ಸ್ವಾತಂತ್ರ್ಯ ದಿನದಂದು ಆರೆಸ್ಸೆಸ್ ಮುಖ್ಯಸ್ಥರಿಂದ ಧ್ವಜಾರೋಹಣ ಮಾಡಿಸಿದ ಶಾಲೆಯ ವಿರುದ್ಧ ಕ್ರಮಕ್ಕೆ ಕೇರಳ ಸಿಎಂ ಆದೇಶ

Update: 2017-12-30 07:58 GMT

ತಿರುವನಂತಪುರಂ, ಡಿ.30: ಸ್ವಾತಂತ್ರ್ಯ ದಿನಾಚರಣೆಯಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಂದ ಧ್ವಜಾರೋಹಣ ಮಾಡಿಸಿ ನಂತರ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯ ಬದಲು ವಂದೇ ಮಾತರಂ ಹಾಡಿಸಿದ ಪಾಲಕ್ಕಾಡಿನ ಕರ್ನಕಿಯಮ್ಮನ್ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಿಕ್ಷಣ ಇಲಾಖೆಗೆ ಆದೇಶಿಸಿದ್ದಾರೆ. ಶಾಲೆಯ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಹೇಳಿದ್ದಾರೆ.

ರಾಷ್ಟ್ರಧ್ವಜ ನಿಯಮ 2002ರಂತೆ ರಾಷ್ಟ್ರ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಾಗಿದೆ. ಮೇಲಾಗಿ ರಾಜಕೀಯ ನಾಯಕರಿಗೆ ಸರಕಾರಿ ಸಂಸ್ಥೆಗಳಲ್ಲಿ ಹಾಗೂ ಅನುದಾನಿತ ಶಾಲೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಹಾಗಿಲ್ಲ. ಶಾಲೆಯ ಮುಖ್ಯಸ್ಥರು ಹಾಗೂ ಇಲಾಖಾ ಮುಖ್ಯಸ್ಥರು ಮಾತ್ರ ಧ್ವಜಾರೋಹಣ ನೆರವೇರಿಸಬಹುದಾಗಿದೆ.

ಮುಖ್ಯಮಂತ್ರಿಯ ಆದೇಶ ನವೆಂಬರ್ 27ರಂದೇ ಜಾರಿಯಾಗಿದೆಯೆನ್ನಲಾಗಿದೆ. ಶಿಕ್ಷಣ ಇಲಾಖೆ ಈಗಾಗಲೇ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮ್ಯಾನೇಜರ್ ಅವರಿಂದ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದ್ದು, ಅವರಿಂದ ದೊರೆತ ಉತ್ತರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾತಿ ಕುರಿತಾಗಿಯೂ ಮುಖ್ಯಮಂತ್ರಿ ಪಾಲಕ್ಕಾಡ್ ಎಸ್ಪಿ ಅವರಿಗೆ ಸೂಚಿಸಿದ್ದಾರೆ.

ಶಿಕ್ಷಣ ಇಲಾಖೆಯ ಉಪನಿರ್ದೇಶಕರ ವರದಿಗಾಗಿ ಸದ್ಯ ಕಾಯಲಾಗುತ್ತಿದೆ. ರಾಜ್ಯ ಗುಪ್ತಚರ ಬ್ಯೂರೋ ಮತ್ತು ತಹಶೀಲ್ದಾರ್ ಅವರು ಸಲ್ಲಿಸಿದ ವರದಿಯಂತೆ ಭಾಗವತ್ ಸ್ವಾತಂತ್ರ್ಯದ ದಿನದಂದು ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಜತೆಗೆ ಶಾಲೆಗೆ ಹೋಗಿದ್ದರು. ಅವರೆಲ್ಲ ಕಾರ್ಯಕ್ರಮ ಮುಗಿಸಿ ಹಿಂದಿರುಗಿದ ನಂತರ ರಾಷ್ಟ್ರಗೀತೆ ಹಾಡಲಾಗಿತ್ತು. ಮತ್ತೆ ಇನ್ನೊಮ್ಮ ಧ್ವಜಾರೋಹಣ ನಡೆಸಿ ಮತ್ತೆ ವಂದೇ ಮಾತರಂ ಹಾಡಲಾಯಿತು ಎಂದು ತಹಶೀಲ್ದಾರ್ ಅವರ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News