ಜಾಧವ್ ಪತ್ನಿಯ ಶೂ ಒಳಗೆ ಲೋಹದ ವಸ್ತು ಇತ್ತು ಎಂದು ಹೇಳಿದ ಪಾಕ್

Update: 2017-12-27 10:51 GMT

ಇಸ್ಲಾಮಾಬಾದ್,ಡಿ.28 :  ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ ಮಾಜಿ ನೌಕಾದಳ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪತ್ನಿಯ ಶೂ ಒಳಗೆ ಏನೋ ಲೋಹದ ವಸ್ತುವಿದ್ದುದರಿಂದ ಅದನ್ನು ವಶ ಪಡಿಸಿಕೊಳ್ಳಲಾಗಿತ್ತು ಪಾಕಿಸ್ತಾನ ಹೇಳಿದೆ.

ಜಾಧವ್ ಅವರನ್ನು ಸೋಮವಾರ ಭೇಟಿಯಾಗಲು ಅವರ ತಾಯಿ ಮತ್ತು ಪತ್ನಿಗೆ ಅನುಮತಿ ನೀಡಿದ್ದ ಪಾಕಿಸ್ತಾನ ಈ ಸಂದರ್ಭ ಆವರಿಬ್ಬರೊಡನೆ ಕೆಟ್ಟದಾಗಿ ವರ್ತಿಸಿರುವುದಕ್ಕೆ ಭಾರತ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಾಧವ್ ಅವರ ಪತ್ನಿ ಚೇತನ್ಕುಲ್ ಅವರ ಶೂಗಳನ್ನು ಯಾವುದೇ ಸಕಾರಣವಿಲ್ಲದೆ ವಶಕ್ಕೆ ಪಡೆದುಕೊಂಡು ಆಕೆಯ ಸತತ ಮನವಿಯ ಹೊರತಾಗಿಯೂ ಅವುಗಳನ್ನು ಹಿಂದಿರುಗಿಸದೇ ಇರುವುದಕ್ಕೆ ಭಾರತ ಕೆಂಡಾಮಂಡಲವಾಗಿದ್ದು ತನ್ನ ಆಕ್ರೋಶವನ್ನು ಈಗಾಗಲೇ ಪಾಕಿಸ್ತಾನಕ್ಕೆ ತಿಳಿಸಿದೆ.

ಆಕೆಯ ಶೂಗಳಲ್ಲಿ ಅದೇನೋ ಇತ್ತು, ತನಿಖೆ ನಡೆಯುತ್ತಿದೆ ಎಂದು ಪಾಕಿಸ್ತಾನ ತಿಳಿಸಿದ್ದು ತನಗೆ ಅರ್ಥಹೀನ ವ್ಯಾಗ್ಯುದ್ಧಗಳಲ್ಲಿ ತೊಡಗಿಸಿಕೊಳ್ಳಲು ಮನಸ್ಸಿಲ್ಲ ಎಂದು ಅಲ್ಲಿನ ವಿದೇಶಾಂಗ ಕಚೇರಿ ಹೇಳಿದೆ.

ಭಾರತಕ್ಕೆ ಏನಾದರೂ ದೂರು ಇದ್ದರೆ ಜಾಧವ್ ಅವರ ತಾಯಿ ಮತ್ತು ಪತ್ನಿ ಅಥವಾ ಅವರ ಜತೆಗಿದ್ದ ಭಾರತೀಯ ಡೆಪ್ಯುಟಿ ಹೈಕಮಿಷನರ್ ಅಲ್ಲೇ ಭಾರತದ ಮನವಿಯಂತೆ ಸ್ವಲ್ಪ ದೂರದಲ್ಲಿದ್ದ ಮಾಧ್ಯಮಗಳಿಗೆ ತಿಳಿಸಬಹುದಾಗಿತ್ತು ಎಂದು ಪಾಕಿಸ್ತಾನ ಹೇಳಿದೆ.

ತಮ್ಮ ಪತ್ನಿ ಮತ್ತು ತಾಯಿಯ ಜತೆ ಜಾಧವ್ ಮಾತನಾಡುವಾಗ ಸಾಕಷ್ಟು ಒತ್ತಡದಲ್ಲಿದ್ದಂತಿದ್ದರು ಎಂದು ಭಾರತ ತಿಳಿಸಿದೆಯಲ್ಲದೆ ಭೇಟಿಯ ವೇಳೆಗೆ ಬಟ್ಟೆ ಬದಲಾಯಿಸಲು, ಮಂಗಲಸೂತ್ರ, ಬಳೆ, ಬಿಂದಿ ತೆಗೆಯಲು ಜಾಧವ್ ಅವರ ತಾಯಿ ಮತ್ತು ಪತ್ನಿಯನ್ನು ಬಲವಂತ ಪಡಿಸಲಾಗಿತ್ತು ಎಂದು ಭಾರತ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News