ಮದುಮಗಳಿಗೆ ಐವತ್ತು - ಕುವೆಂಪು ಹಬ್ಬದ ಗಮ್ಮತ್ತು

Update: 2017-12-30 18:57 GMT

ಕ್ರಾಂತಿಕಾರಕ ವಿಚಾರಧಾರೆಯಿಂದ ಜಗತ್ತಿಗೆ ‘ಮನುಜ ಮತ-ವಿಶ್ವ ಪಥ’ದ ಮಾರ್ಗ ತೋರಿದ ಕುವೆಂಪು ಅವರ ಜನ್ಮ ದಿನೋತ್ಸವ, ‘...ಮದುಮಗಳ’ ಸುವರ್ಣ ಮಹೋತ್ಸವ, ಹೀಗೆ ಕೂಡಿ ಬಂದ ಸಹಯೋಗದಿಂದ ಹಬ್ಬದೋಪಾದಿಯಲ್ಲಿ ಕುವೆಂಪು ಅವರನ್ನು ಆಚರಿಸುವುದು ಯೋಗ್ಯವಾದದ್ದೇ. ಆದರೆ ಇಂಥ ಸಂದರ್ಭಗಳು ಕೇವಲ ಸಂಭ್ರಮಾಚರಣೆಯ ಸಡಗರದಲ್ಲೇ ಪರ್ಯವಸಾನ ಗೊಳ್ಳಬಾರದು. ಇದು, ಕುವೆಂಪು ಸಾಹಿತ್ಯ ಪ್ರತಿಪಾದಿಸುವ ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬಂಥ ಮಾನವೀಯ ಮೌಲ್ಯಗಳಿಂದ ನಾವು ಪ್ರೇರಣೆ/ಪ್ರಚೋದನೆಗಳನ್ನು ಪಡೆದುಕೊಳ್ಳಲು ‘ಸುವರ್ಣಾ’ವಕಾಶವಾಗಬೇಕು.


ಕುವೆಂಪು

ಮೂರು ಅಕ್ಷರಗಳ ಮೋಡಿ ಮಾಡುವ ಹೆಸರು. ಮೇರು ಕಾವ್ಯ, ಮೇರು ವೈಚಾರಿಕತೆ ಮತ್ತು ವಿಶ್ವಮಾನವ ಪ್ರಜ್ಞೆಯ ಮೇರು ಪುರುಷ. ಕನ್ನಡ ಸಾರಸ್ವತ ಲೋಕದಲ್ಲಿ ಸದಾ ಜೀವಂತ ಚರ್ಚೆಯನ್ನು ಹುಟ್ಟುಹಾಕುವ ಮನೆಮಾತಾದ ಹೆಸರು. ಕನ್ನಡದ ಗಡಿ ದಾಟಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಕವಿ, ದ್ರಷ್ಟಾರ, ವಿಶ್ವ ಮಾನವನ ಕನಸುಗಾರ. ‘ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿನಿಮಿರುವುದು’ ಎಂದು ಸ್ಫೂರ್ತಿಯಿಂದ ಹಾಡಿದ ಮೇರು ಕವಿ.

 ಈ ‘ಮೇರು’ವನ್ನು ಸಂಭ್ರಮದಿಂದ ಆಚರಿಸುವ ಸಮಯವಿದು. ಕುವೆಂಪು ಅವರ 113ನೇ ಹುಟ್ಟು ಹಬ್ಬ, ಅವರ ಮೇರು ಕಾದಂಬರಿ ‘ಮಲೆಗಳಲ್ಲಿ ಮದುಮಗಳಿ’ಗೆ ಐವತ್ತು ವರ್ಷ.ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದು ಐವತ್ತು ವರ್ಷಗಳಾಗಿವೆ. ಕುವೆಂಪು ಉತ್ಸವ ಆಚರಿಸಲು ಇದಕ್ಕಿಂತ ಮಿಗಿಲಾದ ಕಾರಣ ಮತ್ತೇನು ಬೇಕು?
     
‘ಉದಯ ರವಿ’ ಕುವೆಂಪು ಜನ್ಮವಾದದ್ದು 1904ರಲ್ಲಿ. ಮೊನ್ನೆಗೆ (ಡಿ.29)ಕುಪ್ಪಳ್ಳಿ ವೆಂಕಟಪ್ಪಪುಟ್ಟಪ್ಪನವರ ಜನನವಾಗಿ 113 ವರ್ಷವಾಯಿತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಮೀಪದ ಕುಪ್ಪಳ್ಳಿ ತಂದೆಯ ಊರು. ಹುಟ್ಟಿದ್ದು ತಾಯಿಯ ತೌರೂರು ಹಿರಿಕೂಡಿಗೆಯಲ್ಲಿ. ಇಂಗ್ಲ್ಲಿಷ್‌ನಲ್ಲಿ ಒಂದು ನಾಣ್ನುಡಿ ಇದೆ: ಮಹಾಪುರುಷರು ವಿರಳ. ಕವಿಗಳು ಇನ್ನೂ ವಿರಳ.ಮಹಾಪುರುಷನೂ ಕವಿಯೂ ಆಗಿರುವುದು ಇನ್ನೂ ವಿರಳ. ಇಂಥ ವಿರಳರಲ್ಲಿ ವಿರಳರಾದ ಮಹಾ ಕವಿ ಕುವೆಂಪು ಕನ್ನಡಕ್ಕೆ ಮಲೆನಾಡಿನ ‘ಹಿರಿಕೊಡುಗೆ’ ಎಂದು ಎಚ್ಚೆಸ್ಕೆ ಹೇಳಿರುವುದರಲ್ಲಿ ಅತಿಶಯವೇನೂ ಇಲ್ಲ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಕುವೆಂಪು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಕುವೆಂಪು ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದದ್ದು 1967ರಲ್ಲಿ, ‘ಶ್ರೀ ರಾಮಾಯಣ ದರ್ಶನಂ’ಕೃತಿಗೆ. ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿಯ ಶಕೆ ಶುರುವಾಗಿ ಐವತ್ತು ವರ್ಷಗಳಾದವು.

‘ಶ್ರೀ ರಾಮಾಯಣ ದರ್ಶನಂ’ ಕುವೆಂಪು ಅವರ ಮಹಾಕಾವ್ಯವಾದರೆ, ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ (1936)ಮತ್ತು ‘ಮಲೆಗಳಲ್ಲಿ ಮದುಮಗಳು’ ಅವರ ಮಹಾನ್ ಗದ್ಯ ಕಾವ್ಯ ಎಂಬುದು ಕನ್ನಡ ಸಾಹಿತ್ಯ ವಿಮರ್ಶೆ ಈಗಾಗಲೇ ಮಾನ್ಯಮಾಡಿರುವ ಸಂಗತಿ. ಮಲೆನಾಡಿನ ದೇಸಿ ಸಂಸ್ಕೃತಿ ವಿಜೃಂಭಿಸಿರುವ ಮಹಾನ್ ಗದ್ಯ ಕಾವ್ಯ ಎನ್ನುವುದೂ ಉತ್ಪ್ರೇಕ್ಷೆಯಲ್ಲ. ‘ಮಲೆಗಳಲ್ಲಿ ಮದುಮಗಳು’ ಪ್ರಕಟವಾದದ್ದೂ ಜ್ಞಾನಪೀಠ ಪ್ರಶಸ್ತಿ ಬಂದ ವರ್ಷ 1967ರಲ್ಲೇ. ಹೀಗಾಗಿ ‘...ಮದುಮಗಳಿಗೆ’ ಈಗ ಐವತ್ತು ವರ್ಷದ ಪ್ರಾಯ. ಇಂತು ಮೂರೂ ಕೂಡಿಬಂದ ಸುಯೋಗ, ಕುವೆಂಪು ಮಹೋತ್ಸವ.

‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದು ಮಗಳು’ ಈ ಎರಡೂ ಕಾದಂಬರಿಗಳಲ್ಲಿ ಮಲೆನಾಡಿನ ಸಾಮಾಜಿಕ ಚಿತ್ರವನ್ನು ದೃಶ್ಯವತ್ತಾಗಿ ಚಿತ್ರಿಸಿರುವ, ಮಲೆನಾಡಿನ ಪ್ರಕೃತಿ ರಮಣೀಯತೆಯನ್ನು ಸೂರಗೊಂಡಿರುವ ಕುವೆಂಪು ಅವರ ಕವಿಪ್ರತಿಭೆಗೆ ಹೆಗಲೆಣೆಯಾಗಿ ಅವರ ಜೀವನದರ್ಶನ ಮತ್ತು ಚಿಂತನಶೀಲತೆಗಳು ಅದ್ಭುತ ರೀತಿಯಲ್ಲಿ ಅಭಿವ್ಯಕ್ತಿ ಪಡೆದಿರುವುದನ್ನು ಈ ಎರಡೂ ಕಾದಂಬರಿಗಳಲ್ಲಿ ನಾವು ಕಾಣುತ್ತೇವೆ. ಈ ಕಾರಣದಿಂದಾಗಿಯೇ ನಮ್ಮ ವಿಮರ್ಶಕರು ಕಲಾವಿದ ಕುವೆಂಪು ಮತ್ತು ದಾರ್ಶನಿಕ ಕುವೆಂಪು ಇವರಿಬ್ಬರ ಸಂಯೋಗವನ್ನು ಈ ಎರಡೂ ಕಾದಂಬರಿಗಳಲ್ಲಿ ಗುರುತಿಸಿದ್ದಾರೆ. ಕುವೆಂಪು ಕಾದಂಬರಿಗಳಲ್ಲಿ ವಾಸ್ತವ ಮತ್ತು ದರ್ಶನಗಳನ್ನು ಪರಸ್ಪರ ಪೂರಕವಾಗಿಯೇ ನೋಡಬೇಕು, ಪ್ರಕೃತಿ ಮತ್ತು ಸಂಸ್ಕೃತಿಗಳ ದ್ವಂದ್ವದ ತಾತ್ವಿಕ ಚೌಕಟ್ಟಿನಲ್ಲೇ ಈ ಎರಡು ಕಾದಂಬರಿಗಳನ್ನು ಅರ್ಥೈಸಬೇಕೆಂದು ವಿಮರ್ಶಕ ಜಿ.ಎಸ್.ಆಮೂರ್ ಅಭಿಪ್ರಾಯಪಡುತ್ತಾರೆ.

ಕಾಲಾನುಕ್ರಮಣಿಕೆಯಲ್ಲಿ ‘ಕಾನೂರು ಹೆಗ್ಗಡತಿ’ಗಿಂತ ಕೊಂಚ ಪೂರ್ವಕಾಲದ್ದು ಎನ್ನಬಹುದಾದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲೂ ಪ್ರಕೃತಿರಮ್ಯ ಮಲೆನಾಡು, ಮಲೆನಾಡಿನ ಹಳ್ಳಿಗಳು, ಅಲ್ಲಿನ ಜೀವನಕ್ರಮವನ್ನು ಕಾಣುತ್ತೇವೆಯಾದರೂ ಇಲ್ಲಿ ಗಂಡು-ಹೆಣ್ಣಿನ ಪ್ರೀತಿ ಸಂಬಂಧಗಳು ಹಾಗೂ ಲೈಂಗಿಕ ಸಂಬಂಧಗಳು ಮುಖ್ಯ ದನಿಯಾಗಿ ಬರುತ್ತವೆ. ವೈಯಕ್ತಿಕ ಸಂಬಂಧಗಳು ಹಾಗೂ ಗ್ರಾಮೀಣ ಜೀವನ ಅನಾವರಣಗೊಳ್ಳುವುದರ ಜೊತೆಜೊತೆಯಾಗೇ ಕಾದಂಬರಿಯುದ್ದಕ್ಕೂ ಸಾಂಸ್ಕೃತಿಕ ಚಿಂತನೆಯ ಝರಿಯೊಂದು ಅಂತರಗಂಗೆಯಾಗಿ ಪ್ರವಹಿಸುತ್ತಿದೆ. ಚಿಂತನೆಯ ಪ್ರಕ್ರಿಯೆಯಲ್ಲಿ ಹಿಂದೂಧರ್ಮ ಹಾಗೂ ಭಾರತೀಯತೆಗಳ ತಾತ್ವಿಕ ಚರ್ಚೆ, ಸಂವಾದಗಳು, ಸಮರ್ಥನೆಗಳು ಮುಂಚೂಣಿಗೆ ಬರುತ್ತವೆ. ಹಾಗಾಗಿಯೇ ಇದು, ಶೀರ್ಷಿಕೆಯಲ್ಲಿ ಧ್ವನಿತವಾಗಿರುವಂತೆ ಚೆನ್ನಮ್ಮ-ಮುಕುಂದಯ್ಯ, ತಿಮ್ಮಿ-ಗುತ್ತಿಯರ ರೊಮ್ಯಾಂಟಿಕ್ ಕಥನವಾಗದೆ, ಕಾದಂಬರಿಯಲ್ಲಿ ಮೂಡಿಬರುವ ಸಾಂಸ್ಕೃತಿಕ ಚಿಂತನೆ, ಆಧ್ಯಾತ್ಮಿಕ ಚಿಂತನೆಗಳಿಂದಾಗಿ, ಡಿ.ಆರ್.ನಾಗರಾಜ್ ಅವರಂಥ ವಿಮರ್ಶಕರಿಗೆ ಸರ್ವೋದಯದ ಆಧ್ಯಾತ್ಮಿಕ ಮಾನವೀಯತೆಯ ಕಥನವಾಗಿಯೂ ಕಂಡಿದೆ.

ಹೆಗ್ಗಡತಿ-ಹೂವಯ್ಯರಂತೆ ‘...ಮದುಮಗಳ’ಮುಕುಂದಯ್ಯನೂ ತನ್ನ ಆಲೋಚನೆ ಮತ್ತು ಕ್ರಿಯೆಗಳಿಂದ ಓದುಗರ ಮೇಲೆ ವಿಶಿಷ್ಟ ಛಾಪನ್ನು ಮೂಡಿಸುತ್ತಾನೆ. ‘ಮಲೆಗಳಲ್ಲಿ ಮದುಮಗಳು’ ಎಲ್ಲ ಕಾಲಕ್ಕೂ ಸಲ್ಲುವ ಕೃತಿಯಾಗಿ ಕನ್ನಡ ಕಥಾ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಇಂದಿನ ತಲೆಮಾರಿನವರಿಗೂ ಅದೊಂದು ಸಮಾಜೋಮಾನವಶಾಸ್ತ್ರೀಯ ಕೃತಿಯಾಗಿ ಅಧ್ಯಯನಾರ್ಹ ವೆನಿಸಿದೆ. ಇದಕ್ಕೆ, ಅದು ಚಲಚಿತ್ರ ಮತ್ತು ರಂಗಭೂಮಿಯಂಥ ಮಾಧ್ಯಮಗಳನ್ನು ಆಕರ್ಷಿಸಿರುವುದಕ್ಕಿಂತ ಬೇರೊಂದು ನಿದರ್ಶನ ಬೇಕಿಲ್ಲ.

‘ಮಲೆಗಳಲ್ಲಿ ಮದುಮಗಳು’ ಈಗ ನಾಟಕವಾಗಿ ತುಂಬಿದ ಗೃಹಗಳಿಗೆ ಪ್ರದರ್ಶನಗೊಳ್ಳುತ್ತಿರುವುದು ಅದರ ಜನಪ್ರಿಯತೆಯನ್ನು ಸೂಚಿಸುತ್ತದೆ. 712 ಪುಟಗಳ ಈ ಬೃಹತ್ ಕಾದಂಬರಿಗೆ ನಾಟಕರೂಪ ಕೊಟ್ಟವರು:ಕೆ.ವೈ.ನಾರಾಯಣ ಸ್ವಾಮಿ. ಅಹೋರಾತ್ರಿ ನಡೆಯುವ ಒಂಬತ್ತು ಗಂಟೆಗಳ ಪ್ರದರ್ಶನ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ನಿರ್ದೇಶಿಸಿರುವವರು ಕನ್ನಡ ಹವ್ಯಾಸಿ ರಂಗಭೂಮಿಯ ಖ್ಯಾತ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರು. ಮೂವತ್ತು ಹಾಡುಗಳಿರುವ ‘..ಮದುಮಗಳಿಗೆ’ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಶಿಧರ ಅಡಪ ವಿಶೇಷವಾಗಿ ರಂಗವಿನ್ಯಾಸವನ್ನು ರೂಪಿಸಿದ್ದಾರೆ. 158 ಪಾತ್ರಗಳಿರುವ ಈ ನಾಟಕದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳೂ ಸೇರಿದಂತೆ ಎಪ್ಪತ್ತು ಕಲಾವಿದರು ಅಭಿನಯಿಸಿದ್ದಾರೆ. ‘ಮಲೆಗಳಲ್ಲಿ ಮದುಮಗಳು’ ಮೊದಲ ಪ್ರದರ್ಶನವಾದದ್ದು 2010ರಲ್ಲಿ, ಮೈಸೂರಿನ ರಂಗಾಯಣದಲ್ಲಿ.

2013ರಲ್ಲಿ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿತು.ಇಲ್ಲಿಯವರೆಗೂ ಐವತ್ತಕ್ಕೂ ಹೆಚ್ಚು ಪ್ರದರ್ಶನಗಳಾಗಿದ್ದು, ಈಗ ಕಾದಂಬರಿಯ ಸುವರ್ಣಮಹೋತ್ಸವದ ಅಂಗವಾಗಿ ಮಾರ್ಚ್ 21ರವರೆಗೆ ಪ್ರದರ್ಶನವೀಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಟಕದ ಕಾಲಾವಧಿ, ರಂಗವಿನ್ಯಾಸ, ಕಲಾವಿದರ ಪಟಾಲಮ್ -ಹೀಗೆ ಎಲ್ಲ ದೃಷ್ಟಿಯಿಂದಲೂ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಇದೊಂದು ಅಭೂತಪೂರ್ವ ಪ್ರಯೋಗ. ಪೀಟರ್ ಬ್ರೂಕ್‌ನ ‘ಮಹಾಭಾರತ’ ನಾಟಕದ ನಂತರ ವಿಶ್ವದಲ್ಲೇ ಎರಡನೆಯ ಸುದೀರ್ಘ ನಾಟಕ ಎಂಬ ಕೀರ್ತಿ ‘ಮದುಮಗಳದು’. ಒಂಬತ್ತು ಗಂಟೆಗಳ ಸುದೀರ್ಘ ಪ್ರದರ್ಶನಾವಧಿ ಜೊತೆಗೆ ನಿರ್ದೇಶಕ ಸಿ.ಬಸವಲಿಂಗಯ್ಯನವರು, ರಂಗಸಜ್ಜಿಕೆ, ಕಲಾವಿದರು, ಸಂಗೀತ ಮೊದಲಾದ ವಿಷಯಗಳಲ್ಲಿ ಅಗಾಧವಾದ ಪ್ರತಿಭೆ ಮತ್ತು ಸಾಧನ ಸಂಪತ್ತನ್ನು ಈ ಪ್ರಯೋಗದಲ್ಲಿ ದುಡಿಸಿಕೊಂಡಿರುವುದು ‘ಮದುಮಗಳ’ಮತ್ತೊಂದು ಮಹತ್ವ.

ಕ್ರಾಂತಿಕಾರಕ ವಿಚಾರಧಾರೆಯಿಂದ ಜಗತ್ತಿಗೆ ‘ಮನುಜ ಮತ-ವಿಶ್ವ ಪಥ’ದ ಮಾರ್ಗ ತೋರಿದ ಕುವೆಂಪು ಅವರ ಜನ್ಮ ದಿನೋತ್ಸವ, ‘...ಮದುಮಗಳ’ ಸುವರ್ಣ ಮಹೋತ್ಸವ, ಹೀಗೆ ಕೂಡಿ ಬಂದ ಸಹಯೋಗದಿಂದ ಹಬ್ಬದೋಪಾದಿಯಲ್ಲಿ ಕುವೆಂಪು ಅವರನ್ನು ಆಚರಿಸುವುದು ಯೋಗ್ಯವಾದದ್ದೇ. ಆದರೆ ಇಂಥ ಸಂದರ್ಭಗಳು ಕೇವಲ ಸಂಭ್ರಮಾಚರಣೆಯ ಸಡಗರದಲ್ಲೇ ಪರ್ಯಾವಸಾನ ಗೊಳ್ಳಬಾರದು. ಇದು, ಕುವೆಂಪು ಸಾಹಿತ್ಯ ಪ್ರತಿಪಾದಿಸುವ ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬಂಥ ಮಾನವೀಯ ಮೌಲ್ಯಗಳಿಂದ ನಾವು ಪ್ರೇರಣೆ/ಪ್ರಚೋದನೆಗಳನ್ನು ಪಡೆಕೊಳ್ಳಲು ‘ಸುವರ್ಣಾ’ವಕಾಶವಾಗಬೇಕು. ಬಹುಸಂಖ್ಯಾತರ ಧಾರ್ಮಿಕ ಹಿತಾಸಕ್ತಿಗಳನ್ನು ರಕ್ಷಿಸುವ ನೆಪದಲ್ಲಿ ಭಾರತದ ಬಹುತ್ವ, ಬಹುಸಂಸ್ಕೃತಿಯನ್ನು ತಿರಸ್ಕರಿಸಿ, ಏಕಧರ್ಮ, ಏಕಸಂಸ್ಕೃತಿ, ಏಕಭಾಷೆ ಇತ್ಯಾದಿ ‘ಏಕಚಕ್ರಾಧಿಪತ್ಯದ’ ನೊಗಕ್ಕೆ ದೇಶವನ್ನು ಕಟ್ಟಿಹಾಕುವ, ಬಹುಸಖ್ಯಾತರಲ್ಲದವರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿಸುವ ಹುನ್ನಾರ ನಡೆದಿರುವ ಭಾರತದ ಇಂದಿನ ಪರಿಸ್ಥಿತಿಯಲ್ಲಿ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆ ತುಂಬ ಪ್ರಸ್ತುತವಾದದ್ದು. ವಿಶ್ವಮಾನವ-ಮನುಜ ಮತ-ವಿಶ್ವ ಪಥ ಪರಿಕಲ್ಪನೆಯನ್ನು ದೇಶ ಈಗ ಜರೂರಾಗಿ ಮನನಮಾಡಬೇಕಾಗಿದೆ.ಕುವೆಂಪು ಹೇಳುತ್ತಾರೆ:

‘‘ವಿಶ್ವದ ಎದುರು ಈಗ ಇರುವುದು ಎರಡೇ ದಾರಿಗಳು. ಒಂದು ಸರ್ವನಾಶ:ಇನ್ನೊಂದು ಸರ್ವೋದ್ಧಾರ. ಸರ್ವನಾಶವಾಗುವುದು ಬೇಕಿಲ್ಲವಾದರೆ ವಿಶ್ವಮಾನವರಾಗುವುದೊಂದೇ ನಮಗಿರುವ ದಾರಿ. ನನ್ನ ವಿಶ್ವಮಾನವನ ಪ್ರಜ್ಞೆಯನ್ನು ಪ್ರತಿಪಾದಿಸುವ ಸಂದೇಶವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂಬ ಬಲಾತ್ಕಾರವನ್ನು ನಾನು ವಿರೋಧಿಸುತ್ತೇನೆ. ಆದರೆ ಒಪ್ಪಿಕೊಳ್ಳುವಂತೆ ಜನರ ಮನವೊಲಿಸಲು ಪ್ರಯತ್ನಿಸಬೇಕೆಂದು ಸೂಚಿಸುತ್ತೇನೆ. ಬಲಾತ್ಕಾರದ ಪ್ರಯತ್ನಗಳು ಗುಂಪುಗಾರಿಕೆಗೆ ಎಡೆಮಾಡುತ್ತವೆ. ಈವರೆಗೆ ಮತಗಳೆಲ್ಲ ಹಾಳಾದುದೇ ಈ ಗುಂಪುಗಾರಿಕೆಯಿಂದ. ನನ್ನ ಸಂದೇಶಕ್ಕೂ ಅಂಥ ಸ್ಥಿತಿ ಬರಬಾರದು. ಮನುಷ್ಯನ ಇಂದಿನ ನರಳುವಿಕೆಗೆ ಕಾರಣವಾದ ಸಂಕುಚಿತ ಪ್ರಜ್ಞೆಯನ್ನು ಮುಂದುವರಿಸಿಕೊಂಡು ಹೋದದ್ದೇ ಆದರೆ ನಾಶ ಕಟ್ಟಿಟ್ಟದ್ದು. ಇದನ್ನು ತಡೆಯಲು ಜಗತ್ತಿನ ಪ್ರತಿಯೊಬ್ಬರೂ ವಿಶ್ವಮಾನವರಾಗಬೇಕು.ಈ ಸಂದೇಶ ನನ್ನ ಜೀವನದಲ್ಲಿ ಶಿಖರಪ್ರಜ್ಞೆಯಾಗಿ ಮೂಡಿ ಬಂದಿದೆ. ಸ್ವತ: ನಾನೇ ಇದರಿಂದ ಉದ್ಧಾರವಾಗಿದ್ದೇನೆ. ಇದು ಯಾವುದಕ್ಕೂ ವಿರೋಧವಲ್ಲ; ಎಲ್ಲದಕ್ಕೂ ಪೂರಕವಾದದ್ದು. ಹಿಂದೆ ಬಂದ, ಇಂದು ಇರುವ ಹಾಗೂ ಮುಂದೆ ಬರಲಿರುವ ಎಲ್ಲ ಚೇತನಗಳಿಗೂ ಬೇಕಾದ ಸಂದೇಶ ಇದು. ಮುಂದಿನ ಶತಮಾನದಲ್ಲಿ ನಾನು ಹುಟ್ಟಿ ಬಂದರೆ ನನಗೇ ಈ ಸಂದೇಶ ಬೇಕಾಗುತ್ತದೆ.’’

ಕುವೆಂಪು ಅವರ ವಿಶ್ವಮಾನವ ಸಂದೇಶ ಪ್ರಕಟಣೆಗಳಲ್ಲಿ ಮೂರು ಭಾಗಗಳಿವೆ: ಒಂದು, ಮನುಜ ಮತ, ವಿಶ್ವಪಥ ಮತ್ತು ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ. ಇನ್ನೊಂದು ಸಪ್ತ ಸೂತ್ರಗಳದ್ದು. ಮೂರನೆಯದು ‘ಅನಿಕೇತನ’ ಎಂಬ ಕುವೆಂಪು ಅವರ ಸುಪ್ರಸಿದ್ಧ ವಿಶ್ವಮಾನವ ಗೀತೆ. ‘‘ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿಸಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ ಸಂಸ್ಕೃತಿ ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು’’

-ಇದು ವಿಶ್ವ ಮಾನವ ಸಂದೇಶದ ಪರಮ ಗುರಿ. ಜಗತ್ತು ಉಳಿದು ಬಾಳಿ ಬದುಕಬೇಕಾದರೆ ಪ್ರಪಂಚದ ಮಕ್ಕಳೆಲ್ಲರೂ ‘ಅನಿಕೇತನ’ರಾಗಬೇಕು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು. ವರ್ಣಾಶ್ರಮವನ್ನು ಸಂಪೂರ್ಣವಾಗಿ ಕೈಬಿಡಬೇಕು. ‘ಮತ’ ತೊಲಗಿ ‘ಅಧ್ಯಾತ್ಮ’ಮಾತ್ರ ವ್ಯಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯ ಬೇಕು:
ಮತ:ಮನುಜ ಮತವಾಗ ಬೇಕು.

ಪಥ:ವಿಶ್ವ ಪಥವಾಗ ಬೇಕು. ರಾಜ್ಯದ ವಿವಿಧೆಡೆಗಳಲ್ಲಿ ಕುವೆಂಪು ಹುಟ್ಟಿದ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಕುವೆಂಪು ಭಾಷಾ ಭಾರತಿ ಡಿ.29-30ರಂದು ಎರಡು ದಿನಗಳ ಸಂವಾದ ಸಮಾವೇಶ ಏರ್ಪಡಿಸಿದೆ. 29ರಿಂದ 31ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಸಮೀಪ ಕಲಾ ಗ್ರಾಮದಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕದ ಅಹೋರಾತ್ರಿ ಪ್ರದರ್ಶನ ನಡೆಯುತ್ತಿದೆ. ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಜ್ಞಾಪೀಠ ಪ್ರಶಸ್ತಿ ಸಂದ ಐವತ್ತು ವರ್ಷಗಳ ಸವಿನೆನಪಿಗಾಗಿ ಅಂಚೆ ಇಲಾಖೆ ವಿಶೆಷ ಅಂಚೆ ಲಕೋಟೆಯನ್ನು ಹೊರತಂದಿರುವುದು ಇನ್ನೊಂದು ವಿಶೇಷ.

ನಾಡಿನ ಜನತೆ ನಾನಾ ತೆರನಾಗಿ ಕುವೆಂಪು ಹುಟ್ಟು ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಕ್ರಿಯಾಸಮಿತಿ ಡಿ.29ರಂದು ರಾತ್ರಿ ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ‘ಸ್ಮಶಾನ ಕವಿಗೋಷ್ಠಿ’ ನಡೆಸುವ ಮೂಲಕ ಕುವೆಂಪು ಜನ್ಮ ದಿನೋತ್ಸವವನ್ನು ಆಚರಿಸಿದೆ. ‘ಸ್ಮಶಾನ ಕುರುಕ್ಷೇತ್ರಂ’ ಕುವೆಂಪು ಅವರ ಒಂದು ನಾಟಕ. ‘‘ಸ್ವತಂತ್ರ ಭಾರತ ರಂಗಂ...ಸರ್ವಪ್ರಜಾಪ್ರಭುತ್ವಂ...ಸರ್ವಸಮತ್ವಂ..ಜಗತ್ ಕಲ್ಯಾಣಂ’’ ಎಂಬ ಕವಿಯ ಆಶಯದೊಂದಿಗೆ ಮುಕ್ತಾಯಗೊಳ್ಳುತ್ತದೆ. ಕವಿಯ ಹುಟ್ಟು ಹಬ್ಬವನ್ನು ಸ್ಮಶಾನದಲ್ಲಿ ಆಚರಿಸುವ ಮೂಲಕ ಕವಿಯ ‘ಸರ್ವಸಮತ್ವಂ’ಆಶಯವನ್ನು ಇಂದಿನ ಪ್ರಭುತ್ವಕ್ಕೆ ಮನವರಿಕೆ ಮಾಡಿಕೊಡುವುದೇ ಕನ್ನಡ ಕ್ರಿಯಾ ಸಮಿತಿಯ ಉದ್ದೇಶವಿದ್ದೀತು. ಇರಲಿ, ಈ ಎಲ್ಲ ಆಚರಣೆಗಳ ಮಧ್ಯೆ ವಿಶ್ವಮಾನವ ಸಂದೇಶ ಪಾಲನೆ ಕುರಿತೂ ನಾಡು ಕಾರ್ಯಪ್ರವೃತ್ತವಾದಲ್ಲಿ ಇದಕ್ಕೆಲ್ಲ ಒಂದು ಅರ್ಥ ಪ್ರಾಪ್ತವಾದೀತು 

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News