ರಾಜಕೀಯಕ್ಕೆ ಬರಲು ಸಿದ್ಧ: ಪ್ರಕಾಶ್ ರೈ

Update: 2017-12-31 13:51 GMT

ಬೆಂಗಳೂರು, ಡಿ.31: ನಾನು ರಾಜಕೀಯದ ಆಕಾಂಕ್ಷಿಯಲ್ಲ. ಆದರೆ, ಒತ್ತಾಯ ಮಾಡಿದರೆ ರಾಜಕೀಯಕ್ಕೆ ಬರಲು ಸಿದ್ಧ. ಅದಕ್ಕೊಂದು ಜವಾಬ್ದಾರಿ ಇದೆ. ಅದರಿಂದ ನುಣುಚಿಕೊಳ್ಳಲೂ ನಾನು ಇಷ್ಟಪಡುವುದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ.

ರವಿವಾರ ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬೆಂದಕಾಳೂರು ಎಂಬ ಹೆಸರಿದೆ. ಇಲ್ಲಿ ಸಮಾಜದ ಶಾಂತಿ ಕದಡುವವರ ಬೇಳೆ ಬೇಯಲು ಅವಕಾಶ ಕೊಡಬಾರದು. ನಮ್ಮವರಲ್ಲದೆ ಇರುವವರು ಇಲ್ಲಿ ಬಂದು ಆಡಳಿತ ಮಾಡಲು ಅವಕಾಶ ನೀಡಬಾರದು. ನೀವು ಯಾರು ಎಂಬ ಪ್ರಶ್ನೆ ಕೇಳಬೇಕು. ಮನೆ ಮನೆಗೆ ಹೋಗಿ ಶಾಂತಿ ಕದಡುತ್ತಿರುವವರ ಮಾಹಿತಿ ಕೊಟ್ಟು ಅಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ನಾನು ವಿಚಲಿತನಾದೆ. ನನ್ನಲ್ಲಿ ಸಾಕಷ್ಟು ಪರಿವರ್ತನೆಯಾಯಿತು. ಆ ನಂತರದಲ್ಲಿ ನಾನು ನಟನಾಗಿ ಅಲ್ಲದೆ, ದೇಶದ ಪ್ರಜೆಯಾಗಿ ಮಾತನಾಡಲು ಆರಂಭಿಸಿದೆ. ಆದರೆ, ಹಲವರು ನನ್ನ ಬಗ್ಗೆ ಸಾಮಾಜಿಕವಾಗಿ ಮತ್ತು ವೈಯುಕ್ತಿಕವಾಗಿ ಟೀಕೆ ಮಾಡಿದರು. ನನಗೆ ಯಾವುದೇ ಭೇದ-ಭಾವವಿಲ್ಲ. ಜಸ್ಟ್ ಆಸ್ಕಿಂಗ್, ಹ್ಯಾಷ್ ಟ್ಯಾಗ್ ಮೂಲಕ ಹಲವಾರು ಪ್ರಶ್ನೆಗಳನ್ನು ಕೇಳಿದ್ದೇನೆ ಎಂದ ಅವರು, ನಾನು ಯಾವುದೇ ಪಕ್ಷದ ರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜೀವನದಲ್ಲಿ ನನಗೆ ಹಣ, ಯಶಸ್ಸು ಎಲ್ಲಾ ಸಿಕ್ಕಿದೆ. ಆದರೆ, ನನ್ನ ಗುರುಗಳಾದ ಲಂಕೇಶ್, ಕಿರಂ, ತೇಜಸ್ವಿ ಸೇರಿ ಹಲವರ ಒಡನಾಟ ಮನಸಾಕ್ಷಿಯನ್ನು ಬೆಳೆಸಿದೆ. ಹೀಗಾಗಿ, ನಾನು ಸಮಾಜದಲ್ಲಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿ ಬಗ್ಗೆ ಪ್ರಶ್ನಿಸುತ್ತಿದ್ದೆೀನೆ ಎಂದು ಪ್ರಕಾಶ್ ರೈ ತಿಳಿಸಿದರು.

 ಇಂದು ಭಾರತವನ್ನು ಮತೀಯ ರಾಜಕೀಯ ಕಾಡುತ್ತಿದೆ. ಹಿಂದೆ ಒಂದೇ ಧರ್ಮವಿರಬೇಕು ಎಂಬುದು ಹಿಟ್ಲರ್ ಕಾಲದಲ್ಲಿ ನಡೆಯುತ್ತಿತ್ತು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸವಾರ್ಧಿಕಾರ ಪ್ರದರ್ಶಿಸಲಾಗುತ್ತಿದೆ. ಇದರ ವಿರುದ್ಧ ಪ್ರತಿಯೊಬ್ಬರಿಗೂ ಧ್ವನಿ ಎತ್ತಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಪ್ರಜೆಯೂ ಯಾವ ಪತ್ರಿಕೆ, ಟಿವಿ ಮಾಧ್ಯಮ ಯಾವ ಪಕ್ಷದ್ದು ಎಂದು ತೀರ್ಮಾನ ಮಾಡುತ್ತಿದ್ದಾರೆ ಎಂದು ಹೇಳಿದರು.

ಪತ್ರಕರ್ತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದು, ಅನ್ಯಾಯ, ದೌರ್ಜನ್ಯ ಹಾಗೂ ಸವಾರ್ಧಿಕಾರಿ ಆಡಳಿತದ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರ ಧ್ವನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ, ಕಲಾವಿದನಾಗಿ ಸಮಾಜಕ್ಕೆ ನಾನು ಸ್ಪಂದಿಸುತ್ತಿದ್ದೇನೆ. ಅದೇ ರೀತಿಯಲ್ಲಿ ಪ್ರತಿಯೊಬ್ಬರೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News