ಭವಿಷ್ಯತ್ತಿನ ಕನ್ನಡ ಜನತೆಯ ಹಿತದೃಷ್ಟಿಯಿಂದ ಹೊರನಾಡು ಕನ್ನಡ ಸಂಸ್ಕೃತಿ ಪ್ರಾಧಿಕಾರ ರಚನೆಯಾಗಲಿ: ಡಾ.ಅರವಿಂದ ಮಾಲಗತ್ತಿ

Update: 2017-12-31 12:33 GMT

ಬೆಂಗಳೂರು, ಡಿ.31: ಭವಿಷ್ಯದಲ್ಲಿ ಕನ್ನಡದ ಜನತೆ ಹಾಗೂ ಭಾಷೆ ಮತ್ತಷ್ಟು ಭದ್ರವಾಗಿ ನೆಲೆಯೂರಬೇಕಾದರೆ ‘ಹೊರನಾಡು ಕನ್ನಡ ಸಂಸ್ಕೃತಿ ಪ್ರಾಧಿಕಾರ’ವನ್ನು ರಚಿಸಿ, ಕನ್ನಡದ ತಾತ್ವಿಕ ನೆಲಗಟ್ಟುಗಳನ್ನು ಇತರೆ ಭಾಷೆಯ ಜನರಿಗೂ ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದರು. ರವಿವಾರ ಕನ್ನಡ ಜನಶಕ್ತಿ ಕೇಂದ್ರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕರ್ನಾಟಕ ಏಕೀಕರಣ ವಜ್ರ ಮಹೋತ್ಸವ ವರ್ಷಾಚರಣೆಯ ಸಮಾರೋಪ ಸಮಾರಂಭ ಹಾಗೂ ಡಾ.ಸಂತೋಷ್ ಹಾನಗಲ್‌ರವರ ‘ಏಕೀಕರಣ ಶಿಲ್ಪಿಗಳು’ ಕೃತಿಯಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇವತ್ತು ಕನ್ನಡದ ಜನತೆ ರಾಜ್ಯದಲ್ಲಿ ಮಾತ್ರ ನೆಲೆಸಿಲ್ಲ. ಉದ್ಯೋಗ ಸೇರಿದಂತೆ ಅನೇಕ ಕಾರಣಗಳಿಗಾಗಿ ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ ಹರಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡ ಜನತೆಯ ಪ್ರತಿನಿಧಿಯಾಗಿ ಹೊರನಾಡು ಕನ್ನಡ ಸಂಸ್ಕೃತಿ ಪ್ರಾಧಿಕಾರ ರಚಿಸಬೇಕಾದ ಅಗತ್ಯವಿದೆ. ಹಾಗೂ ಇತರೆ ಭಾಷೆಯ ಜನತೆಗೆ ಕನ್ನಡ ಭಾಷೆಯ ಕುರಿತು ಮಾಹಿತಿ, ಅರಿವು ಮೂಡಿಸುವಂತಹ ಕೆಲಸಗಳಾಗಬೇಕು ಎಂದು ಅವರು ಹೇಳಿದರು.

ಅನ್ಯಪರಿಭಾಷಿಕ ಪದಗಳು ಬೇಡ: ಸಾವಿರಾರು ಮಂದಿ ತ್ಯಾಗ ಬಲಿದಾನದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ.ಇದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು. ಹೀಗಾಗಿ ಉತ್ತರ ಕರ್ನಾಟಕ ಕೆಲವು ಭಾಗಗಳಿಗೆ ‘ಕಸ್ತೂರಿ ಕರ್ನಾಟ’, ‘ಬನವಾಸಿ ಕರ್ನಾಟಕ’ ಸೇರಿದಂತೆ ಮತ್ತಿತರ ಹೆಸರುಗಳನ್ನು ಇಡುವಂತೆ ಕೆಲವರು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇಂತಹ ಪದಗಳು ಜಾರಿಗೆ ಬಂದರೆ ಪತ್ಯೇಕ ಕರ್ನಾಟಕಕ್ಕೆ ಹೋರಾಡುತ್ತಿರುವವರಿಗೆ ಪುಷ್ಟಿಕೊಟ್ಟಂತಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಏಕೀರಕಣ ಆದ್ಯಯನ ಅಗತ್ಯ: ಕರ್ನಾಟಕ ಏಕೀಕರಣ ಕುರಿತು ಮೂರು-ನಾಲ್ಕು ಪುಸ್ತಕಗಳು ಹೊರಬಂದಿವೆ. ಆ ಪುಸ್ತಕಗಳ ಒಟ್ಟು ಸಾರಂಶವು ಏಕೀಕರಣವನ್ನು ಕೇವಲ ಮೇಲ್ಪದರಿನಲ್ಲಿ ನೋಡಿವಿಯೇ ಹೊರತು ತಲಸ್ಪರ್ಶವಾಗಿ ಸಂಶೋಧನೆ ನಡೆಸಿಲ್ಲ. ಇಂತಹ ಪುಸ್ತಕಗಳಿಂದ ಇಂದಿನ ಹಾಗೂ ಮುಂದಿನ ಯುವಜನತೆ ಏಕೀಕರಣ ಕುರಿತ ಸಮಗ್ರ ಮಾಹಿತಿ ಸಿಗಲಾರದು ಎಂದು ಅವರು ವಿಷಾಧಿಸಿದರು.

ಏಕೀಕರಣ ಹೋರಟದ ಸಂದರ್ಭದಲ್ಲಿ ತಲೆದೂರಿದ್ದ ಭಿನ್ನಾಭಿಪ್ರಾಯಗಳು ದಾಖಲಾಗಬೇಕು. ಮುಂಬೈ ಕರ್ನಾಟಕ ಹಾಗೂ ಕೊಡಗು ಭಾಗಗಳು ಕರ್ನಾಟಕ ಸೇರುವ ಸಂದರ್ಭದಲ್ಲಿ ಯಾಕೆ ವಿರೋಧ ವ್ಯಕ್ತಪಡಿಸಿದವು ಎಂಬುದರ ಕುರಿತು ಚರ್ಚೆಗಳು ನಡೆದು ದಾಖಲಾಗಬೇಕು. ಇಂತಹ ಭಿನ್ನಾಭಿಪ್ರಾಯಗಳನ್ನು ನಾವು ಅರ್ಥ ಮಾಡಿಕೊಂಡು ಬಗೆಹರಿಸುವಂತಾದರೆ ಭವಿಷ್ಯದಲ್ಲಿ ಅಖಾಂಡ ಕರ್ನಾಟಕವನ್ನು ಭದ್ರವಾಗಿ ಕಟ್ಟಲು ಸಹಾಯವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹೋರಾಟಗಾರ ಮಾಜಿ ಶಾಸಕ ಕೋಣಂದೂರು ಲಿಂಗಪ್ಪರಿಗೆ ‘ಕನ್ನಡ ಅಭಿಮಾನಧನರು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಸ್ವಾಮೀಜಿ , ಲೇಖಕ ಡಾ.ಸಂತೋಷ ಹಾನಗಲ್ಲ ಹಾಗೂ ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ. ರಾಮೇಗೌಡ ಮತ್ತಿತರರಿದ್ದರು.

‘ಏಕೀಕರಣ ಸಂದರ್ಭದಲ್ಲಿ ಹೋರಾಡಿದ ನೂರಾರು ಮಂದಿ ತ್ಯಾಗ-ಪರಿಶ್ರಮಗಳು ದಾಖಲೇ ಆಗಿಲ್ಲ. ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿರುವ ಸಂದರ್ಭದಲ್ಲಿ ರಮ್ಜಾನ್ ಸಾಹೇಬ ಎಂಬ ಕನ್ನಡಪರ ಹೋರಾಟಗಾರನ ತ್ಯಾಗ-ಪರಿಶ್ರಮ ಅವಿಸ್ಮರಣೀಯ. ಇವರ ಹೋರಾಟದಿಂದ ರೋಸಿಹೋಗಿದ್ದ ಆಂಧ್ರದ ಕೆಲವು ದುಷ್ಟರು ಇವರ ಮುಖಕ್ಕೆ ಆಸಿಡ್ ಹಾಕಿ ಕೊಲೆ ಮಾಡಿದರು. ಇಂತಹ ನೂರಾರು ಮಂದಿಯ ತ್ಯಾಗದ ಬದುಕುಗಳು ಸಂಗ್ರಹವಾಗಬೇಕಾದ ಅಗತ್ಯ’

-ಡಾ.ಅರವಿಂದ ಮಾಲಗತಿ್ತ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News