಿಯೂ ಹೆಚ್ಚು ಕಡಿಮೆ ಹೀಗೆಯೇ ಇರುವಂತಹುದು. ಆದರೂ ಒಂದು ಊರು ಇನ್ನೊಂದು ಊರಿಗೆ ಒಳ್ಳೆಯ ಅಥವಾ ಕೆಟ್ಟ ಮಾದರಿಗಳು ಆಗುವುದು ಕೂಡಾ ಸಹಜವೇ. ಅಂದ ಮೇಲೆ ದೇಶದಲ್ಲಿ ರಾಜ್ಯದಲ್ಲಿ ನಡೆಯುವ ವಿದ್ಯಮಾನಗಳು ಅದರಲ್ಲೂ ಪ್ರಜಾಪ್ರಭುತ್ವದ ಈ ದೇಶದಲ್ಲಿ ರಾಜಕೀಯ ಘಟನೆಗಳಿಗಂತೂ ತನ್ನದೇ ಆದ ಶಕ್ತಿ ಇದೆ. ಅದು ಬೆಂಕಿಯಂತೆ ಗಾಳಿಯಂತೆ ವೇಗವಾಗಿ ಹರಡಿ ಎಲ್ಲರನ್ನೂ ಎಲ್ಲವನ್ನೂ ತನ್ನ ಕಬಂಧಬಾಹುಗಳಲ್ಲಿ ಅದೃಶ್ಯವಾಗಿದ್ದುಕೊಂಡೇ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುತ್ತದೆ.

ಆಗ ಅದಕ್ಕೆ ಬಲಿಪಶುಗಳಾಗುವವರು ನಿಜವಾದ ಅರ್ಥದಲ್ಲಿ ನಿರಪರಾಧಿಗಳೇ ಆಗಿರುತ್ತಾರೆ. ದೇಶದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಡೆದ ಎರಡು ದೊಡ್ಡ ದುರಂತಗಳು ಮರೆಯಲಾಗದವುಗಳು ಮತ್ತು ಅವು ಒಂದಕ್ಕೊಂದು ತಳಕು ಹಾಕಿಕೊಂಡಿರುವುದು ನಿಜ. ಒಂದು ತುರ್ತು ಪರಿಸ್ಥಿತಿಯ ಘೋಷಣೆ ಮಾತ್ರವಲ್ಲ. ತುರ್ತು ಪರಿಸ್ಥಿತಿಯ ಹೇರಿಕೆ. ಈ ಬಗ್ಗೆ ನನ್ನನ್ನೂ ಸೇರಿದಂತೆ ನಮ್ಮೂರಿನಲ್ಲಿ ಪ್ರಜ್ಞಾವಂತ ನಾಗರಿಕರಲ್ಲಿ ಅಸಹನೆ, ಆಕ್ರೋಶಗಳು ಇದ್ದುವು. ಈ ತುರ್ತು ಪರಿಸ್ಥಿತಿಯಿಂದಾಗಿಯೇ ಹೊಸ ರಾಜಕೀಯ ಪಕ್ಷ ಉದಯವಾಯಿತು. ಈ ಹಿಂದೆಯೇ ಕಾಂಗ್ರೆಸ್ ಪಕ್ಷವೂ ಹೋಳಾಗಿ ಇಂದಿರಾ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್ ಎಂಬುದಾಗಿತ್ತು. ರಾಜ್ಯದಲ್ಲೂ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಕಾಂಗ್ರೆಸನ್ನು ತೊರೆದಿದ್ದರು. ಜಯಪ್ರಕಾಶ್ ನಾರಾಯಣರು ಯುವಜನತೆಗೆ ಮಾರ್ಗದರ್ಶಕರಾದರು. ತುರ್ತು ಪರಿಸ್ಥಿತಿಯ ಕಾರಣದಿಂದಲೇ ಇಂದಿರಾಗಾಂಧಿ ಮುಂದಿನ ಚುನಾವಣೆಯಲ್ಲಿ ಸೋತದ್ದಾಯಿತು. ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆ ಸೇರಿದ ರಾಜಕೀಯ ನಾಯಕರು ಸೇರಿ ಹೊಸ ರಾಜಕೀಯ ಪಕ್ಷದ ಉದಯವಾಯಿತು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಹೊರತುಪಡಿಸಿ ಉಳಿದ ಪ್ರಾದೇಶಿಕ ಪಕ್ಷಗಳು. ಕಾಂಗ್ರೆಸ್‌ನಿಂದ ಹೊರಬಂದವರೆಲ್ಲ ಸೇರಿಕೊಂಡ ಜನತಾ ಪಕ್ಷವು ಇಂದಿರಾಗಾಂಧಿಯನ್ನು ಸೋಲಿಸಿತು. ಹೊಸ ರಾಜಕೀಯ ಪಕ್ಷಗಳು, ಹೊಸ ರಾಜಕೀಯ ನೇತಾರರು ಹುಟ್ಟಿಕೊಂಡಂತೆಯೇ ಸಾಮಾನ್ಯ ಜನರಲ್ಲಿದ್ದ ಅಸಹನೆ, ಅಸಹಿಷ್ಣುತೆಗಳು ಕೇವಲ ರಾಜಕೀಯವಾಗಿ ಉಳಿಯದೆ ಅದು ಜಾತಿ ಧರ್ಮಗಳ ಕಡೆಗೆ ಚಾಚಿಕೊಂಡು ಮಾನವೀಯತೆ ನಿಧಾನವಾಗಿ ಮರೆಯಾಗುತ್ತಿತ್ತು.

ರಾಜಕೀಯವಾಗಿ ಸುಪ್ತವಾಗಿದ್ದ ಆಸೆ ಆಕಾಂಕ್ಷೆಗಳಿಗೆ ಅನೇಕ ನೆಲೆಗಳಲ್ಲಿ ಸ್ಥಳೀಯವಾದ ಯುವ ಸಂಘಟನೆಗಳು ಹುಟ್ಟಿಕೊಂಡವು. ಯುವಕರಲ್ಲಿ ಇದ್ದುದು ಉತ್ಸಾಹವಷ್ಟೇ! ಅವರಿಗೆ ರಾಜಕೀಯದ ಇತಿಹಾಸವೂ ಗೊತ್ತಿಲ್ಲ. ಒಳಸುಳಿಗಳೂ ಗೊತ್ತಿಲ್ಲ. ಆದರೆ ಹರೆಯದ ಉನ್ಮಾದಕ್ಕೆ, ಆವೇಶಕ್ಕೆ ವೇದಿಕೆಗಳು ದೊರೆತವು. ಅವರಿಗಿಲ್ಲದ ವಿವೇಕವನ್ನು ರಾಜಕೀಯ ನೇತಾರರು ತಿಳಿಸಿ ಹೇಳುವ ಎಚ್ಚರವನ್ನು ಉದ್ದೇಶಪೂರ್ವಕ ಎನ್ನುವಂತೆ ಮಾಡದಿರುವುದರ ಹಿಂದೆ ಸ್ವಂತ ರಾಜಕೀಯ ಸ್ವಾರ್ಥಗಳೊಂದಿಗೆ, ಮೂರ್ಖರಾದ ಯುವಕರು ಬಲಿಯಾದರೆ ಅದು ಅವರ ಹಣೆಬರಹ ಎನ್ನುವ ಕರ್ಮ ಸಿದ್ಧಾಂತದ ಧರ್ಮಾನುಯಾಯಿಗಳದ್ದು ನಿಜವಾಗಿಯೂ ಕರ್ಮ ಸಿದ್ಧಾಂತವಲ್ಲ ಜಾತಿ ಸಿದ್ಧಾಂತ ಹಾಗೂ ಕೋಮು ಸಿದ್ಧಾಂತವೇ ಆಗಿದ್ದುದು ಇಂದು ಸ್ಪಷ್ಟವಾಗುವಂತೆ ಅಂದು ಪ್ರಕಟವಾಗದೆ ಇದ್ದುದೂ ಹೌದು.

1947ರಲ್ಲಿ ಪಡೆದ ಸ್ವಾತಂತ್ರದ ವೇಳೆ ನಡೆದ ವಿಭಜನೆಯಲ್ಲಿ ದೇಶ ಎರಡು ಹೋಳಾಗಿ ಪಾಕಿಸ್ತಾನ ಧರ್ಮದ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಕಂಡುಕೊಂಡರೆ ನಮ್ಮ ದೇಶ ಧರ್ಮ ನಿರಪೇಕ್ಷತೆಯನ್ನು ತನ್ನದಾಗಿಸಿಕೊಂಡಿತ್ತು. ಇದನ್ನು ಒಪ್ಪಿಕೊಂಡಿರದ ಮನಸ್ಸುಗಳಿಗೆ ತುರ್ತು ಪರಿಸ್ಥಿತಿಯೆನ್ನುವುದು ಸದವಕಾಶವನ್ನು ಕಲ್ಪಿಸಿಕೊಟ್ಟಿತ್ತು. ಮಾತ್ರವಲ್ಲ ಅದನ್ನು ಬಹು ಜಾಣತನದಿಂದ ತಮ್ಮದಾಗಿಸುವಲ್ಲಿ ರಾಜಕೀಯದ ಲಾಭವೂ ನೆರವಾಯಿತು. ಈ ಹಿನ್ನೆಲೆಯಲ್ಲಿ ದೇಶದ ಜನರ ಮನಸ್ಸುಗಳಲ್ಲಿ ಪರಸ್ಪರ ಅನುಮಾನದ ಬೀಜಗಳನ್ನು ಬಿತ್ತಲಾಯಿತು. ಹಾಗೆಯೇ ದೇಶದ ಪ್ರಜಾಪ್ರಭುತ್ವದ ರಕ್ಷಣೆಯ ನೆಪದಲ್ಲಿ ರಾಷ್ಟ್ರೀಯತೆಯೊಂದಿಗೆ ಧರ್ಮವನ್ನೂ ಬೆರೆಸಲಾಯಿತು. ಇವೆಲ್ಲಾ ಒಂದೇ ರಾತ್ರಿಯೊಳಗೆ ಅಥವಾ ಒಂದೇ ಚುನಾವಣೆಯಲ್ಲಿ ನಡೆದ ವಿದ್ಯಮಾನಗಳಲ್ಲ. ನಿಧಾನವಾಗಿ ಗತಿಶೀಲವಾಗಿದ್ದ ಈ ಕಾರ್ಯ ಯೋಜನೆಗಳು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಕೆಡವುವಲ್ಲಿ ನಿರ್ದಿಷ್ಠ ಗುರಿಯ ಒಂದು ಹಂತವನ್ನು ತಲುಪಿದಂತಾಗಿದೆ ಎನ್ನುವುದು ಸುಳ್ಳಲ್ಲ.

ಹೀಗಿದ್ದರೂ ಇಂಡಿಯಾ ಅಂದರೆ ಇಂದಿರಾ ಎಂಬ ಮನಸ್ಥಿತಿ, ಜನಸಾಮಾನ್ಯರಲ್ಲಿ ‘ಅಮ್ಮನೇ’ ಆಗಿ ಉಳಿದ ಇಂದಿರಾ ಜೈಲು ಸೇರಿದ್ದರಿಂದ ಸಹಾನುಭೂತಿಯೂ ಸೇರಿ ಮತ್ತೆ ಗೆದ್ದು ಬಂದು ಪ್ರಧಾನಿಯಾದುದು ರಾಜಕೀಯ ಎಂದರೆ ಯಾರೂ ತರ್ಕಿಸಲಾಗದ ಸತ್ಯ ಎನ್ನುವಂತಾಯ್ತು. ಹಾಗೆಯೇ ತುರ್ತು ಪರಿಸ್ಥಿತಿಯಂತೆಯೇ ಪಂಜಾಬ್‌ನಲ್ಲಿ ನಡೆದ ಬ್ಲೂ ಸ್ಟಾರ್ ಆಪರೇಷನ್ ಎಂಬ ರಾಜಕೀಯ ವಿದ್ಯಮಾನ ಪಂಜಾಬನ್ನು ಸ್ಮಶಾನ ಸದೃಶವನ್ನಾಗಿಸಿತು. ರಾಷ್ಟ್ರಪತಿಗಳಾಗಿದ್ದ ಪಂಜಾಬಿ ಗ್ಯಾನಿ ಜೈಲ್ ಸಿಂಗ್ ಉಸಿರು ಬಿಗಿ ಹಿಡಿದು ಇದ್ದುದು ರಾಷ್ಟ್ರಪತಿಯ ಬೆಲೆ ಏನು ಎನ್ನುವುದು ಸಾಬೀತುಪಡಿಸಿತು.

ದಿನಾ ಬೆಳಗಾದರೆ ಪತ್ರಿಕೆಯಲ್ಲಿ ಪಂಜಾಬ್‌ನಲ್ಲಿ ನಡೆಯುತ್ತಿದ್ದ ಮಾರಣ ಹೋಮಗಳ ಸುದ್ದಿ. ಮದುವೆ ಮನೆಗಳು ಮಸಣವಾದ ಸುದ್ದಿ. ಪಂಜಾಬಿನಿಂದ ಪಂಜಾಬಿಗಳೇ ಆಗಿದ್ದವರು ಬೇರೆ ಬೇರೆ ಊರುಗಳಿಗೆ ಗುಳೇ ಹೊರಟಿದ್ದು ಇದೇ ದಿನಗಳಲ್ಲಿ. ದಕ್ಷಿಣ ಭಾರತಕ್ಕೆ ಜಮಖಾನಗಳನ್ನು ಮಾರಾಟ ಮಾಡುತ್ತಲೇ ಉತ್ತರ ಭಾರತದ ಉಣ್ಣೆಯ ಉಡುಪುಗಳನ್ನು ದಕ್ಷಿಣಕ್ಕೆ ಪರಿಚಯಿಸಿದರು. ಇಂತಹ ದಿನಗಳಲ್ಲೇ ಪಂಜಾಬಿ ಜನರ ಬಗ್ಗೆ ಮನಸ್ಸಿನೊಳಗೆ ಸಹಾನುಭೂತಿ ಬೆಳೆಸಿಕೊಂಡಿದ್ದ ನಾನು ನನ್ನ ಮನೆ ಬಾಗಿಲಿಗೆ ಬಂದ ಗುರ್ಮೀತ್ ಸಿಂಗ್‌ಗೆ ಬಾಗಿಲು ತೆರೆದು ಚಾವಡಿಯಲ್ಲಿ ಕುಳ್ಳಿರಿಸಿ ವ್ಯಾಪಾರ ಮಾಡಿದೆ. ಊರಿನ ಜನರೆಲ್ಲಾ ಗಡ್ಡಧಾರಿಗಳಾದ ಸಿಂಗ್‌ಜೀಗಳನ್ನು ನೋಡಿದರೆ ಭಯ ಬೀಳುತ್ತಿದ್ದರು. ನಾನೋ ಅವನಿಂದ ಪಂಜಾಬಿನ ಬಗ್ಗೆ ವಿಷಯಗಳನ್ನು ಕೇಳಿ ತಿಳಿಯುತ್ತಿದ್ದೆ. ಅದೇ ಕಾಲಕ್ಕೆ ಇನ್ನಷ್ಟು ಕಷ್ಟ ಜೀವಿಗಳಾದ ಪಂಜಾಬಿಗಳು ಉರ್ವಾಸ್ಟೋರ್ ಬಳಿ ಇಂದಿನ ಮೂಡಾ ಕಚೇರಿ ಇರುವ ಅಂದಿನ ಖಾಲಿ ಜಾಗದಲ್ಲಿ ಡಾಮರು ಖಾಲಿಯಾದ ಡ್ರಮ್ಮುಗಳಿಂದ ಮಣ್ಣು, ಕಲಸಿದ ಜಲ್ಲಿ ಸಿಮೆಂಟನ್ನು ಹೊರಬಲ್ಲಂತಹ ಚಟ್ಟಿಗಳನ್ನು ತಯಾರಿಸುತ್ತಿದ್ದರು. ಗುರ್ಮೀತ್ ಸಿಂಗ್‌ನ ಈ ಮೂವತ್ತು ವರ್ಷಗಳ ಪರಿಚಯದಲ್ಲಿ ಅವನ ಸಂಬಂಧಿಗಳೂ ಬಂದು ಹೋಗುತ್ತಿರುತ್ತಾರೆ.

ಪಂಜಾಬಿಗೆ ಹಿಂದಿರುಗದ ಆತ ಹೈದರಾಬಾದಿನಲ್ಲಿ ನೆಲೆಸಿದ್ದಾನೆ. ಇತರ ಕೆಲವು ಸಂಬಂಧಿಗಳು ಮಂಗಳೂರಲ್ಲಿ ಇದ್ದಾರೆ. ಈಗ ಮಂಗಳೂರಲ್ಲಿಯೂ ಅವರಿಗೆ ‘ಗುರುದ್ವಾರ’ದ ಅಂದರೆ ಸಿಖ್ಖರ ಪ್ರಾರ್ಥನಾ ಮಂದಿರವೂ ನಿರ್ಮಾಣವಾಗಿದೆ. ಇವರ ಆತ್ಮೀಯತೆಯಿಂದ ಗುರು ನಾನಕರಿಂದ ಸ್ಥಾಪಿಸಲ್ಪಟ್ಟ ಹಿಂದೂ ಮುಸ್ಲಿಮ್ ಧರ್ಮಗಳೆರಡರ ಒಳಿತನ್ನು ಮೇಳೈಸಿಕೊಂಡ, ನಿರಾಕಾರನಾದ ದೇವನನ್ನು ಸಂತ, ಸೂಫಿಗಳ ವಚನಗಳ ಮೂಲಕ ಸುತ್ತಿಸುವ ಗುರುಬಾನಿ ಗ್ರಂಥವನ್ನು ಚಾಮರ ಬೀಸಿ ರಕ್ಷಿಸುವ ಸಾಂಕೇತಿಕತೆ ಜಡ್ಡಾಗದಿರಲಿ. ಆ ಗುರುಬಾನಿಗಳನ್ನು ಪ್ರಸಿದ್ಧರಾದ ನಾಲ್ವರು ಸಹೋದರರು ಹಾಡುತ್ತಿದ್ದುದನ್ನು ದೂರದರ್ಶನದಲ್ಲಿ ಕೇಳಿಸಿಕೊಳ್ಳುವಾಗ ಧರ್ಮವು ಕೂಡಾ ಒಂದು ಸಾಂಸ್ಥಿಕತೆ ಅಥವಾ ಸ್ಥಾವರವಾದುದಲ್ಲ. ಅದು ಜಂಗಮ ಸ್ವರೂಪಿ. ಹಾಗೆಯೇ ಅದು ಜಂಗಮತೆಯನ್ನು ಅಥವಾ ನಿರಂತರತೆಯ ಚಲನಶೀಲತೆಯನ್ನು ಬೆಳೆಸಿಕೊಂಡಾಗ ಅದು ಹೆಚ್ಚು ಮಾನವೀಯವಾಗಿರುತ್ತದೆ ಎನ್ನುವುದು ನನ್ನ ಅರಿವು.

ಪಂಜಾಬಿನ ಬ್ಲೂ ಸ್ಟಾರ್ ಪ್ರಕರಣ ಇಂದಿರಾಗಾಂಧಿಯನ್ನು ಅವರ ಅಂಗ ರಕ್ಷಕರಿಂದಲೇ ಕೊಲ್ಲಿಸಿತು. ಜೈಲ್‌ಸಿಂಗ್ ರಾಷ್ಟ್ರಪತಿ ಸ್ಥಾನದಿಂದ ಇಳಿದ ಬಳಿಕ ಅಮೃತಸರದ ಗುರುದ್ವಾರದ ಅಂಗಣದ ಬಳಿ ಭಕ್ತರ ಚಪ್ಪಲಿ ಶುಚಿ ಮಾಡಿ ತಾನು ರಾಜಕೀಯವಾಗಿ ಮಾಡಿದ ತಪ್ಪಿಗೆ ಧಾರ್ಮಿಕ ಶಿಕ್ಷೆಯನ್ನು ಸ್ವೀಕರಿಸಿ ತನ್ನ ಧರ್ಮದ ನೈತಿಕತೆಯನ್ನು ಉಳಿಸಿಕೊಂಡರು ಎನ್ನುವುದು ಸರಿಯೇ ತಪ್ಪೋ ಎನ್ನುವ ಜಿಜ್ಞಾಸೆಗಿಂತ ಅದು ಅವರು ನಂಬಿದ ನಂಬಿಕೆ ಎನ್ನುವುದೇ ಸರಿ. ಅದುವೇ ಅವರ ವ್ಯಕ್ತಿತ್ವ ಎಂದರೂ ಸರಿ. ಅವರು ಆಗ ರಾಷ್ಟ್ರಪತಿಯಾಗಿದ್ದೆ ಎಂಬ ದರ್ಪ ಅಹಂಕಾರಗಳಿಗೆ ಅವಕಾಶವಿಲ್ಲವಾಗಿತ್ತಲ್ಲ ಅದುವೇ ಮಾನವ ಸ್ವಭಾವ.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News