ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳುತ್ತಿದೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2017-12-31 12:46 GMT

ಬೆಂಗಳೂರು, ಡಿ.31: ಪ್ರಸಕ್ತ ಸಾಹಿತ್ಯ ಕ್ಷೇತ್ರದಲ್ಲಿ ಅಲೆಮಾರಿಗಳು, ದಲಿತ- ಹಿಂದುಳಿದ ಸಮುದಾಯದವರು ಬರವಣಿಗೆಯಲ್ಲಿ ತೊಡಗಿದ್ದಾರೆ. ಇವರ ಸಂವೇದನೆಗಳು ಹೊಸದಾಗಿದ್ದರೂ, ವಾಸ್ತವಕ್ಕೆ ಹತ್ತಿರವಾಗಿವೆ. ಹೀಗಾಗಿ, ಡಿಜಿಟಲ್ ತಂತ್ರಜ್ಞಾನದ ಅಬ್ಬರದ ನಡುವೆ ಸಾಹಿತ್ಯ ಕ್ಷೇತ್ರ ಗುಣಾತ್ಮಕವಾಗಿ ಶ್ರೀಮಂತಗೊಳ್ಳುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

 ರವಿವಾರ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ನಿವೇದಿತ ಪ್ರಕಾಶನದಿಂದ ಆಯೋಜಿಸಿದ್ದ ಪಾದಗಟ್ಟಿ-ಕಥಾ ಸಂಕಲನ, ಟೈರ್ಸಾಮಿ-ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಕನ್ನಡ ಸಾಹಿತ್ಯದ ಬರವಣಿಗೆ ಕುರಿತಂತೆ ಕೆಲವರು ನಿರ್ಲಕ್ಷ ಮಾತನಾಡುತ್ತಾರೆ. ಆದರೆ, ಅಲಕ್ಷಿತ ಸಮುದಾಯದ ಯುವಕರು ಸಾಹಿತ್ಯ ಲೋಕದಲ್ಲಿ ತೊಡಗಿಸಿಕೊಂಡಿರುವುದರಿಂದ ಕತೆ, ಕಾವ್ಯಗಳು ವಿಭಿನ್ನ ರೀತಿಯ ಪ್ರಕಾರಗಳಲ್ಲಿ ಅದ್ಭುತವಾಗಿ ಮೂಡಿಬರುತ್ತಿವೆ ಎಂದು ನುಡಿದರು.

 ಬಂಡಾಯದ ಕಾಲಘಟ್ಟದಲ್ಲಿ ಗುಣಾತ್ಮಕ ಸಾಹಿತ್ಯಗಳು ಎಷ್ಟರಮಟ್ಟಿಗೆ  ಹೊರ ಬಂದವು ಎಂಬುದನ್ನು ನಾವು ಆತ್ಮ ವಿಮರ್ಶೆ ಮಾಡಿ ನೋಡಬೇಕು. ಅದಕ್ಕಿಂತ ಮೊದಲು ನವ್ಯ ಕಾವ್ಯದೊಳಗೆ ವ್ಯಕ್ತಿ ಕೇಂದ್ರಿತ ಬದುಕಿನ ಸಾಮಾಜಿಕ ಸಮಸ್ಯೆಗಳನ್ನು ವ್ಯಾಪಕ ಪ್ರಜ್ಞೆಯಿಂದ ಹೇಗೆ ಅವಲೋಕಿಸಿ ನೋಡಿದ್ದೇವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಎರಡು ಕಾಲಘಟ್ಟದ ನಂತರ ನವೋದಯ ಕಾಲಘಟ್ಟ ದಾಟಿದ ನಂತರ ಬಂದ ಕಾದಂಬರಿ ಪ್ರಕಾರಗಳ ವಿಸ್ತರಿಸಿ, ಮುಂದುವರೆಸಿದ ರೀತಿಯೊಳಗೆ ಇತ್ತೀಚಿನ ಕಥಾ ಜಗತ್ತು ಬೆಳೆಯುತ್ತಿದೆ. ಯುವಕರ ಬರವಣಿಗೆ ಬಗ್ಗೆ ನನಗೆ ಹೆಚ್ಚು ಕುತೂಹಲ, ವಿಸ್ಮಯ, ಹೆಮ್ಮೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಯುವಕರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ, ನಾಡಿದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಬೇಕೆಂದು ಯುವ ಪೀಳಿಗೆಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಪರ್ತಕರ್ತ ಜೋಗಿ, ಲೇಖಕರಾದ ಡಾ.ಎಚ್.ಎಲ್.ಪುಷ್ಪ, ಚೀಮನಹಳ್ಳಿ ರವೆುೀಶ್ ಬಾಬು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News