ಕನ್ನಡದ ಹೋರಾಟವೆಂಬುದು ನಿರಂತರ ಪ್ರಕ್ರಿಯೆ: ಪ್ರೊ.ಚಂದ್ರಶೇಖರ ಪಾಟೀಲ

Update: 2017-12-31 12:41 GMT

ಬೆಂಗಳೂರು, ಡಿ.31: ಕನ್ನಡಪರ ಕೆಲಸ ಒಂದು ಚಳವಳಿ, ಒಂದು ಕ್ರಾಂತಿಯಿಂದ ಮುಗಿಯುವಂತಹದ್ದಲ್ಲ. ಅದು ದಿನನಿತ್ಯದ ಬದುಕಿನಲ್ಲಿ ಹಾಕುಹೊಕ್ಕಾಗಿ, ನಿರಂತರವಾದ ಪ್ರಕ್ರಿಯೆಯಾಗಿರಬೇಕು ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಿಸಿದರು.

 ರವಿವಾರ ಕನ್ನಡ ಜನಶಕ್ತಿ ಕೇಂದ್ರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ವಜ್ರ ಮಹೋತ್ಸವ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲ ಹಾಗೂ ಸಂದರ್ಭಕ್ಕೆ ಅನುಸಾರವಾಗಿ ಕನ್ನಡ ಸಮಸ್ಯೆಗಳು ಉದ್ಬವಿಸುತ್ತಲೇ ಇರುತ್ತದೆ. ಇದನ್ನು ಹೋಗಲಾಡಿಸಲು ಹೋರಾಟವು ನಿರಂತರವಾಗಿ ಚಲನೆಯಲ್ಲಿರಬೇಕು ಎಂದು ತಿಳಿಸಿದರು.

ರಾಷ್ಟ್ರಕವಿ ಕುವೆಂಪು ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು ಎಂದು ಬಯಸಿದ್ದರು. ಆದರೆ, ಸಾವಿರಾರು ವರ್ಷಗಳಿಂದ ರಾಜ್ಯದಲ್ಲಿರುವ ಜಾತಿ, ಧರ್ಮಗಳ ಹೆಸರಿನಲ್ಲಿ ತಾರತಮ್ಯ ಇಂದಿಗೂ ಮುಂದುವರೆದಿದೆ. ಹೀಗಾಗಿ ರಾಜ್ಯವನ್ನು ಶಾಂತಿಯ ನೆಲೆಬೀಡು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ನಿರಂತರವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಅವರು ಆಶಿಸಿದರು.

ದೇಶಕ್ಕಾಗಿ-ರಾಜ್ಯಕ್ಕಾಗಿ ಹೋರಾಟ ಮಾಡುವವರೆ ಒಂದು ಪಂಗಡವಾದರೆ, ಆ ಹೋರಾಟದ ಇತಿಹಾಸವನ್ನು ದಾಖಲಿಸುವವರೆ ಮೊತ್ತೊಂದು ಪಂಗಡವಾಗಿದೆ. ಹೀಗಾಗಿ ದೇಶದ ಇತಿಹಾಸ ವಾಸ್ತುನಿಷ್ಟವಾಗಿ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ಇತಿಹಾಸವನ್ನು ಪುನರ್ ರಚಿಸಿ, ನಿಜವಾದ ಹೋರಾಟಗಾರರ ಇತಿಹಾಸವನ್ನು ದಾಖಲಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.

  ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ರಾಜ್ಯದ ಏಕೀಕರಣಕ್ಕೆ ಅನೇಕ ಮಹನೀಯರು ತಮ್ಮ ಪ್ರಾಣಗಳನ್ನೇ ತ್ಯಾಗ ಮಾಡಿದ್ದಾರೆ. ಇಂತವರ ತ್ಯಾಗದಿಂದಾಗಿ ಕನ್ನಡ ಭಾಷೆ ಹಾಗೂ ಕನ್ನಡದ ಜನತೆ ಅಖಾಂಡವಾಗಿ ಉಳಿಯಲು ಸಾಧ್ಯವಾಯ್ತು. ಹೀಗಾಗಿ ಏಕೀಕರಣದ ಸಂದರ್ಭವನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News