ಅನಂತ್ ಕುಮಾರ್ ಹೆಗಡೆ ವಿವಾದಿತ ಹೇಳಿಕೆಯಿಂದ ದೂರ ಸರಿದ ಬಿಜೆಪಿ

Update: 2017-12-27 09:41 GMT

ಹೊಸದಿಲ್ಲಿ,ಡಿ.27 : ಜಾತ್ಯತೀತ ಪದ ಹೊಂದಿರುವ ಸಂವಿಧಾನದಲ್ಲಿ ಆಡಳಿತ ಬಿಜೆಪಿ ಶೀಘ್ರದಲ್ಲಿಯೇ ಬದಲಾವಣೆ ತರುವುದು ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿ ಲೋಕಸಭೆ ಮುಂದೂಡಿಕೆಗೆ ಕಾರಣವಾಗಿರುವಂತೆಯೇ ಬಿಜೆಪಿ ತನಗೂ ಈ ಹೇಳಿಕೆಗೂ ಏನೂ ಸಂಬಂಧಿವಿಲ್ಲವೆಂದು ವಿವಾದದಿಂದ ದೂರ ಸರಿದು ನಿಂತಿದೆ.

“ಹೆಗಡೆ ಅವರ ಅಭಿಪ್ರಾಯವನ್ನು ಸರಕಾರ ಬೆಂಬಲಿಸುವುದಿಲ್ಲ'' ಎಂದು ಕೇಂದ್ರ ಸಚಿವ ವಿಜಯ್ ಗೋಯೆಲ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಸಂಸತ್ತಿನ ಹೊರಗೆ ಪತ್ರಕರ್ತರೊಡನೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ “ಸರಕಾರ ಈಗಾಗಲೇ ತಾನು ಹೆಗಡೆ ಹೇಳಿಕೆಯನ್ನು ಬೆಂಬಲಿಸುವುದಿಲ್ಲವೆಂದು ಹೇಳಿದೆ. ಈ ಅಧಿವೇಶನಕ್ಕೆ ಇನ್ನು ಐದು ದಿನಗಳು ಮಾತ್ರ ಇದ್ದು, ವಿಪಕ್ಷ ಗೊಂದಲ ಸೃಷ್ಟಿಸದೆ ಕಲಾಪ ನಡೆಸಲು ಸಹಕರಿಸುವುದೆಂದು ಆಶಿಸುತ್ತೇನೆ'' ಎಂದಿದ್ದಾರೆ.

ಆದರೆ ಸಚಿವ ಹೆಗಡೆ ತಮ್ಮ ಹೇಳಿಕೆಯ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡಬೇಕೆಂಬ ಬೇಡಿಕೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲವಾಗಿದ್ದು ಸಚಿವ ಈ ವಿಚಾರದಲ್ಲಿ ಮಾತನಾಡುವುದಿಲ್ಲ ಎಂದು ಪಕ್ಷದ ಮೂಲಗಳ ತಿಳಿಸಿವೆ.

ಆದರೆ ವಿಪಕ್ಷ ಮಾತ್ರ ಸಚಿವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದೆ. ``ಬಾಬಾ ಸಾಹೇಬ್ ಕಾ ಯೇ ಅಪಮಾನ್ ನಹೀ ಚಲೇಗಾ'' ಎಂದು ವಿಪಕ್ಷ ಸದಸ್ಯರು ರಾಜ್ಯಸಭೆಯಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಅವರ ಸ್ಥಾನದ ಬಳಿ ಬಂದು ಘೋಷಣೆಗಳನ್ನು ಕೂಗಿದರು.

ಅತ್ತ ಕರ್ನಾಟಕ ಬಿಜೆಪಿ ಘಟಕ ಕೂಡ ಹೆಗಡೆ ಹೇಳಿಕೆಯಿಂದ ದೂರ ಸರಿದು ನಿಂತಿದೆ. ತರುವಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೆಗಡೆ ವಿರುದ್ಧ ಕಿಡಿ ಕಾರಿದ್ದು “ಅವರು ಸಂವಿಧಾನವನ್ನು ಅಧ್ಯಯನ ಮಾಡಿಲ್ಲ, ಆವರಿಗೆ ಸಂಸದೀಯ ಮತ್ತು ರಾಜಕೀಯ ಭಾಷೆಯೂ ಗೊತ್ತಿಲ್ಲ,” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News