ಪ್ರಧಾನಿ ಮೋದಿ ಬಾಯಲ್ಲಿ ಮಹಾದಾಯಿ ಬಾತ್ ಬರಲಿ: ದೊಡ್ಡರಂಗೇಗೌಡ

Update: 2017-12-31 12:24 GMT

ಬೆಂಗಳೂರು, ಡಿ.31: ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಮನ್ ಕಿ ಬಾತ್’ ಎಷ್ಟೋ ಮುಖ್ಯವೋ, ಕರ್ನಾಟಕ ರಾಜ್ಯದ ಮಹಾದಾಯಿ ನದಿ ನೀರು ಹಂಚಿಕೆ ವಿವಾದವೋ ಅಷ್ಟೇ ಮುಖ್ಯ. ಹೀಗಾಗಿ, ಅವರು ‘ಮಹಾದಾಯಿ ಬಾತ್’ ಬಗ್ಗೆಯೂ ಆಲೋಚಿಸಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಸಾಹಿತಿ ದೊಡ್ಡರಂಗೇಗೌಡ ಸಲಹೆ ನೀಡಿದ್ದಾರೆ.

ರವಿವಾರ ನಗರದ ಪುರಭವನದ ಮುಂಭಾಗ ಬೆಂಗಳೂರು ನಗರ ಜಿಲ್ಲಾ ಕಸಾಪ ಮತ್ತು ಕರ್ನಾಟಕ ಕೈಗಾರಿಕಾ-ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಸದಸ್ಯರು ‘ಮಹಾದಾಯಿ' ರಾಜಕೀಯ ಬಿಡಿ, ರೈತರಿಗೆ ಕುಡಿಯುವ ನೀರು ಕೊಡಿ’ಎಂದು ಆಗ್ರಹಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಡಿದರು.

ಪ್ರಧಾನಿ ಮೋದಿ ಮನ್ ಕಿ ಬಾತ್ ಹೇಳುತ್ತಾರೆ. ಅದೇ ರೀತಿ, ಮಹಾದಾಯಿ ಬಾತ್, ದಿಲ್ ಕೀ ಬಾತ್, ಜಲ್(ನೀರು) ಕೀ ಬಾತ್‌ಗೂ ಆದ್ಯತೆ ನೀಡಬೇಕು. ಅಲ್ಲದೆ, ಕುಡಿಯುವ ನೀರು ನೀಡುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಅವರ ಮಧ್ಯಸ್ಥಿಕೆ ಮುಖ್ಯವಾಗಿದ್ದು, ಇದು ಪ್ರಜಾಧರ್ಮ ಎಂದರು.

ಗೋವಾ ಸಿಎಂಗೆ ತಲೆಕೆಟ್ಟಿದೆ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗದೆ ತಲೆಕೆಟ್ಟಂತೆ ಮಾತನಾಡುತ್ತಿದ್ದಾರೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಾಗ್ದಾಳಿ ನಡೆಸಿದರು.

ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಿಕೊಳ್ಳಬೇಕೆಂದು ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸೌಹಾರ್ದಯುತ ಸಭೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಗೋವಾ ಸಿಎಂ ಮನೋಹರ್ ಪರಿಕ್ಕರ್, ಕಾಂಗ್ರೆಸ್ ಸರಕಾರದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದಿರುವುದು ಸಲ್ಲ. ಅಲ್ಲದೆ, ಅವರು ತಲೆಕೆಟ್ಟು ಮಾತನಾಡಿದ್ದಾರೆ ಎಂದು ಹೇಳಿದರು.

 ಮಹಾದಾಯಿ ಹೋರಾಟಗಾರರು ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಅವರಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ, ಮುಂದೆ ಬಿಜೆಪಿ ನಾಯಕರಿಗೆ ಉತ್ತರ ಕರ್ನಾಟಕದ ಜನತೆ ಪಾಠ ಕಲಿಸಲಿದ್ದು, ಕೊಟ್ಟ ಮಾತು, ಭರವಸೆ ಈಡೇರಿಸಿದವರಿಗೆ ಉತ್ತಮ ಉದಾಹರಣೆ ಆಗಲಿದ್ದಾರೆ ಎಂದು ದೊರೆಸ್ವಾಮಿ ನುಡಿದರು.

ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಮಹಾದಾಯಿ ನದಿ ನೀರು ನಮಗೆ ನೀಡಿಲ್ಲ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ. ಅಲ್ಲದೆ, ಅಂತಾರಾಷ್ಟ್ರೀಯ ಜಲ ನೀತಿಯಲ್ಲಿಯೇ ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಇನ್ನು ಈ ಬಗ್ಗೆ ಆಡಳಿತ ನಡೆಸುವ ಸರಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನುಡಿದರು.

ಮಹಾದಾಯಿ ನದಿ ನೀರು ವ್ಯರ್ಥವಾಗಿ ಅರಬ್ಬೀ ಸಮುದ್ರ ಸೇರುತ್ತಿದೆ. ಆದರೆ, ನಮಗೆ ಕುಡಿಯುವ ನೀರಿಗಾಗಿ ಏಳು ಟಿಎಂಸಿ ನೀರು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರಧಾನ ನರೇಂದ್ರ ಮೋದಿ ಅವರು, ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸೌಹಾರ್ದಯುತ ಸಭೆ ನಡೆಸಿ ಈ ವಿವಾದ ಬಗೆಹರಿಸಬೇಕು.ಈ ಸಂಬಂಧ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಗುವುದೆಂದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಬೆಂ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಸಾಹಿತಿಗಳಾದ ಡಾ.ಬೈರಮಂಗಲ ರಾಮೇಗೌಡ, ಕೋ. ವೆಂ. ರಾಮಕೃಷ್ಣೇಗೌಡ ಹಾಗೂ ಹೋರಾಟಗಾರದ ವ.ಚ.ಚನ್ನೇಗೌಡ, ಟಿ.ತಿಮ್ಮೇಶ್, ಜಗದೀಶರೆಡ್ಡಿ ಹಾಜರಿದ್ದರು.

‘ಜಾಣ ಕಿವುಡು ಬಿಡಿ’

ಎರಡೂವರೆ ವರ್ಷದ ಕಾಲ ಗದಗ, ಬೆಳಗಾವಿ , ಧಾರವಾಡ ಜನ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ.ಆದರೆ, ಪ್ರಧಾನಿ ನರೇಂದ್ರಿ ಮೋದಿ ಜಾಣ ಕಿವುಡು ಬಿಟ್ಟು, ಈ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆವಹಿಸಬೇಕು’

-ದೊಡ್ಡರಂಗೇಗೌಡ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News